

ವಿಜಯವಾಣಿ ಸುದ್ದಿಜಾಲ ಪುತ್ತೂರು ಗ್ರಾಮಾಂತರ
ಹಲವು ವರ್ಷಗಳಿಂದ ಕೆಯ್ಯೂರು ಗ್ರಾಪಂಗೆ ಸೇರಿದ ಬಾಡಿಗೆ ಕೊಠಡಿಯೊಂದರಲ್ಲಿ ತಾಯಿಯೊಂದಿಗೆ ವಾಸ್ತವ್ಯವಿದ್ದ ಅಂಗವಿಕಲೆ ಬೇಬಿ ಎಂಬುವರಿಗೆ ‘ವಾತ್ಸಲ್ಯ’ ಯೋಜನೆಯಡಿ ಸೂರು ನಿರ್ಮಿಸಿಕೊಟ್ಟು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆಕೆಯ ಬಾಳಿಗೆ ಬೆಳಕಾಗಿದೆ.
ಕೆಯ್ಯೂರು ಗ್ರಾಮದ ಮಾಡಾವು ನಿವಾಸಿ ಬೇಬಿ ಅವರ ಬದುಕಿನ ಸಂಕಷ್ಟ ಅರಿತು ಯೋಜನೆಯ ಜ್ಞಾನವಿಕಾಸ ‘ವಾತ್ಸಲ್ಯ’ ಕಾರ್ಯಕ್ರಮದಡಿಯಲ್ಲಿ ಬೊಳಿಕ್ಕಳ ಎಂಬಲ್ಲಿ ನಿರ್ಮಿಸಲಾದ ‘ವಾತ್ಸಲ್ಯ ಮನೆ’ಯ ಹಸ್ತಾಂತರ ಕಾರ್ಯಕ್ರಮ ಸೋಮವಾರ ನಡೆದಿದೆ.
ಕೆಯ್ಯೂರು ದುರ್ಗಾಪರಮೇಶ್ವರಿ-ಮಹಿಷಮರ್ದಿನಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಶಶಿಧರ್ ರಾವ್ ಬೊಳಿಕ್ಕಲ ಕುಟುಂಬಕ್ಕೆ ಮನೆ ಹಸ್ತಾಂತರ ಮಾಡಿದರು. ಅಖಿಲ ಕರ್ನಾಟಕ ಜನಜಾಗೃತಿಯ ದ.ಕ. ಜಿಲ್ಲಾಧ್ಯಕ್ಷ ಪದ್ಮನಾಭ ಶೆಟ್ಟಿ ವಾತ್ಸಲ್ಯ ಮನೆಯ ನಾಮಫಲಕ ಅನಾವರಣ ಮಾಡಿದರು. ಕೆಯ್ಯೂರು ಗ್ರಾ.ಪಂ. ಅಧ್ಯಕ್ಷ ಶರತ್ ಕುಮಾರ್ ಮಾಡಾವು ದೀಪ ಬೆಳಗಿದರು. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ತಾಲೂಕು ಅಧ್ಯಕ್ಷ ಲೋಕೇಶ್ ಹೆಗ್ಡೆ ಕ್ಷೇತ್ರದ ಪ್ರಸಾದ ನೀಡಿದರು.
ಜನಜಾಗೃತಿ ವೇದಿಕೆಯ ಕೆಯ್ಯೂರು ಗ್ರಾಮ ಸಮಿತಿಯ ಅಧ್ಯಕ್ಷ ಅಬ್ದುಲ್ ಖಾದರ್ ಮೇರ್ಲ, ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಉಮೇಶ್ ನಾಯಕ್ ಶುಭ ಹಾರೈಸಿದರು. ವಾತ್ಸಲ್ಯ ಮನೆ ನಿರ್ಮಾಣಕ್ಕೆ ಶ್ರಮಿಸಿದವರನ್ನು ಹಾಗೂ ವಿವಿಧ ವ್ಯವಸ್ಥೆ ಮಾಡಿಕೊಟ್ಟವರನ್ನು ಗೌರವಿಸಲಾಯಿತು. ಜನಜಾಗೃತಿ ವೇದಿಕೆಯ ತಾಲೂಕು ಮಾಜಿ ಅಧ್ಯಕ್ಷ ಮಹಾಬಲ ರೈ ವಳತ್ತಡ್ಕ, ಕೇಂದ್ರ ಒಕ್ಕೂಟ ಸಮಿತಿಯ ತಾಲೂಕು ಅಧ್ಯಕ್ಷ ಉದಯ್ ಕುಮಾರ್, ಜನಜಾಗೃತಿ ವೇದಿಕೆಯ ಒಳಮೊಗ್ರು ವಲಯಾಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರ, ಯೋಜನೆಯ ಒಕ್ಕೂಟದ ಕುಂಬ್ರ ವಲಯಾಧ್ಯಕ್ಷ ಮಾಧವ ರೈ ಕುಂಬ್ರ, ತ್ಯಾಗರಾಜ ಒಕ್ಕೂಟದ ಅಧ್ಯಕ್ಷೆ ಚಂದ್ರಾವತಿ ರೈ ಚಾವಡಿ, ದೇರ್ಲ ಒಕ್ಕೂಟದ ಅಧ್ಯಕ್ಷ ಬೇಬಿ ಪೂಜಾರಿ, ಜನಜಾಗೃತಿ ವೇದಿಕೆಯ ರಾಜೇಶ್ ರೈ ಪರ್ಪುಂಜ, ಕೆಯ್ಯೂರು ಗ್ರಾ.ಪಂ. ಸದಸ್ಯರಾದ ಜಯಂತ ಪೂಜಾರಿ ಕೆಂಗುಡೇಲು ಮತ್ತು ಮೀನಾಕ್ಷಿ ವಿ.ರೈ ಮತ್ತಿತರರು ಇದ್ದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪುತ್ತೂರು ತಾಲೂಕು ಯೋಜನಾಧಿಕಾರಿ ಶಶಿಧರ್ ಎಂ. ಪ್ರಾಸ್ತಾವಿಕವಾಗಿ ಮಾತನಾಡಿದರು. ಯೋಜನೆಯ ವಲಯ ಮೇಲ್ವಿಚಾರಕಿ ಶುಭಾವತಿ ಸ್ವಾಗತಿಸಿದರು. ಜ್ಞಾನ ವಿಕಾಸ ತಾಲೂಕು ಸಮನ್ವಯಾಧಿಕಾರಿ ಕಾವ್ಯಶ್ರೀ ವಂದಿಸಿದರು.