

ಶಿವಮೊಗ್ಗ: ಸೊರಬ ತಾಲೂಕಿನ ಶಕುನವಳ್ಳಿ ಗ್ರಾಮದಲ್ಲಿ ಮನೆ ಬೀಗ ಮುರಿದು ಕಳ್ಳತನ ಮಾಡಿದ್ದ ಆರೋಪಿಯನ್ನು ಬಂಧಿಸಿರುವ ಆನವಟ್ಟಿ ಠಾಣಾ ಪೊಲೀಸರು, 8.49 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ವಾಹನ ಜಪ್ತಿ ಮಾಡಿದ್ದಾರೆ.
ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಶ್ರೀಂಗೇರಿ ಗ್ರಾಮದ ಅಬ್ದುಲ್ ಸತ್ತರ್ (27) ಬಂಧಿತ ಆರೋಪಿ. ಜು.25ರಂದು ಮಧ್ಯಾಹ್ನ ಶಕುನಹಳ್ಳಿ ಗ್ರಾಮದ ಶಂಬುಲಿಂಗಪ್ಪ ಅವರ ಮನೆಯಲ್ಲಿ ಕಳ್ಳತನ ಆಗಿತ್ತು. ಮನೆ ಬೀಗ ಹಾಕಿಕೊಂಡು ಜಮೀನು ಕೆಲಸಕ್ಕೆ ಹೋಗಿದ್ದು, ಸಂಜೆ ವಾಪಸ್ ಬಂದು ನೋಡಿದಾಗ ಬೆಡ್‌ರೂಂನಲ್ಲಿದ್ದ ಬೀರುವಿನ ಇಂಟರ್ ಲಾಕನಲ್ಲಿಟ್ಟಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಲಾಗಿತ್ತು. ಈ ಬಗ್ಗೆ ಆನವಟ್ಟಿ ಠಾಣೆಗೆ ಶಂಬುಲಿಂಗಪ್ಪ ದೂರು ನೀಡಿದ್ದರು.
ಸೊರಬ ಸಿಪಿಐ ಎಲ್.ಸಿ.ರಾಜಶೇಖರ್, ಆನವಟ್ಟಿ ಠಾಣೆ ಪಿಎಸ್‌ಐ ಚಂದನ್ ನೇತೃತ್ವದಲ್ಲಿ ಖಚಿತ ಮಾಹಿತಿ ಮೇರೆಗೆ ಅಬ್ದುಲ್ ಸತ್ತರ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾನೆ. ಆರೋಪಿಯಿಂದ 135 ಗ್ರಾಂ ಚಿನ್ನ ಮತ್ತು 200 ಗ್ರಾಂ ಬೆಳ್ಳಿ ಜಪ್ತಿ ಮಾಡಿದ್ದಾರೆ. ಸಿಬ್ಬಂದಿಗಳಾದ ತೋಟಪ್ಪ, ಜಗದೀಶ್, ಆರ್.ಸಿ.ಮಂಜುನಾಥ, ಹರಿಪ್ರಸಾದ್, ಸಂದೀಪ್, ಮಧು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.