

ಉಪ್ಪಿನಂಗಡಿ: ಪುತ್ತೂರು ತಾಲೂಕು ಬಜತ್ತೂರು ಗ್ರಾಮದ ಕುರ್ತಡ್ಕ ಎಂಬಲ್ಲಿ ಜೋಪಡಿಯಲ್ಲಿ ವಾಸಿಸುತ್ತಿದ್ದ ಅಸಹಾಯಕ ಕುಟುಂಬದ ಸಂಕಷ್ಟಕ್ಕೆ ನೆರವಾದ ವಿಶ್ವ ಹಿಂದು ಪರಿಷತ್ ಕಾಂಚನ ಘಟಕದ ಕಾರ್ಯಕರ್ತರು ನೂತನ ಮನೆ ನಿರ್ಮಿಸಿಕೊಟ್ಟಿದ್ದಾರೆ. ಜುಲೈ 15ರಂದು ಮನೆ ಹಸ್ತಾಂತರ ಕಾರ್ಯಕ್ರಮ ನಡೆಯಲಿದೆ.
ಮನೆಯ ಯಜಮಾನ ಚಂದ್ರ ಅನಾರೋಗ್ಯದಿಂದ ಮನೆಯಲ್ಲೇ ಇದ್ದು, ಮೂವರು ಮಕ್ಕಳ ಸಹಿತ ಕುಟುಂಬದ ನಿರ್ವಹಣೆಯ ಹೊಣೆ ಲಕ್ಷ್ಮೀಯವರದ್ದಾಗಿತ್ತು. ಯಾವುದೇ ಸಂದರ್ಭದಲ್ಲೂ ಮನೆ ಕುಸಿಯುವ ಭೀತಿ ಎದುರಾಗಿತ್ತು. ಈ ಅಸಹಾಯಕ ಕುಟುಂಬದ ಸಂಕಷ್ಟ ಕಂಡ ವಿಶ್ವ ಹಿಂದು ಪರಿಷತ್ ಕಾಂಚನ ಘಟಕದ ಕಾರ್ಯಕರ್ತರು ತಾವೇ ದೇಣಿಗೆ ನೀಡಿ, ಚಂದ್ರ ಕುಟುಂಬಕ್ಕೆ ಸುಸಜ್ಜಿತ ಮನೆ ನಿರ್ಮಿಸಿಕೊಟ್ಟಿದ್ದಾರೆ. ನಿರ್ಮಿಸಿದ ಮನೆಗೆ ಅಭಯ ಎಂದು ನಾಮಕರಣ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ವಿಹಿಂಪ ಬಜರಂಗ ದಳದ ಮುಂದಾಳುಗಳಾದ ಶರಣ್ ಪಂಪ್‌ವೆಲ್, ಮುರಳೀಕೃಷ್ಣ ಹಸಂತಡ್ಕ, ಭರತ್ ಕುಮ್ಡೇಲು ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಬಜರಂಗದಳ ಮುಂದಾಳು ಮಹೇಶ್ ಬಜತ್ತೂರು ತಿಳಿಸಿದ್ದಾರೆ.