

ಎನ್.ಆರ್.ಪುರ: ಪಟ್ಟಣದ ಹಳೇ ಮಂಡಗದ್ದೆ ಸರ್ಕಲ್‌ನ ಮಂಜುನಾಥ ಎಂಬುವವರ ಮನೆಯಲ್ಲಿ ಗುರುವಾರ ರಾತ್ರಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ಹೊತ್ತಿಕೊಂಡು ವಸ್ತುಗಳೆಲ್ಲ ಸುಟ್ಟುಹೋಗಿವೆ.
ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಕಾಣಿಸಿಕೊಂಡ ಬೆಂಕಿ ಮೀಟರ್ ಬೋರ್ಡ್‌ಗೆ ಹೊತ್ತಿಕೊಂಡು ಪಕಾಸಿಗಳಿಗೂ ಹಬ್ಬಿತು. ದಟ್ಟ ಹೊಗೆ ಆವರಿಸಿ ಕೆಲಕಾಲ ಆತಂಕ ಸೃಷ್ಟಿಯಾಗಿತ್ತು. ಕೂಡಲೇ ಮಂಜುನಾಥ ಅವರು ಪೊಲೀಸ್, ಮೆಸ್ಕಾಂ, ಅಗ್ನಿ ಶಾಮಕದಳದವರಿಗೆ ತಿಳಿಸಿದರು. ಪಿಎಸ್‌ಐ ಶ್ರೀಗುರು ಸಜ್ಜನ್ ಹಾಗೂ ಸಿಬ್ಬಂದಿ ಮಧು ಆಗಮಿಸಿ ಸ್ಥಳೀಯರ ಸಹಕಾರದಿಂದಾಗಿ ಬೆಂಕಿ ಹೆಚ್ಚು ಆವರಿಸದಂತೆ ನೋಡಿಕೊಂಡು, ಮೆಸ್ಕಾಂಗೆ ಕರೆ ಮಾಡಿ ವಿದ್ಯುತ್ ಸ್ಥಗಿತಗೊಳಿಸಿದರು. ಅಗ್ನಿ ಶಾಮಕದಳದವರು ಆಗಮಿಸಿ ಛಾವಣಿ ಮೇಲೆ ಹತ್ತಿ ಶೀಟ್‌ಗಳನ್ನೆಲ್ಲ ತೆಗೆದು ನೀರು ಹಾಯಿಸಿ ಬೆಂಕಿ ನಂದಿಸಿದರು. ಪಕ್ಕದ ಮನೆಯ ಮೇಲ್ಛಾವಣಿಗೂ ಬೆಂಕಿ ಆವರಿಸಿದ್ದನ್ನು ನಂದಿಸಿದರು. ಪಪಂ ಸದಸ್ಯರು, ಜನರು ಬೆಂಕಿ ನಂದಿಸಲು ಸಹಕರಿಸಿದರು. ಮನೆಯಲ್ಲಿದ್ದ ಪೀಠೋಪಕರಣಗಳು, ದಿನಿತ್ಯದ ವಸ್ತುಗಳು, ವುಡ್ ಕಟರ್ ಮಿಷನ್, ಇತರ ಯಂತ್ರಗಳು ಸುಟ್ಟಿವೆ.
ಕಂದಾಯ ನಿರೀಕ್ಷಕ ಮಂಜುನಾಥ್, ಗ್ರಾಮ ಲೆಕ್ಕಿಗರಾದ ಸಾನಿಯಾ ಮನೆ ಪರಿಶೀಲಿಸಿದರು. ಮೆಸ್ಕಾಂ ಎಇಇ ಗೌತಮ್, ಸಿಬ್ಬಂದಿ ಹಳೇಪೇಟೆ ಉಮೇಶ್, ತಾಜ್, ಶಿವು ಇತರರಿದ್ದರು.