ಹೊಳೆನರಸೀಪುರ ತಾಲೂಕಿನ ಹೋಟೆಲ್, ಬೇಕರಿಗಳಲ್ಲಿಲ್ಲ ಸ್ವಚ್ಛತೆ

ಹೊಳೆನರಸೀಪುರ ಪಟ್ಟಣದಲ್ಲಿರುವ ಹೋಟೆಲ್‌ವೊಂದರ ಪರಿಸ್ಥಿತಿ.
ಹೊಳೆನರಸೀಪುರ ಪಟ್ಟಣದಲ್ಲಿರುವ ಹೋಟೆಲ್‌ವೊಂದರ ಪರಿಸ್ಥಿತಿ.
Published on

ಹೊಳೆನರಸೀಪುರ: ಪಟ್ಟಣ ಸೇರಿದಂತೆ ತಾಲೂಕಿನ ಹೋಟೆಲ್ಗಳಲ್ಲಿ ಶುದ್ಧ ಆಹಾರ ಸಿಗದಿರುವುದು, ಸ್ವಚ್ಛತೆ, ವೈಯಕ್ತಿಕ ಸ್ವಚ್ಛತೆ ನಿರ್ವಹಣೆ ಇಲ್ಲದಿರುವುದು ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ.

ನಾಗರಿಕರ ಹಸಿವು ನೀಗಿಸುವ ಹೋಟೆಲ್ಗಳ ಸ್ವಚ್ಛತೆ ಮೇಲ್ವಿಚಾರಣೆ ಮಾಡುವ ತಾಲೂಕು ಆಹಾರ ಸುರಕ್ಷಿತ ಅಧಿಕಾರಿ ಕಾಣೆಯಾಗಿರುವುದು ಅವಾಂತರಕ್ಕೆ ಕಾರಣ ಎನ್ನಲಾಗುತ್ತಿದೆ. ತಾಲೂಕಿನಾದ್ಯಂತ ಕಲುಷಿತ ಆಹಾರ ಪದಾರ್ಥಗಳಿಗೆ ಕಡಿವಾಣ ಹಾಕುವಲ್ಲಿ ಸಂಬಂಧಪಟ್ಟವರು ವಿಫಲವಾಗಿದ್ದಾರೆ ಎಂಬ ಆರೋಪ ದಟ್ಟವಾಗಿದೆ.

ತಾಲೂಕಿನಲ್ಲಿ 445 ಹೋಟೆಲ್, ಬೇಕರಿ ಉದ್ಯಮಕ್ಕೆ ಪರವಾನಗಿ ನೀಡಲಾಗಿದೆ. ಪರವಾನಗಿ ಪಡೆಯದೆ ಉದ್ಯಮ ನಡೆಸಿದವರ ವಿರುದ್ಧ ಇಲಾಖೆ ಕಠಿಣ ಕ್ರಮ ವಹಿಸಿದೆ. ಗ್ರಾಹಕರಿಗೆ ಶುದ್ಧ ಆಹಾರ ಕೊಡದಿದ್ದರೆ ಕಾಯ್ದೆ 63ರ ಪ್ರಕಾರ 500 ರಿಂದ 10 ಲಕ್ಷ ರೂ.ವರೆಗೆ ದಂಡ ವಿಧಿಸಬಹುದಾಗಿದ್ದು, ಅಸುರಕ್ಷಿತ ಕಲಬೆರಕೆ ಆಹಾರ ಕೊಡುವ ಮಾಲೀಕನಿಗೆ ಏಳು ವರ್ಷ ಜೈಲು, ದಂಡ ವಿಧಿಸುವ ಸಾಧ್ಯತೆ ಇರುತ್ತದೆ. ಆರು ಗುಣಮಟ್ಟಕ್ಕಿಂತ ಕಡಿಮೆ ಇರುವ ಬಾದಾಮಿ ಪೌಡರ್, ನೀರು ಬಳಕೆಯಲ್ಲಿ ಅಶುದ್ಧತೆ ಕಂಡು ಬಂದಲ್ಲಿ ಪ್ರಕರಣ ದಾಖಲು ಮಾಡಲಾಗುತ್ತಿದ್ದು, ಈಗಾಗಲೇ ತಾಲೂಕಿನಲ್ಲಿ ಎರಡು ಪ್ರಕರಣ ದಾಖಲಾಗಿದೆ.

ಮುಂಜಾನೆ ಶಾಲಾ, ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಹೊಟ್ಟೆ ತುಂಬಿಸಿಕೊಳ್ಳುವ ಸಲುವಾಗಿ ಜಂಕ್‌ಫುಡ್ ಮತ್ತಿತರ ಆಹಾರಕ್ಕೆ ಮಾರು ಹೋಗಿರುವ ಕಾರಣ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ಇನ್ನು ಕಲಬೆರಕೆ ಆಹಾರವನ್ನು ನೀಡುತ್ತಿರುವ ಮಾಲೀಕರ ವಿರುದ್ಧ ಎಷ್ಟು ಪ್ರಕರಣ ದಾಖಲಾಗಿದೆ, ಹೇಗೆ ಪರವಾನಗಿ ನೀಡಲಾಗಿದೆ ಎಂಬುದರ ಕುರಿತು ಮಾಹಿತಿ ಪಡೆಯಲು ಅಧಿಕಾರಿಗಳು 15 ದಿನಕ್ಕೊಮ್ಮೆಯೂ ಬರುವುದು ಕಷ್ಟವಾಗಿದೆ ಎಂದು ಸಾರ್ವಜನಿಕರು ಅಸಮಾಧಾನ ಹೊರಹಾಕಿದ್ದಾರೆ.

ಎಲ್ಲೆಂದರಲ್ಲಿ ನಾಯಿಕೊಡೆಯಂತೆ ತಲೆ ಎತ್ತಿರುವ ಹೋಟೆಲ್ಗಳು ಗಬ್ಬೆದ್ದು ನಾರುತ್ತಿವೆ. ಇನ್ನು ಶೌಚಗೃಹಗಳ ಮುಂದೆಯೇ ಆಹಾರ ಮಾರಾಟ ಮಾಡುವುದು, ಶೌಚಗೃಹದೊಳಗಿನ ನಳದಿಂದ ನೀರು ತಂದು ಗ್ರಾಹಕರಿಗೆ ಕುಡಿಯಲು ಕೊಡುವುದು, ತಟ್ಟೆ-ಲೋಟ ತೊಳೆಯುವುದು...ಹೀಗೆ ಅಶುಚಿತ್ವ ಕೆಲಸಗಳಿಂದಾಗಿ ರೋಗಗಳು ಹೆಚ್ಚುತ್ತಿದೆಯಾದರೂ ಸಂಬಂಧಪಟ್ಟವರು ಮಾತ್ರ ಕ್ರಮ ವಹಿಸಿಲ್ಲ. ಅಂತೆಯೇ ರಸ್ತೆ ಬದಿಯಲ್ಲಿನ ವಾಹನ, ಸೈಕಲ್ ಹಾಗೂ ತಳ್ಳುವ ಗಾಡಿ, ಗುಡಿಸಲುಗಳಲ್ಲಿ ತಿಂಡಿ ಊಟ ದೊರೆಯುತ್ತಿದ್ದು, ಇದೂ ನಾಗರಿಕರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಇನ್ನು ತಿಂಡಿ ತಯಾರಿಸಲು ಪ್ಲಾಸ್ಟಿಕ್ ವಸ್ತುಗಳನ್ನು ಬಳಸಲಾಗುತ್ತಿದ್ದು,ಈ ಬಗ್ಗೆಯೂ ಯಾವುದೇ ಕ್ರಮ ಇಲ್ಲದಂತಾಗಿದೆ.

ಬೇಕರಿ ಮತ್ತು ಹೋಟೆಲ್‌ಗಳ ಮುಂಭಾಗ ಶುಚಿತ್ವ ತಾಂಡವವಾಡುತ್ತಿದ್ದು, ಸೊಳ್ಳೆಗಳ ಕಾಟ ವಿಪರೀತವಾಗಿದೆ. ಒಂದು ವೇಳೆ ಒಳಹೋದರೆ ಕೊಳೆತ ವಸ್ತುಗಳ ದುರ್ವಾಸನೆ ಮೂಗಿಗೆ ಬಡಿಯುತ್ತದೆ. ಕೆಲವೆಡೆ ತರಕಾರಿಗಳನ್ನು ತೊಳೆಯದೆ ಹಾಗೆ ಕಟ್‌ಮಾಡಿ ಹಾಕುವುದು ಕಾಣ ಸಿಗುತ್ತದೆ. ಹಲವೆಡೆ ಕಡಿಮೆ ದುಡ್ಡಿಗೆ ಜನರನ್ನು ಕರೆದು ತಂದು ಕೆಲಸ ಮಾಡಿಸುವ ದೃಶ್ಯ ಕಾಣ ಸಿಗುತ್ತದೆ. ಇವರ ಬಟ್ಟೆಗಳು ಶುಚಿಯಾಗಿರುವುದಿಲ್ಲ. ಜತೆಗೆ ಕೈ ಮತ್ತು ತಲೆಗಳಿಗೆ ಸುರಕ್ಷತಾ ಸಾಧನೆ ಹಾಕಿರುವುದಿಲ್ಲ.

ಈಗಾಗಲೇ ತಾಲುಕಿನ ಎಲ್ಲ ಹೋಬಳಿಗಳಿಗೂ ಭೇಟಿ ನೀಡಲಾಗಿದ್ದು, ಸ್ವಚ್ಛತೆ ಇಲ್ಲದ ಹೋಟೆಲ್ ಮಾಲೀಕರಿಗೆ ಅರಿವು ಮೂಡಿಸಿದ್ದೇನೆ. ಅಲ್ಲದೆ ಕಾಲಾವಕಾಶ ಕೊಟ್ಟಿದ್ದೇವೆ. ಕಾನೂನು ಉಲ್ಲಂಘನೆ ಮಾಡಿ ಗ್ರಾಹಕರಿಗೆ ಕಳಪೆ ಆಹಾರ ನೀಡಿದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸರ್ಕಾರ ಕಂಪ್ಯೂಟರ್ ವ್ಯವಸ್ಥೆ ಕಲ್ಪಿಸಿಲ್ಲ. ಜತೆಗೆ ಪ್ರತ್ಯೇಕ ಕಚೇರಿ ಕೊಟ್ಟಿಲ್ಲ. ಹಾಗಾಗಿ ಪಟ್ಟಣದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಕೊಠಡಿಯೊಂದರಲ್ಲಿ ಕೆಲಸ ಮಾಡಲಾಗುತ್ತಿದೆ. ಆಹಾರ ವಿಷಯಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರು ಬಂದು ದೂರು ಸಲ್ಲಿಸಬಹುದು. ದೂರುಗಳನ್ನು ಪರಿಶೀಲಿಸಿ, ಮಾಲೀಕರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು

ಕೆ.ವಿನಯ್ ಆಹಾರ ಸುರಕ್ಷತಾ ಅಧಿಕಾರಿ, ಹೊಳೆನರಸೀಪುರ

ಮಟನ್ ಸ್ವಚ್ಛಗೊಳಿಸಲು ಶುದ್ಧ ನೀರು ಬಳಸುವುದಿಲ್ಲ. ಕಲುಷಿತ ನೀರಿನಲ್ಲಿ ಸ್ವಚ್ಛಗೊಳಿಸುವುದರಿಂದ ಅನಾರೋಗ್ಯ ಹೆಚ್ಚಾಗುತ್ತಿದೆ. ಹೋಟೆಲ್, ಬೇಕರಿ, ಮಟನ್-ಚಿಕನ್ ಸ್ಟಾಲ್‌ಗಳಿಗೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಬೇಕು. ಪಟ್ಟಣದಲ್ಲಿ ಬಹುತೇಕ ರಸ್ತೆ ಬದಿಯಲ್ಲಿ ಕಬಾಬ್, ಗೋಬಿ ಮಂಚೂರಿ ಮತ್ತಿತರ ತಿಂಡಿ ಪದಾರ್ಥ ಅಂಗಡಿಗಳಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ. ಯಾರಿಗೂ ನೋಟಿಸ್ ಕೊಟ್ಟಿಲ್ಲ. ಹೋಟೆಲ್‌ಗಳಲ್ಲಿ ಪಾತ್ರೆಗಳ ಮೇಲೆ ಜಿರಲೆ, ಇಲಿಗಳು ಓಡಾಡುತ್ತವೆ. ರಸ್ತೆ ಬದಿಯಲ್ಲಿ ಆಹಾರ ತಯಾರಿಸುವ ಹೋಟೆಲ್ಗೆ ಧೂಳು ಹೋಗುತ್ತದೆ. ಇದನ್ನು ತಿನ್ನುವ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.

ಮಹಮ್ಮದ್ ರಿಯಾಜ್ ನಾಮನಿರ್ದೇಶಿತ ಪುರಸಭೆ ಸದಸ್ಯ, ಹೊಳೆನರಸೀಪುರ

ಪಟ್ಟಣ ವ್ಯಾಪ್ತಿಯಲ್ಲಿರುವ ಹೋಟೆಲ್‌ಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಸ್ವಚ್ಛತೆ ಕಾಪಾಡಿಕೊಳ್ಳದ, ನಿಯಮ ಪಾಲಿಸದ ಹೋಟೆಲ್ ಮೇಲೆ ಶಿಸ್ತು ಕ್ರಮ ಜರುಗಿಸಲಾಗುವುದು. ಮಾಲೀಕರು ಆರೋಗ್ಯವಂತ ಕೆಲಸಗಾರರನ್ನು ನೇಮಿಸಿಕೊಳ್ಳಬೇಕು. ಸಾರ್ವಜನಿಕರಿಗೆ ಶುಚಿತ್ವ ಆಹಾರ ವಿತರಿಸಬೇಕು. ಗಂಡಸರು ಮತ್ತು ಮಹಿಳೆಯರಿಗೆ ಪ್ರತ್ಯೇಕ ಶೌಚಗೃಹ ವ್ಯವಸ್ಥೆ ಮಾಡಬೇಕು. ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಪರಿಸ್ಥಿತಿಯಲ್ಲಿ ಹೋಟೆಲ್ ವ್ಯವಸ್ಥೆ ಇದ್ದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.

ಶಿವಶಂಕರ್ ಮುಖ್ಯಾಧಿಕಾರಿ, ಪುರಸಭೆ, ಹೊಳೆನರಸೀಪುರ

ಕಡಿಮೆ ದುಡ್ಡಿಗೆ ಜನರನ್ನು ಕರೆದು ತಂದು ಹೋಟೆಲ್‌ಗಳಲ್ಲಿ ಕೆಲಸ ಮಾಡಿಸಲಾಗುತ್ತಿದೆ. ಹೋಟೆಲ್ನ ಟೇಬಲ್ನಲ್ಲಿ ನೊಣಗಳೇ ಇರುತ್ತವೆ. ಕೆಲಸ ಮಾಡುವವರು ಕೈ ಮತ್ತು ತಲೆಗೆ ಸುರಕ್ಷತಾ ಸಾಧನಾ ಧರಿಸಿರುವುದಿಲ್ಲ. ಸಾಕಷ್ಟು ಮಸ್ಯೆಗಳಿದ್ದರೂ ಆಹಾರ ಸುರಕ್ಷಿತ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ. ಮೇಲ್ನೋಟಕ್ಕೆ ಹೋಟೆಲ್ ಚೆನ್ನಾಗಿ ಕಂಡರೂ ಒಳ ಹೋಗಿ ನೋಡಿದಾಗ ಗಬ್ಬೆದ್ದು ನಾರುತ್ತಿರುತ್ತವೆ.

ರೋಹಿತ್ ಗ್ರಾಹಕ, ಹೊಳೆನರಸೀಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net