ಕೈಗಡ ಹಣ ವಾಪಸು ನೀಡದಿದ್ದಕ್ಕೆ ಮನೆಗೆ ಬೀಗ

Published on

ರೋಣ: ಕೈಗಡ ಪಡೆದ ಹಣ ವಾಪಸು ಕೊಡಲು ವಿಳಂಬವಾಗಿದ್ದರಿಂದ ವೃದ್ಧೆಯನ್ನು ಮನೆಯಿಂದ ಹೊರ ಹಾಕಿ ಮನೆಗೆ ಬೀಗ ಜಡಿದ ಘಟನೆ ಪಟ್ಟಣದ ಶಾನಭೋಗರ ಚಾಳದಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ.

ಪಟ್ಟಣದ ಶಾನಭೋಗರ ಚಾಳದ ನಿವಾಸಿ ಉಷಾದೇವಿ ಶಾಂತಸ್ವಾಮಿಮಠ ಎಂಬುವವರು 14 ತಿಂಗಳುಗಳ ಹಿಂದೆ ಅದೇ ಬಡಾವಣೆ ನಿವಾಸಿ ಮೌಲಾಸಾಬ್ ಬೆಟಗೇರಿ ಎಂಬುವರ ಬಳಿ 10 ಸಾವಿರ ರೂಪಾಯಿ ಕೈಗಡ ಪಡೆದುಕೊಂಡಿದ್ದರು. ನಾಲ್ಕು ತಿಂಗಳಲ್ಲಿ ಹಣ ವಾಪಸು ಕೊಡುವುದಾಗಿ ವೃದ್ಧೆ ತಿಳಿಸಿದ್ದರು. ಆದರೆ, 14 ತಿಂಗಳು ಕಳೆದರೂ ಹಣ ವಾಪಸು ಕೊಟ್ಟಿರಲಿಲ್ಲ. ಹಣ ಹೊಂದಿಸಲು ಸಾಧ್ಯವಾಗಿಲ್ಲವಾದ್ದರಿಂದ ಸ್ಪಲ್ಪ ಕಾಲಾವಕಾಶ ಕೊಡಿ ಎಂದು ವೃದ್ಧೆ ಕೇಳಿಕೊಂಡಿದ್ದರು. ಈ ವಿಷಯವಾಗಿ ಮೌಲಾಸಾಬ್ ಮನೆಯವರೂ ಹಾಗೂ ವೃದ್ಧೆ ನಡುವೆ ಹಲವು ಬಾರಿ ವಾಗ್ವಾದ ನಡೆದಿದ್ದು, ಮಂಗಳವಾರ ವೃದ್ಧೆಯ ಮನೆಗೆ ಬೀಗ ಜಡಿದಿದ್ದಾರೆ. ನೊಂದ ವೃದ್ಧೆ ಮೌಲಾಸಾಬ್ ಹಾಗೂ ಮನೆಯವರು ತೊಂದರೆ ನೀಡುತ್ತಿದ್ದಾರೆ ಎಂದು ವೃದ್ಧೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಸಾಲ ನೀಡಿದವರನ್ನು ಠಾಣೆಗೆ ಕರೆಯಿಸಿ ತೊಂದರೆ ನೀಡದಂತೆ ಪಿಎಸ್‌ಐ ಪ್ರಕಾಶ ಬಾಣಕರ ತಾಕೀತು ಮಾಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಪಿಎಸ್‌ಐ, ಒಂದೇ ಓಣೆಯ ಅಕ್ಕಪಕ್ಕದ ಮನೆಯವರು ಇವರಾಗಿದ್ದು, ಕೈಗಡ ಸಾಲವಾಗಿ 10 ಸಾವಿರ ರೂ.ಗಳನ್ನು ಮೌಲಾಸಾಬ್ ಬಳಿ ಉಷಾದೇವಿ ಪಡೆದುಕೊಂಡಿದ್ದಾರೆ. ಸಾಲ ವಾಪಸು ನೀಡದಿದ್ದಕ್ಕೆ ವೃದ್ಧೆ ಮನೆಗೆ ಬೀಗ ಹಾಕಿ ಹಣ ಕೊಡುವಂತೆ ಒತ್ತಾಯಿಸಿದ್ದಾರೆ. ಇದು ಯಾವುದೇ ಬಡ್ಡಿಸಾಲ, ಮೈಕ್ರೋ ಫೈನಾನ್ಸ್ ಪ್ರಕರಣವಲ್ಲ. ಈ ಕುರಿತು ಯಾವುದೇ ಪ್ರಕರಣ ದಾಖಲಾಗಿಲ್ಲ ವೃದ್ಧೆ ಸಹ ದೂರು ನೀಡಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net