

ಹನೂರು: ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಹೋಟೆಲ್ ತ್ಯಾಜ್ಯ ಸಂಗ್ರಹವಾಗಿದ್ದು, ದುರ್ವಾಸನೆ ಬೀರುವುದರ ಮೂಲಕ ಅನೈರ್ಮಲ್ಯಕ್ಕೆ ಕಾರಣವಾಗಿದೆ. ಇದರಿಂದ ಸಾರ್ವಜನಿಕರಲ್ಲಿ ರೋಗರುಜಿನ ಹರಡುವ ಆತಂಕ ಮನೆ ಮಾಡಿದೆ.
ಬಸ್ ನಿಲ್ದಾಣದಲ್ಲಿನ ಹೋಟೆಲ್ ಬಳಕೆಯ ಕೊಳಚೆ ನೀರು ಈ ಹಿಂದೆ ಮ್ಯಾನ್‌ಹೋಲ್ ಮೂಲಕ ಚರಂಡಿಗೆ ಹರಿದು ಹೋಗುತ್ತಿತ್ತು. ಹಾಗಾಗಿ ಇದರಿಂದ ಯಾವುದೇ ಸಮಸ್ಯೆ ಇರಲಿಲ್ಲ. ಆದರೆ, 2 ತಿಂಗಳ ಹಿಂದೆ ಪಟ್ಟಣದಲ್ಲಿ ಕೆ-ಶಿಪ್ ರಸ್ತೆ ಅಭಿವೃದ್ಧಿ ಯೋಜನೆಯಡಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿತ್ತು. ಇದರಿಂದ ಕೊಳಚೆ ನೀರು ಬಸ್ ನಿಲ್ದಾಣದಲ್ಲಿ ಹರಿಯುವಂತಾದ ಪರಿಣಾಮ ಅನೈರ್ಮಲ್ಯಕ್ಕೆ ಕಾರಣವಾಗಿತ್ತು. ಈ ಬಗ್ಗೆ ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟವರು ಹೋಟೆಲ್‌ನ ಸಮೀಪದಲ್ಲಿ ಜೆಸಿಬಿ ಮೂಲಕ ಗುಂಡಿಯನ್ನು ತೆಗೆಸಿ ಕೊಳಚೆ ನೀರು ಬಿಡಲು ಆರಂಭಿಸಿದರು. ಆದರೀಗ ಗುಂಡಿಯಲ್ಲಿ ಕೊಳಚೆ ನೀರಿನ ಜತೆಗೆ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹವಾಗಿದ್ದು, ಇದು ಭರ್ತಿಗೊಂಡು ದುರ್ನಾತ ಬೀರುತ್ತಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿದಿದ್ದರೂ ಯಾವುದೇ ಕ್ರಮ ವಹಿಸಿಲ್ಲ.
ಮನೆ ಮಾಡಿದ ಅನೈರ್ಮಲ್ಯ: ಅವೈಜ್ಞಾನಿಕವಾಗಿ ತೆರೆಯಲಾಗಿರುವ ಗುಂಡಿಯಲ್ಲಿ ಕೊಳಚೆ ನೀರಿನ ಜತೆಗೆ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹವಾಗಿದ್ದು, ದುರ್ನಾತ ಬೀರುತ್ತಿರುವುದರಿಂದ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಸಂಚರಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಬಸ್ ನಿಲ್ದಾಣದಲ್ಲಿ ಅನೈರ್ಮಲ್ಯ ಮನೆ ಮಾಡಿದ್ದು, ಸೊಳ್ಳೆಗಳ ವಾಸ ಸ್ಥಾನವಾಗಿ ಮಾರ್ಪಟ್ಟಿದೆ. ಪರಿಣಾಮ ಸಾರ್ವಜನಿರಲ್ಲಿ ರೋಗ ರುಜಿನಗಳ ಭೀತಿ ಉಂಟಾಗಿರುವುದು ಒಂದೆಡೆಯಾದರೆ, ಗುಂಡಿ ಇರುವುದರ ಬಗ್ಗೆ ಸುರಕ್ಷತೆಯ ದೃಷ್ಟಿಯಿಂದ ಯಾವುದೇ ಸೂಚನಾ ಫಲಕವನ್ನು ಅಳವಡಿಸದೇ ಇರುವುದರಿಂದ ಜತೆಗೆ ತ್ಯಾಜ್ಯ ಭೂಮಿ ಮಟ್ಟಕ್ಕೆ ಇರುವುದರಿಂದ ರಾತ್ರಿ ವೇಳೆ ಜನರು ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ. ಆದರೆ ಸಂಬಂಧಪಟ್ಟವರು ಈ ಬಗ್ಗೆ ಗಮನಹರಿಸುತ್ತಿಲ್ಲ ಎಂಬುದಾಗಿ ಸಾರ್ವಜನಿಕರು ಆರೋಪಿಸಿದ್ದಾರೆ.
ತೆರವಿಗೆ ಒತ್ತಾಯ: ಗುಂಡಿಯು ತ್ಯಾಜ್ಯದಿಂದ ಸಂಪೂರ್ಣ ಭರ್ತಿಯಾಗಿದೆ. ಹಾಗಾಗಿ ಮಳೆ ಬಂದ ವೇಳೆ ಪ್ಲಾಸ್ಟಿಕ್ ತ್ಯಾಜ್ಯದ ಜತೆಗೆ ಕೊಳಚೆ ನೀರು ಬಸ್ ನಿಲ್ದಾಣದಲ್ಲಿ ಹರಿಯುವ ಸಾಧ್ಯತೆ ಹೆಚ್ಚಾಗಿದೆ. ಇದರಿಂದ ಬಸ್ ನಿಲ್ದಾಣದ ವಾತಾವರಣ ಮತಷ್ಟು ಹದಗೆಡಲಿದ್ದು, ಸಾರ್ವಜನಿಕರು ತೊಂದರೆ ಅನುಭವಿಸಬೇಕಾಗುತ್ತದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ತ್ಯಾಜ್ಯವನ್ನು ತೆರೆವುಗೊಳಿಸುವುದರ ಜತೆಗೆ ಕೊಳಚೆ ನೀರು ಹರಿಯಲು ಪರ್ಯಾಯ ವ್ಯವಸ್ಥೆ ಕೈಗೊಳ್ಳುವುದರ ಮೂಲಕ ಬಸ್ ನಿಲ್ದಾಣದಲ್ಲಿ ಸ್ವಚ್ಛತೆ ಕಾಪಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.