ಬಡ ವೃದ್ಧೆಗೆ ನೇತಾಜಿ ಬ್ರಿಗೇಡ್ ಆಸರೆ : ಅಗಲಿದ ಸದಸ್ಯನ ನೆನಪಿನಲ್ಲಿ ಸೇವೆ 4 ಲಕ್ಷ ರೂ. ವೆಚ್ಚದಲ್ಲಿ ಮನೆ ನಿರ್ಮಾಣ

New Project (21)
Published on

ಯಶೋಧರ ವಿ.ಬಂಗೇರ ಮೂಡುಬಿದಿರೆ

ಮೂಡುಬಿದಿರೆ ಯುವ ಸಂಘಟನೆ ನೇತಾಜಿ ಬ್ರಿಗೇಡ್ ಕೆಲವು ತಿಂಗಳ ಹಿಂದೆ ಅಗಲಿದ ತಮ್ಮ ತಂಡದ ಸದಸ್ಯ ವಿಜೇಶ್ ಅಮೀನ್ ಸ್ಮರಣಾರ್ಥ ಬಡ ಕುಟುಂಬಕ್ಕೆ ಮನೆ ಕಟ್ಟಿಕೊಡುವ ಮೂಲಕ ಆಸರೆಯಾಗುತ್ತಿದೆ.

ವೃದ್ಧೆಗೆ ಸೂರು: ಆರನೇ ವರ್ಷದ ಸೇವಾ ಯೋಜನೆ ಅಂಗವಾಗಿ ವೃದ್ಧೆಗೆ ಮನೆ ನಿರ್ಮಾಣ ಕೆಲಸ ನಾಲ್ಕು ತಿಂಗಳಿನಿಂದ ಮಾಡುತ್ತಿದ್ದಾರೆ. ಪುತ್ತಿಗೆ ಗ್ರಾಪಂ ವ್ಯಾಪ್ತಿಯಲ್ಲಿ ಕುಲಂಗಲ್ಲು ಎಂಬಲ್ಲಿ ಬೇಬಿ ಎಂಬುವರಿಗೆ ಮನೆ ನಿರ್ಮಾಣ ಯೋಜನೆ ಇದಾಗಿದೆ. ನಾಲ್ಕು ತಿಂಗಳ ಹಿಂದೆ ವೃದ್ಧ ದಂಪತಿ ವೀರಪ್ಪ ಮೂಲ್ಯ-ಬೇಬಿ ಜೋಪಡಿಯಲ್ಲಿ ಶೋಚನೀಯ ಸ್ಥಿತಿಯಲ್ಲಿ ಬದುಕುತ್ತಿದ್ದರು. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ವೀರಪ್ಪ ಮೂಲ್ಯ ಕೆಲವು ತಿಂಗಳ ಹಿಂದೆ ನಿಧನರಾಗಿದ್ದಾರೆ. ಒಬ್ಬಂಟಿಯಾಗಿ ಬದುಕುತ್ತಿರುವ ಬೇಬಿ ಅವರಿಗೆ ನೇತಾಜಿ ಬ್ರಿಗೇಡ್ ಸೂರು ಒದಗಿಸುವ ಮೂಲಕ ಆಸರೆಯಾಗುತ್ತಿದೆ.

4 ಲಕ್ಷ ರೂ.ವೆಚ್ಚದ ಮನೆ

ಸಂಘಟನೆಯಲ್ಲಿ ಕೂಲಿ ಕೆಲಸ, ಆಟೋ ಡ್ರೈವರ್ ಸಹಿತ ಸಾಮಾನ್ಯ ಕೆಲಸ ಮಾಡಿಕೊಂಡಿರುವವರೇ ಹೆಚ್ಚಿದ್ದು, ತಮ್ಮ ಶ್ರಮದ ಗಳಿಕೆಯ ಒಂದು ಭಾಗವನ್ನು ಸಂಘಟನೆಯ ಮೂಲಕ ಸೇವಾ ಚಟುವಟಿಕೆಗಳಿಗೆ ಮೀಸಲಿರಿಸಿದ್ದಾರೆ. 30ಕ್ಕೂ ಅಧಿಕ ಮಂದಿ ಸದಸ್ಯರು ಬಿಡುವಿನ ವೇಳೆಯಲ್ಲಿ ಸಂಘಟನೆ ಮೊದಲ ಸೂರು ಯೋಜನೆಗೆ ಮೀಸಲಿರಿಸಿ ಶ್ರಮಿಸುತ್ತಿದ್ದಾರೆ. ತಮ್ಮ ದುಡಿಮೆಯ ಭಾಗ, ದಾನಿಗಳ ನೆರವಿನೊಂದಿಗೆ ಸುಮಾರು 4 ಲಕ್ಷ ವೆಚ್ಚದಲ್ಲಿ ಹಂಚಿನ ಮನೆ ನಿರ್ಮಾಣವಾಗುತ್ತಿದೆ. ಹಾಲ್, ಅಡುಗೆ ಕೋಣೆ, ಅಟ್ಯಾಚ್ಡ್ ಶೌಚಗೃಹ ಮನೆಯಲ್ಲಿದೆ. ಸಂಘಟನೆಯ ಸ್ಥಾಪಕ, ಸಂಚಾಲಕ ರಾಹುಲ್ ಕುಲಾಲ್, ಅಧ್ಯಕ್ಷ ದಿನೇಶ್ ಶೆಟ್ಟಿ ಏದಾಡಿಗುತ್ತು ನೇತೃತ್ವದಲ್ಲಿ ಪ್ರತಿವಾರ, ರಜಾದಿನಗಳಲ್ಲಿ ಶ್ರಮದಾನದ ಮೂಲಕ ಮನೆ ನಿರ್ಮಾಣ ಕೆಲಸವಾಗುತ್ತಿದೆ.

ವೇಷ ಧರಿಸಿ ಸ್ಪಂದಿಸುತ್ತಿದ್ದ ವಿಜೇಶ್

ಆರು ತಿಂಗಳ ಹಿಂದೆ ಶ್ರೀಕ್ಷೇತ್ರ ಪುತ್ತಿಗೆ ಬ್ರಹ್ಮಕಲಶೋತ್ಸವದ ತಯಾರಿ ಕೆಲಸದಲ್ಲಿ ತೊಡಗಿಸಿಕೊಂಡ ಸಂದರ್ಭ ಸಂಘದ ಸಕ್ರಿಯ ಸದಸ್ಯ ವಿಜೇಶ್ ಅಮೀನ್ ಹೃದಯಾಘಾತದಿಂದ ಮೃತಪಟ್ಟಿದ್ದರು. ಮೂಡುಬಿದಿರೆ ಗಾಂಧಿನಗರದ ನಿವಾಸಿಯಾಗಿದ್ದ ಅವರು ನೇತಾಜಿ ಬ್ರಿಗೇಡ್‌ನ ಪ್ರತಿ ಸೇವಾ ಚಟುವಟಿಕೆಗಳಲ್ಲಿ ಸಕ್ರಿಯರಾಗಿ ಭಾಗವಹಿಸುತ್ತಿದ್ದರು. ಸೇವಾ ಚಟುವಟಿಕೆಗಳಿಗೆ ವಿಭಿನ್ನ ವೇಷಧರಿಸಿ ಆರ್ಥಿಕ ನೆರವು ಕ್ರೋಡಿಕರಣ ಮಾಡುತ್ತಿದ್ದ ವಿಜೇಶ್‌ಗೆ ‘ಸೂರು’ ಯೋಜನೆ ಮೂಲಕ ಅರ್ಥಪೂರ್ಣವಾಗಿ ಶ್ರದ್ಧಾಂಜಲಿಯನ್ನು ನೇತಾಜಿ ಬ್ರಿಗೇಡ್ ಸಲ್ಲಿಸುತ್ತಿದೆ.

ನಮ್ಮ ಸಂಘಟನೆಯಲ್ಲಿ ಶ್ರಮಿಕ ವರ್ಗವಿದ್ದರೂ, ಸಾಮಾಜಿಕ, ಧಾರ್ಮಿಕ ಸೇವೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದೇವೆ. ಸಂಘಟನೆ ಸೇವಾ ಚಟುವಟಿಕೆಗಳಿಗೆ ಸದಾ ಬೆಂಗಾವಲಾಗಿದ್ದ ಗೆಳೆಯ ವಿಜೇಶ್ ನೆನಪಿನಲ್ಲಿ ಸೂರು ಯೋಜನೆಯನ್ನು ಕೈಗೊಂಡಿದ್ದು, ಸದಸ್ಯರು, ದಾನಿಗಳಿಂದ ಉತ್ತಮ ರೀತಿಯಲ್ಲಿ ಸ್ಪಂದನೆ ಸಿಕ್ಕಿದೆ. ನವರಾತ್ರಿ ಪ್ರಾರಂಭದ ಮೊದಲು ಮನೆ ಹಸ್ತಾಂತರ ಮಾಡುವ ಚಿಂತನೆಯಿದೆ.

ರಾಹುಲ್ ಅಮೀನ್

ಸ್ಥಾಪಕ, ನೇತಾಜಿ ಬ್ರಿಗೇಡ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net