ಜಿಟಿ ಜಿಟಿ ಮಳೆಯಿಂದ ಮನೆಗಳಿಗೆ ಹಾನಿ

HOUSE COLLAPSE
Published on

ನರೇಗಲ್ಲ: ಕಳೆದೊಂದು ವಾರದಿಂದ ಸತತವಾಗಿ ಸುರಿಯುತ್ತಿರುವ ಜಿಟಿ ಜಿಟಿ ಮಳೆಗೆ ನರೆಗಲ್ಲ ಪಟ್ಟಣ ಸೇರಿದಂತೆ ಜಕ್ಕಲಿ, ಅಬ್ಬಿಗೇರಿ, ಮಾರನಬಸರಿ, ನಿಡಗುಂದಿ, ಹಾಲಕೆರೆ, ನಿಡಗುಂದಿಕೊಪ್ಪ, ಗ್ರಾಮಗಳಲ್ಲಿ ಹಲವಾರು ಮನೆಗಳು ಕುಸಿದಿವೆ. ತಗ್ಗು ಪ್ರದೇಶಗಳಲ್ಲಿನ ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿದೆ.

ಪಟ್ಟಣದ 15ನೆ ವಾರ್ಡ್‌ನ ಹಿರೇಮಠ ಓಣಿಯ ನೀಲಮ್ಮ ಜೊಂಡಿಗೇರಿಮಠ ಅವರ ಮನೆ ಬುಧವಾರ ಮಧ್ಯರಾತ್ರಿ ಬಿದ್ದಿದೆ. ಮನೆಯಲ್ಲಿ ಮಲಗಿದ್ದ ಅಜ್ಜಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗುರುವಾರ ಬೆಳಗ್ಗೆ ವಾರ್ಡ್ ನಂ.11 ರ ತೆಗ್ಗಿನಕೇರಿ ಓಣಿಯ ಹನಮವ್ವ ಗೊಣ್ಣಾಗರ ಎಂಬುವವರ ಮನೆಯ ಗೋಡೆ ಕುಸಿದಿದೆ.

ಪಟ್ಟಣ ಸೇರಿದಂತೆ ಹೋಬಳಿಯ ವ್ಯಾಪ್ತಿಯ ಅಬ್ಬಿಗೇರಿ, ನಿಡಗುಂದಿ, ನಿಡಗುಂದಿಕೊಪ್ಪ, ಮಾರನಬಸರಿ, ಜಕ್ಕಲಿ, ಅಬ್ಬಿಗೇರಿ ಗ್ರಾಮದಲ್ಲೂ ಹೆಚ್ಚಿನ ಪ್ರಮಾಣದಲ್ಲಿ ಸುರಿದ ಮಳೆಗೆ 20 ಕ್ಕೂ ಹೆಚ್ಚು ಮನೆಗಳ ಮೇಲ್ಛಾವಣಿ, ಗೋಡೆಗಳು ಬಿದ್ದಿವೆ. ಮನೆ ಬಿದ್ದ ಪರಿಣಾಮವಾಗಿ ನಿವಾಸಿಗಳು ಮನೆಗಳಲ್ಲಿ ಕುಳಿತುಕೊಳ್ಳಲು ಕೂಡ ಜಾಗವಿಲ್ಲದಂತಾಗಿದೆ. ಮನೆಯಲ್ಲಿನ ಟಿ.ವಿ, ಫ್ರಿಜ್, ಮಂಚ, ಮಕ್ಕಳ ಪುಸ್ತಕಗಳು, ಕಾಳುಕಡಿ ಸೇರಿದಂತೆ ದಿನಬಳಕೆಯ ಅಪಾರ ವಸ್ತುಗಳು ನೀರಿನಲ್ಲಿ ಹಾಳಾಗಿವೆ.

ಸತತವಾಗಿ ಎಂಟು ದಿನಗಳ ಕಾಲ ಸುರಿದ ಮಳೆಗೆ ಅಪಾರ ಪ್ರಮಾಣದ ಮನೆಗಳ ಗೋಡೆ ಹಾಗೂ ಮೇಲ್ಛಾವಣಿ ಕುಸಿದು ಬಿದ್ದರೂ ಯಾವೊಬ್ಬ ಅಧಿಕಾರಿ ಕೂಡ ಬಂದು ಪರಿಶೀಲಿಸಿಲ್ಲ. ಸಂಬಂಧಪಟ್ಟವರು ಪರಿಶೀಲಿಸಿ ಸೂಕ್ತ ಪರಿಹಾರ ನೀಡಿ ಬಡವರಿಗೆ ಅನುಕೂಲ ಕಲ್ಪಿಸಬೇಕು ಎಂದು ನೀಲಮ್ಮ ಜೊಂಡಿಗೇರಿಮಠ, ಹನಮವ್ವ ಗೊಣ್ಣಾಗರ, ಮೋಹನ ಬಡಿಗೇರ, ಸಂತೋಷ ನಿರಂಜನ ಇತರರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net