

ಕೂಡ್ಲಿಗಿ: ಕಟ್ಟಡ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಹಾಗೂ ಇತರ ಸೌಲಭ್ಯಗಳು ಮರಿಚಿಕೆಯಾಗಿವೆ ಎಂದು ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಎನ್.ಯಲ್ಲಾಲಿಂಗ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ತಾಲೂಕು 3ನೇ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ನೋಂದಾಯಿತ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಪ್ರತಿ ವರ್ಷ ಶೈಕ್ಷಣಿಕ ಧನ ಸಹಾಯ ನೀಡುತ್ತಿದ್ದು, ಕಳೆದ ಮೂರು ವರ್ಷಗಳಿಂದ ಯಾವುದೇ ಸೌಲಭ್ಯಗಳು ದೊರೆಯುತ್ತಿಲ್ಲ ಎಂದು ದೂರಿದರು.
ಕಟ್ಟಡ ಕಾರ್ಮಿಕರಿಗೆ ಮನೆ ನಿರ್ಮಾಣಕ್ಕೆ 5ಲಕ್ಷ ರೂ. ಸಹಾಯಧನ ಯೋಜನೆ ಜಾರಿ ಮಾಡಬೇಕು. ಮದುವೆ, ಪಿಂಚಣಿ, ಹೆರಿಗೆ ಹಾಗೂ ಶೈಕ್ಷಣಿಕ ಸೌಲಭ್ಯಕ್ಕೆ ಸಾವಿರಾರು ಕಾರ್ಮಿಕರು ಅರ್ಜಿ ಹಾಕಿದ್ದು, ಕಚೇರಿಯಲ್ಲೇ ಕೊಳೆಯುತ್ತಿವೆ. ಶೀಘ್ರ ವಿಲೇವಾರಿ ಮಾಡಬೇಕು.
ನೈಜ ಕಾರ್ಮಿಕರ ನೋಂದಣಿ ಮತ್ತು ಮರು ನವೀಕರಣ ಅರ್ಜಿಗಳನ್ನು ಸಕಾರಣವಿಲ್ಲದೆ ತಿರಸ್ಕರಿಸುವುದು ನಿಲ್ಲಿಸಬೇಕು ಹಾಗೂ ವಿಳಂಬ ಮಾಡದೆ ಕಾರ್ಡ್ ವಿತರಣೆ ಮಾಡಬೇಕು. ಪಿಂಚಣಿಗೆ ಅರ್ಜಿ ಸಲ್ಲಿಸುವಲ್ಲಿ ಆಗುತ್ತಿರುವ ತಾಂತ್ರಿಕ ತೊಂದರೆಗಳನ್ನು ನಿವಾರಿಸಿ ಎಂದು ಯಲ್ಲಾಲಿಂಗ ಒತ್ತಾಯಿಸಿದರು.
ತಾಲೂಕು ಕಾರ್ಯದರ್ಶಿ ಗುನ್ನಳ್ಳಿ ರಾಘವೇಂದ್ರ ಮಾತನಾಡಿ, ಇತ್ತೀಚಿನ ದಿನದಲ್ಲಿ ಭದ್ರತೆ ಮತ್ತು ಕನಿಷ್ಠ ವೇತನವಿಲ್ಲದೆ ಕಾರ್ಮಿಕರು ಪ್ರತಿಯೊಂದು ಕ್ಷೇತ್ರದಲ್ಲಿ ಹಿಂದುಳಿಯುವಂತಾಗಿದೆ. ಪ್ರಜಾಪ್ರಭುತ್ವ ದೇಶದಲ್ಲಿ ಕಾರ್ಮಿಕರ ಶ್ರಮಕ್ಕೆ ಕಿಮ್ಮತ್ತಿಲ್ಲದಂತೆ ರಾಜಕೀಯ ವ್ಯವಸ್ಥೆ ಇದೆ. ಕಾರ್ಮಿಕರನ್ನು ಶಾಶ್ವತವಾಗಿ ಗುಲಾಮಗಿರಿಗೆ ತಳ್ಳುವ ಹುನ್ನಾರ ದೇಶದಲ್ಲಿ ನಡೆದಿದೆ ಎಂದರು.