

ಮಡಿಕೇರಿ: ಕೆದಕಲ್ ಗ್ರಾ.ಪಂ ವ್ಯಾಪ್ತಿಯ ಹಾಲೇರಿ ಗ್ರಾಮದಲ್ಲಿ ಪ್ರಸ್ತುತ ವರ್ಷದ ಆಗಸ್ಟ್ ತಿಂಗಳ ಮಳೆಯಿಂದ ಮನೆ ನೆಲಸಮವಾಗಿದ್ದು, ಪುನರ್ ವಸತಿ ಕಲ್ಪಿಸುವಂತೆ ಕೋರಿ ಸ್ಥಳೀಯ ನಿವಾಸಿ ಬಿ.ಜೆ.ವಿಶಾಲಾಕ್ಷಿ ಅವರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಕಳೆದ ೩೬ ವರ್ಷಗಳಿಂದ ಹಾಲೇರಿ ತಾತಿಬಾಣೆಯಲ್ಲಿ ವಾಸವಿದ್ದ ಮನೆ ೨೦೧೮ರ ಪ್ರಾಕೃತಿಕ ವಿಕೋಪದ ಸಂದರ್ಭ ಸಂಪೂರ್ಣ ಬಿರುಕು ಬಿಟ್ಟಿತ್ತು. ಈ ಮನೆ ವಾಸಕ್ಕೆ ಯೋಗ್ಯವಾಗಿರುವುದಿಲ್ಲವೆಂದು ಅಧಿಕಾರಿಗಳು ತಿಳಿಸಿದ ಹಿನ್ನೆಲೆ ಮಡಿಕೇರಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದೆವು. ನಂತರ ಪುನರ್ ವಸತಿ ಕಲ್ಪಿಸುವಂತೆ ಕೋರಿ ೨೦೧೮ ರಿಂದ ಅರ್ಜಿಗಳನ್ನು ಸಲ್ಲಿಸುತ್ತಾ ಬಂದಿದ್ದರೂ ಯಾವುದೇ ಸ್ಪಂದನೆ ದೊರೆತ್ತಿರಲಿಲ್ಲ.
ಜಂಬೂರುಬಾಣೆಯಲ್ಲಿ ೨ನೇ ಮನೆ ಹಂಚಿಕೆ ಪಟ್ಟಿಯಲ್ಲಿ ನನ್ನ ಪತಿ ಬಿ.ಪಿ.ಜನಾರ್ಧನ ಅವರ ಹೆಸರಿನಲ್ಲಿ ಮನೆ ನೋಂದಾವಣಿಗೊಂಡಿತ್ತು ಮತ್ತು ಮನೆ ಸಂಖ್ಯೆಯನ್ನು ಕೂಡ ನೀಡಲಾಗಿತ್ತು. ಆದರೆ, ಇಲ್ಲಿಯವರೆಗೆ ನಮಗೆ ಮನೆ ದೊರೆತ್ತಿರುವುದಿಲ್ಲ ಎಂದು ಮನವಿಯಲ್ಲಿ ಗಮನ ಸೆಳೆದಿದ್ದಾರೆ.
ನಾಲ್ವರು ಹೆಣ್ಣು ಮಕ್ಕಳನ್ನು ಮದುವೆ ಮಾಡಿ ಕೊಡಲಾಗಿದೆ. ನಾನು ಹಾಗೂ ಪತಿ ಬಾಡಿಗೆ ಮನೆಯಲ್ಲಿ ವಾಸವಿದ್ದು, ಬಡವರಾದ ನಮಗೆ ಬಾಡಿಗೆ ಪಾವತಿಸಲು ಸಾಧ್ಯವಾಗುತ್ತಿಲ್ಲ. ಇದೀಗ ಕೆಲವೇ ದಿನಗಳ ಹಿಂದೆ ಹಾಲೇರಿ ಪೈಸಾರಿಯ ಹಳೆಯ ಮನೆ ಮಳೆಯಿಂದ ನೆಲಸಮಗೊಂಡ ಕಾರಣ ನಮಗೆ ಆಶ್ರಯ ಇಲ್ಲದಾಗಿದೆ. ಸುಂಟಿಕೊಪ್ಪ ಕಂದಾಯ ಪರಿವೀಕ್ಷಕರಿಗೆ ಮಾಹಿತಿ ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.
ಕಳೆದ ೭ ವರ್ಷಗಳಿಂದ ಸರ್ಕಾರದ ಮನೆಗಾಗಿ ಪ್ರಯತ್ನ ಪಡುತ್ತಿದ್ದರೂ ಯಾವುದೇ ಸ್ಪಂದನೆ ದೊರೆತ್ತಿಲ್ಲ. ಆದ್ದರಿಂದ ಕಂದಾಯ ಅಧಿಕಾರಿಗಳು ನೆಲಸಮಗೊಂಡಿರುವ ನಮ್ಮ ಮನೆಯನ್ನು ಖುದ್ದು ಪರಿಶೀಲಿಸಬೇಕು. ನಾನು ನೀಡಿರುವ ದಾಖಲೆಗಳನ್ನು ಪರಿಗಣಿಸಿ ಸೋಮವಾರಪೇಟೆ ತಾಲ್ಲೂಕಿನ ಜಂಬೂರು ಬಾಣೆಯಲ್ಲಿ ಸರಕಾರ ನಿರ್ಮಿಸಿರುವ ಪುನರ್ವಸತಿಯಲ್ಲಿ ನಮಗೂ ಒಂದು ಮನೆ ನೀಡಬೇಕೆಂದು ಬಿ.ಜೆ.ವಿಶಾಲಾಕ್ಷಿ ಅವರು ಜಿಲ್ಲಾಧಿಕಾರಿಗಳಲ್ಲಿ ಕೋರಿದರು.