

ಸೋಮವಾರಪೇಟೆ: ಕಳೆದ ವರ್ಷ ಮೇ 9ರಂದು ತನ್ನ ಪ್ರಿಯಕರನಿಂದ ಬರ್ಬರವಾಗಿ ಹತ್ಯೆಯಾಗಿದ್ದ ಸೋಮವಾರಪೇಟೆ ತಾಲೂಕಿನ ಸೂರ್ಲಬ್ಬಿ-ಕುಂಬಾರಗಡಿಗೆ ಗ್ರಾಮದ ವಿದ್ಯಾರ್ಥಿನಿ ಮೀನಾ ಕುಟುಂಬಕ್ಕೆ ಶಾಸಕ ಡಾ.ಮಂತರ್‌ಗೌಡ ಹಾಗೂ ಅವರ ಹಿತೈಸಿಗಳು ಮನೆಯೊಂದನ್ನು ನಿರ್ಮಿಸಿಕೊಟ್ಟು ಮಾನವೀಯತೆ ಮೆರೆದಿದ್ದಾರೆ.
ಸೋಮವಾರಪೇಟೆ ತಾಲೂಕಿನ ಕುಗ್ರಾಮವೆಂದೇ ಕರೆಸಿಕೊಳ್ಳುವ ಕುಂಬಾರಗಡಿಗೆ ಗ್ರಾಮದಲ್ಲಿ ಸುಮಾರು 8ಲಕ್ಷ ರೂ. ವೆಚ್ಚದಲ್ಲಿ ಮನೆ ನಿರ್ಮಾಣವಾಗಿದ್ದು ಸೋಮವಾರ ಶಾಸಕರು ಹಸ್ತಾಂತರ ಮಾಡಲಿದ್ದಾರೆ.
ಮೀನಾ ಸೇರಿದಂತೆ ತಂದೆ ಉದಿಯಂಡ ಸುಬ್ರಮಣಿ, ತಾಯಿ ಜಾನಕಿ ಮತ್ತು ಸಹೋದರಿಯರು ಪ್ಲಾಸ್ಟಿಕ್ ಹೊದಿಕೆಯ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ. ವಿದ್ಯಾರ್ಥಿನಿ ಮೀನಾ 2 ಕಿ.ಮಿ. ಕಾಡು ರಸ್ತೆಯಲ್ಲಿ ಪ್ರತಿನಿತ್ಯ ಕಾಲ್ನಡಿಗೆಯಲ್ಲಿ ಸೂರ್ಲಬ್ಬಿ ಸರ್ಕಾರಿ ಪ್ರೌಢಶಾಲೆಗೆ ಹೋಗುತ್ತಿದ್ದಳು. ಮೇ.9ರಂದು ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾಗಿ ಸೂರ್ಲಬ್ಬಿ ಸರ್ಕಾರಿ ಶಾಲೆಗೆ ಶೇ.100ರಷ್ಟು ಫಲಿತಾಂಶ ಬಂದಿತ್ತು. ಶಾಲೆಯಲ್ಲಿ ಹಬ್ಬದ ವಾತಾವರಣವಿತ್ತು. ಶಾಲೆಯಲ್ಲಿ ಕಲಿಯುತ್ತಿದ್ದ ವಿದ್ಯಾರ್ಥಿನಿ ಮೀನಾ ಪಾಸಾಗಿದ್ದಳು.
ಶಿಕ್ಷಕರೊಂದಿಗೆ ಸಂಭ್ರಮಿಸಿ ಸಂಜೆ ಮನೆಗೆ ಹೋಗಿ ತಮ್ಮ ಪೋಷಕರೊಂದಿಗೆ ವಿದ್ಯಾಭ್ಯಾಸ ಮುಂದುವರಿಸುವ ಇಂಗಿತ ವ್ಯಕ್ತಪಡಿಸಿದ್ದಳು. ವಿದ್ಯಾರ್ಥಿನಿ ಮೀನಾ ನಿಶ್ಚಿತಾರ್ಥ ಅದೇ ಗ್ರಾಮದ ಓಂಕಾರಪ್ಪ ಅಲಿಯಾಸ್ ಪ್ರಕಾಶ್‌ನೊಂದಿಗೆ ನಡೆದು ಮದುವೆಯ ದಿನಾಂಕವೂ ನಿರ್ಧಾರವಾಗಿತ್ತು. ಮೀನಾ ವಿದ್ಯಾಭ್ಯಾಸ ಮುಂದುವರಿಸುವ ವಿಷಯ ತಿಳಿದ ಓಂಕಾರಪ್ಪ, ಮದ್ಯ ಸೇವಿಸಿ ಮೀನಾಳ ಮನೆಗೆ ಬಂದವನೆ ಗಲಾಟೆ ಎಬ್ಬಿಸಿ, ಮೀನಾಳನ್ನು ಮನೆಯಿಂದ ಹೊರಗೆ ಹೊತ್ತೊಯ್ದು ಭೀಕರವಾಗಿ ಕೊಚ್ಚಿ ಕೊಲೆ ಮಾಡಿದ್ದ.
ನಂತರ ಗೃಹ ಸಚಿವ ಡಾ.ಜಿ.ಪರಮೇಶ್ವರ ಹಾಗೂ ಶಾಸಕ ಡಾ.ಮಂತರ್‌ಗೌಡ ಅವರು ಮೃತಪಟ್ಟ ಮೀನಾ ಅವರ ಮನೆಗೆ ತೆರಳಿ ಸಾಂತ್ವನ ಹೇಳಿದರು. ಸರ್ಕಾರದ ವತಿಯಿಂದ ಅನೇಕ ಭರವಸೆಗಳನ್ನು ನೀಡಲಾಯಿತು.
ವಿದ್ಯುತ್ ಇಲ್ಲದೆ ಮುರುಕಲು ಮನೆಯಲ್ಲಿ ವಾಸ ಮಾಡುತ್ತಿದ್ದ ಮೀನಾ ಪಾಲಕರ ಸಂಕಷ್ಟಕ್ಕೆ ಮರುಗಿದ ಶಾಸಕರು ಮತ್ತು ಅವರ ಹಿತೈಸಿಗಳು ಮನೆ ಕಟ್ಟಿಸಿಕೊಡುವ ತೀರ್ಮಾನ ಮಾಡಿದ್ದರು. ಅವರ ಮಾತಿನಂತೆ ಅವರ ಜಾಗದಲ್ಲೇ ಮನೆ ನಿರ್ಮಿಸಿಕೊಟ್ಟಿದ್ದಾರೆ. ಕೊಟ್ಟ ಭರವಸೆಯನ್ನು ಈಡೇರಿಸಿದ್ದಾರೆ.
ವಿದ್ಯಾರ್ಥಿನಿ ಮೀನಾ ಕೊಲೆ ನಡೆದ ವಿಷಯ ಕೇಳಿ ನಾವೆಲ್ಲರೂ ಕಂಬನಿ ಮಿಡಿದಿದ್ದೆವು. ಕುಟುಂಬದ ಬಡತನ ನೋಡಿದ ತಕ್ಷಣ ಗೊತ್ತಾಯಿತು. ಕುಂಬಾರಗಡಿಗೆ ಗ್ರಾಮದಲ್ಲಿ ಅತಿ ಹೆಚ್ಚು ಮಳೆ ಸುರಿಯುತ್ತದೆ. ಅವರ ವಾಸದ ಮನೆ ಮಳೆಗಾಲದಲ್ಲಿ ಸೋರುತ್ತಿತ್ತು. ಅವರ ವಾಸವಿದ್ದ ಮನೆಯ ಜಾಗಕ್ಕೆ ಹಕ್ಕಪತ್ರಗಳಿರಲಿಲ್ಲ. ನಿಯಮದಂತೆ ಸರ್ಕಾರದಿಂದ ಮನೆ ನಿರ್ಮಿಸಿಕೊಡಲು ಸಾಧ್ಯವಾಗಲಿಲ್ಲ. ನಾವೆಲ್ಲಾ ಸ್ನೇಹಿತರು ಸೇರಿ ಮನೆ ನಿರ್ಮಿಸಿಕೊಟ್ಟಿದ್ದೇವೆ. ಡಾ.ಮಂತರ್‌ಗೌಡ, ಶಾಸಕರು, ಸೋಮವಾರಪೇಟೆ.