

ವಿನಯ್ ಉಪ್ಪಿನಂಗಡಿ
ಪುತ್ತೂರು ತಾಲೂಕು ಹಿರೆಬಂಡಾಡಿ ಗ್ರಾಮದ ಅತ್ತಾಜೆ ಎಂಬಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಗೆ ಮನೆಯೊಂದು ಕುಸಿದಿದ್ದು, ಕುಟುಂಬ ಸಂಕಷ್ಟಕ್ಕೆ ಸಿಲುಕಿ 10 ದಿನ ಸಂದರೂ ಸರ್ಕಾರದಿಂದ ನಯಾ ಪೈಸೆಯ ಸಹಾಯಹಸ್ತವಿಲ್ಲ. ಪರಿಹಾರ ವಿತರಣೆಯ ಮಾತೇ ಇಲ್ಲ..!
ಪತಿಯನ್ನು ಕಳೆದುಕೊಂಡು ಮೂವರು ಮಕ್ಕಳನ್ನು ಸಲಹುತ್ತಿರುವ ಗೀತಾ ಎಂಬಾಕೆಯೇ ಮನೆ ಕಳೆದುಕೊಂಡ ಸಂತ್ರಸ್ತೆ. ಮಗ ಇನ್ನೇನು ದುಡಿಯಲು ಆರಂಭಿಸಿದ ಎನ್ನುವಾಗ ವಾಹನ ಅಪಘಾತಕ್ಕೀಡಾಗಿ ಗಾಯಗೊಂಡು ಚಿಕಿತ್ಸೆಯಲ್ಲಿರುವಾಗಲೇ ಮತ್ತೊಂದು ಸಂಕಷ್ಟ ಎದುರಾಗಿದೆ. ಮೇ 30ರಂದು ಸುರಿದ ಭಾರಿ ಮಳೆಗೆ ಗುಡ್ಡ ಕುಸಿದು ಮನೆಗಪ್ಪಳಿಸಿದ್ದು, ಮನೆಯ ಹಿಂಬದಿ ಗೋಡೆ ಮುಂಭಾಗದ ಕೋಣೆೆಗೆ ಬಂದು ಬಿದ್ದಿತ್ತು. ಗೋಡೆ ಬಿದ್ದ ಕಾರಣ ಹಿಂಭಾಗದ ಹೆಂಚಿನ ಛಾವಣಿ ತುಂಡರಿಸಲ್ಪಟ್ಟು ಇಡೀ ಮನೆಯೇ ಹಾನಿಗೀಡಾಗಿತ್ತು. ಅಡುಗೆ ಕೋಣೆ, ಬಚ್ಚಲು ಮನೆ, ಎಲ್ಲವೂ ನಾಶಗೊಂಡ ಕಾರಣ ಕುಟುಂಬ ಅತಂತ್ರ ಸ್ಥಿತಿಗೆ ತಲುಪಿದೆ. ಮಲಗಲೂ ಸ್ಥಳವಿಲ್ಲದಂತಾಗಿ ಸಂಬಂಧಿಕರ ಮನೆ ಸೇರುವಂತಾಗಿದೆ.
ಅಚ್ಚುಕಟ್ಟಾಗಿ ಶಿಷ್ಟಾಚಾರ ಪಾಲಿಸಿದ ಗ್ರಾ.ಪಂ.!
ಘಟನೆ ಬಳಿಕ ಸ್ಥಳಕ್ಕೆ ಪಂಚಾಯಿತಿ ಅಧಿಕಾರಿಗಳು, ಕಂದಾಯ ಇಲಾಖಾಧಿಕಾರಿಗಳು ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸಿ ಅಚ್ಚುಕಟ್ಟಾಗಿ ಶಿಷ್ಟಾಚಾರ ಪಾಲಿಸಿದ್ದಾರೆ. ನಿರ್ಗಮಿಸುವ ವೇಳೆ ಈ ಮನೆಯಲ್ಲಿ ವಾಸ್ತವ್ಯ ಅಪಾಯಕಾರಿಯಾಗಿರುವುದರಿಂದ ವಾಸ್ತವ್ಯವನ್ನು ಬದಲಾಯಿಸಿ ಎಂದು ಬಿಟ್ಟಿ ಸಲಹೆ ನೀಡಿದ್ದಾರೆ. ಅಂದು ನಿರ್ಗಮಿಸಿದ ಅಧಿಕಾರಿಗಳು ಘಟನೆ ನಡೆದು ಹತ್ತು ದಿನಗಳಾದರೂ ಪರಿಹಾರ ಕಾರ್ಯದತ್ತ ಗಮನಿಸದಿರುವುದು ಸಂತ್ರಸ್ತರನ್ನು ಚಿಂತೆಗೀಡು ಮಾಡಿದೆ.
ಅಧಿಕಾರಿ ವರ್ಗದಿಂದ ಸ್ಪಂದನೆ ಶೂನ್ಯ
ಈ ಬಾರಿಯ ಪ್ರಾಕೃತಿಕ ವಿಕೋಪ ಮುಂಜಾಗ್ರತಾ ಸಭೆಯಲ್ಲಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಪ್ರಾಕೃತಿಕ ವಿಕೋಪದ ಸಮಯದಲ್ಲಿ ಸಂತ್ರಸ್ತರಿಗೆ ತ್ವರಿತ ಪರಿಹಾರ ಧನ ವಿತರಿಸಬೇಕು. ಮನೆ ಹಾನಿಗೀಡಾದವರಿಗೆ ಗರಿಷ್ಠ ಪರಿಹಾರ ಒದಗಿಸಲು ಕಂದಾಯ ಇಲಾಖಾಧಿಕಾರಿಗಳು ಹದಯವೈಶಾಲ್ಯತೆಯಿಂದ ವರದಿ ತಯಾರಿಸಬೇಕೆಂದು ಸೂಚಿಸಿದ್ದರು. ಆದರೆ ಆಡಳಿತ ಪಕ್ಷದ ಶಾಸಕರ ಮಾತಿಗೆ ಅಧಿಕಾರಿ ವರ್ಗದಿಂದ ಸ್ಪಂದನೆ ದೊರೆಯುತ್ತಿಲ್ಲ ಎಂಬ ಅಸಮಾಧಾನದ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿಬಂದಿವೆ.
ಗರಿಷ್ಠ ಪರಿಹಾರ 2 ಲಕ್ಷಕ್ಕೆ ಇಳಿಸಿದ ಕಾಂಗ್ರೆಸ್!
ಹಿಂದಿನ ರಾಜ್ಯ ಬಿಜೆಪಿ ಸರ್ಕಾರ ಪ್ರಾಕೃತಿಕ ವಿಕೋಪದಡಿ ಮನೆ ಹಾನಿಗೀಡಾದವರಿಗೆ ಗರಿಷ್ಠ 5 ಲಕ್ಷ ರೂ. ಪರಿಹಾರ ನೀಡುತ್ತಿದ್ದು, ತಕ್ಷಣದ ಸ್ಪಂದನೆಗಾಗಿ 10 ಸಾವಿರ ರೂ. ಮೊತ್ತವನ್ನು ತ್ವರಿತವಾಗಿ ಪಾವತಿಸಲಾಗುತ್ತಿತ್ತು. ಈಗಿನ ಕಾಂಗ್ರೆಸ್ ಸರ್ಕಾರ ಪರಿಹಾರ ಮೊತ್ತವನ್ನು ಪರಿಷ್ಕರಿಸಿದ್ದು, ಇಡೀ ಮನೆ ಹಾನಿಯಾದರೆ ಗರಿಷ್ಠ 2 ಲಕ್ಷ ರೂ.ಗೆ ಇಳಿಸಿದೆ. ಆದಾಗ್ಯೂ ಯಾವುದೇ ಪರಿಹಾರ ಧನವನ್ನು ಸಂತ್ರಸ್ತರಿಗೆ ವಿತರಿಸುವಲ್ಲಿ ಆಡಳಿತ ವ್ಯವಸ್ಥೆ ಕ್ರಮ ಕೈಗೊಳ್ಳದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಘಟನೆ ನಡೆದು 10 ದಿನಗಳು ಕಳೆದಿವೆೆ. ಇಡೀ ಮನೆಯೇ ಹಾನಿಗೀಡಾಗಿದೆ. ಮನೆ ಮಂದಿ ಆಶ್ರಯ ಕಳೆದುಕೊಂಡು ಎಲ್ಲೆಲ್ಲೋ ಮಲಗುವ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ. ಆದರೆ ಸ್ಥಳೀಯಾಡಳಿತವಾಗಲಿ, ಸರ್ಕಾರವಾಗಲಿ, ಜನಪ್ರತಿನಿಧಿಗಳಾಗಲಿ ತುರ್ತು ಗಮನ ಹರಿಸದೇ ಮೌನವಾಗಿರುವುದು ವ್ಯವಸ್ಥೆಯ ಜಡತ್ವಕ್ಕೆ ಹಿಡಿದ ಕನ್ನಡಿಯಾಗಿದೆ. ಹರಿರಾಮಚಂದ್ರ, ಸಾಮಾಜಿಕ ಕಾರ್ಯಕರ್ತ ಮನೆ ಕುಸಿದ ಬಳಿಕ ಸ್ಥಳಕ್ಕೆ ಪಂಚಾಯಿತಿ ಪ್ರಮುಖರು, ಮಾಜಿ ಶಾಸಕರು ಪರಿಶೀಲನೆ ನೆಪದಲ್ಲಿ ಬಂದು ಹೋಗಿದ್ದಾರೆ. ಮನೆ ಮೇಲೆ ಬಿದ್ದ ಗುಡ್ಡದ ಮಣ್ಣು ತೆಗೆಸುವಷ್ಟು ಆರ್ಥಿಕ ಸಾಮರ್ಥ್ಯ ನನ್ನಲ್ಲಿಲ್ಲ, ವ್ಯವಸ್ಥೆ ಮಾಡುತ್ತೇವೆ ಎಂದು ಪಂಚಾಯಿತಿ ಪ್ರಮುಖರು ತಿಳಿಸಿ ಹೋಗಿದ್ದಾರೆ. ಆದರೆ ಆ ಬಳಿಕ ಇತ್ತ ಸುಳಿದಿಲ್ಲ. ಮನೆ ಸಂಪೂರ್ಣ ಹಾನಿಯಾಗಿರುವ ಕಾರಣ ಮುಂದಿನ ಬದುಕು ಹೇಗೆ ಎಂಬುದೇ ತಿಳಿಯದಂತಾಗಿದೆ. ಮೊದಲೇ ಸಂಕಷ್ಟದಲ್ಲಿದ್ದ ನನಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಗೀತಾ, ಸಂತ್ರಸ್ತ ಮಹಿಳೆ https://www.vijayavani.net/akshorotsava-swachhotsava-inauguration-of-sarvodaya-mantapa \https://www.vijayavani.net/haalengadi-railway-junction-problem