

ಕೋಲಾರ: ತಮ್ಮ ಇಷ್ಟಕ್ಕೆ ವಿರುದ್ಧವಾಗಿ ಮದುವೆ ಮಾಡಿಕೊಳ್ಳುವ ಉದ್ದೇಶದಿಂದ ಅಕ್ರಮವಾಗಿ ಮಗಳನ್ನು ಕರೆದೊಯ್ದಿದ್ದಾನೆಂಬ ಸಿಟ್ಟಿನಿಂದ ಹುಡುಗಿಯ ತಂದೆಯ ಕಡೆಯವರು ಯುವಕನ ಮನೆಯನ್ನು ಧ್ವಂಸಗೊಳಿಸಿರುವ ಘಟನೆ ಕೋಲಾರ ತಾಲೂಕಿನ ವೇಮಗಲ್ ಪೊಲೀಸ್ ಠಾಣೆ ವ್ಯಾಪ್ತಿಯ ಚನ್ನಗಾನಹಳ್ಳಿಯಲ್ಲಿ ಸೋಮವಾರ ನಡೆದಿದೆ.
ಗ್ರಾಮದ ಮುನಿರಾಜು ಎಂಬ ಯುವಕ ವೇಮಗಲ್ ಗ್ರಾಮದ ಮುಖಂಡ ಮಂಜುನಾಥ ಎಂಬುವರ ಮಗಳನ್ನು ಕಳೆದ 5 ವರ್ಷಗಳಿಂದ ಪ್ರೀತಿಸುತ್ತಿದ್ದು ಇದಕ್ಕೆ ಯುವತಿಯ ಸಹಮತವಿತ್ತಾದರೂ ಮದುವೆಗೆ ಹಿಂಜರಿದಿದ್ದರು. ಕಳೆದ ಫೆಬ್ರವರಿ ತಿಂಗಳಲ್ಲಿ ಮುನಿರಾಜು ಪ್ರೇಯಸಿಯೊಂದಿಗೆ ದೇವಾಲಯವೊಂದರಲ್ಲಿ ಮದುವೆಯಾಗಿ, ತನ್ನ ಮನೆಗೆ ಕರೆದುಕೊಂಡು ಬಂದಿದ್ದರು. ವಿಷಯ ತಿಳಿದ ಯುವತಿಯ ತಂದೆ ಮಗಳನ್ನು ಮನೆಗೆ ಕರೆದುಕೊಂಡು ಹೋಗಿ ತಾಳಿ, ಕಾಲುಂಗುರವನ್ನು ತೆಗೆಸಿ ಕೆಲವು ದಿನಗಳ ನಂತರ ಬೇರೊಬ್ಬನಿಗೆ ಕೊಟ್ಟು ಮದುವೆ ಮಾಡಲು ನಿಶ್ಚಯಿಸಿದ್ದರು. ಇದರಿಂದ ಆತಂಕಗೊಂಡ ಯುವತಿ ಹೇಗೋ ಮುನಿರಾಜುಗೆ ವಿಷಯ ರವಾನಿಸಿದ್ದರು.
ಭಾನುವಾರ ಮುನಿರಾಜು ಧೈರ್ಯ ಮಾಡಿ ಪ್ರೇಯಸಿಯೊಂದಿಗೆ ತಲೆಮರೆಸಿಕೊಂಡಿದ್ದು, ಇದರಿಂದ ಕುಪಿತರಾದ ಯುವತಿಯ ತಂದೆಯ ಕಡೆಯವರು ಮುನಿರಾಜು ಗ್ರಾಮಕ್ಕೆ ಬಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ದ್ವಿಚಕ್ರವಾಹನ, ಸೈಕಲ್, ಮೇವು ಕತ್ತರಿಸುವ ಯಂತ್ರ, ಮರದ ಪೀಠೋಪಕರಣ, ಹಾಸಿಗೆ, ಅಡುಗೆ ಮನೆಯಲ್ಲಿನ ವಸ್ತುಗಳು, ಪಾತ್ರೆ, ದವಸಧಾನ್ಯ, ಸುಮಾರು 1.50 ಲಕ್ಷ ರೂ. ಮೌಲ್ಯದ ನೋಟುಗಳು, ದಾಖಲೆ ಪತ್ರ ಸೇರಿದಂತೆ ಬೆಲೆ ಬಾಳುವ ವಸ್ತುಗಳನ್ನು ಸುಟ್ಟಿದ್ದಾರಲ್ಲದೆ, ಕೂಲಿ ಕೆಲಸಕ್ಕೆ ಹೋಗಿದ್ದ ಮುನಿರಾಜು ತಾಯಿ ಹಾಗೂ ಅತ್ತಿಗೆ ಮನೆಗೆ ಬಂದು ಪ್ರಶ್ನಿಸಿದಾಗ ಅವರ ಮೇಲೂ ಹಲ್ಲೆ ಮಾಡಿದ್ದಾರೆನ್ನಲಾಗಿದೆ.
ಯುವತಿಯ ತಂದೆ ವೇಮಗಲ್ ಪೊಲೀಸ್ ಠಾಣೆಯಲ್ಲಿ ತನ್ನ ಮಗಳನ್ನು ಕಿಡ್ನಾಪ್ ಮಾಡಲಾಗಿದೆ ಎಂದು, ಹುಡುಗನ ಕಡೆಯವರು ಮನೆಯ ದ್ವಂಸ ಹಾಗೂ ಹಲ್ಲೆ ಮಾಡಿದ್ದಾರೆಂದು ದೂರು ನೀಡಿದ್ದು, ಈ ಮಧ್ಯೆ ಗ್ರಾಮದ ಕೆಲವು ಮುಖಂಡರು ರಾಜಿ ಮೂಲಕ ಪ್ರಕರಣವನ್ನು ಬಗೆಹರಿಸಲು ಇಚ್ಚಿಸಿರುವುದರಿಂದ ಎಫ್‌ಐಆರ್ ದಾಖಲು ಮಾಡದೆ ಮುನಿರಾಜು ಹಾಗೂ ಯುವತಿ ಬಂದ ಮೇಲೆ ವಿಚಾರಣೆ ನಡೆಸಿ ಮುಂದಿನ ಕ್ರಮಕ್ಕೆ ಪೊಲೀಸರು ನಿರ್ಧರಿಸಿದ್ದಾರೆ. ಊರಿಗೆ ಬಂದರೆ ಕೊಂದು ಬಿಡುತ್ತಾರೆ, ನೆಮ್ಮದಿಯಿಂದ ಬದುಕಲು ಅವಕಾಶ ನೀಡಲ್ಲ, ರಕ್ಷಣೆ ನೀಡುವಂತೆ ಮುನಿರಾಜು ಹಾಗೂ ಯುವತಿ ಮಹಿಳಾ ಆಯೋಗದ ಅಧ್ಯಕ್ಷರಿಗೆ ಪತ್ರ ಮುಖೇನ ಮನವಿ ಮಾಡಿದ್ದಾರೆನ್ನಲಾಗಿದೆ.