

ಮಂಗಳೂರು: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಹೋಟೆಲ್‌ಗಳನ್ನು ಜೂ.1ರಿಂದ ಆರಂಭಿಸಲು ಈಗಾಗಲೇ ಸಿದ್ಧತೆ ನಡೆಸಲಾಗಿದೆ. ಆದರೆ ಅಧಿಕೃತವಾಗಿ ಸರ್ಕಾರದ ಆದೇಶ ಇನ್ನಷ್ಟೇ ಬರಬೇಕಾಗಿದೆ.
ಹೋಟೆಲ್‌ಗಳನ್ನು ಜೂ.1ರಿಂದ ತೆರೆಯಲು ಅವಕಾಶ ನೀಡುವುದಾಗಿ ಸರ್ಕಾರ ಹೇಳಿಕೆ ನೀಡಿತ್ತು. ಕೆಲವು ಸಣ್ಣ ಮಟ್ಟದ ಹೋಟೆಲ್‌ಗಳಲ್ಲಿ ಪಾರ್ಸೆಲ್ ವ್ಯವಸ್ಥೆ ಜಾರಿಯಲ್ಲಿದೆ. ಆದರೆ ಇದಕ್ಕೆ ಗ್ರಾಹಕರ ಸ್ಪಂದನೆ ನಿರೀಕ್ಷಿತ ರೀತಿಯಲ್ಲಿಲ್ಲ. ದೊಡ್ಡ ಹೋಟೆಲ್‌ಗಳು ಇನ್ನೂ ಆರಂಭವಾಗಿಲ್ಲ.
ಸರ್ಕಾರ ಅನುಮತಿ ನೀಡಿದರೆ ಸರ್ಕಾರ ವಿಧಿಸುವ ಷರತ್ತು ಪಾಲಿಸಿಕೊಂಡು ವ್ಯವಹಾರ ನಡೆಸಬೇಕಾಗಿದೆ. ಗ್ರಾಹಕರು ಕೂಡ ಈ ನಿಟ್ಟಿನಲ್ಲಿ ಸಹಕಾರ ನೀಡಬೇಕು. ಅಂತರದಲ್ಲಿ ಕುಳಿತುಕೊಂಡು, ಸ್ಯಾನಿಟೈಸರ್ ಬಳಕೆ ಮೂಲಕ ಶುಚಿತ್ವಕ್ಕ ಆದ್ಯತೆ ನೀಡಬೇಕಾಗಿದೆ.
ಹೋಟೆಲ್‌ಗಳಲ್ಲಿ ಕೆಲಸ ಮಾಡುವ ಹೊರ ಜಿಲ್ಲೆಯ ಕಾರ್ಮಿಕರು ಊರಿಗೆ ಮರಳಿದ್ದಾರೆ. ಅವರು ಮರಳುವಾಗ ಇನ್ನೂ ಒಂದು ತಿಂಗಳು ಕಳೆಯಬಹುದು. ಅಷ್ಟರ ತನಕ ಸೀಮಿತ ವ್ಯವಸ್ಥೆಯಲ್ಲಿ ಗ್ರಾಹಕರಿಗೆ ಸೇವೆ ನೀಡಬೇಕಾಗಿದೆ. ಜಿಲ್ಲೆಯವರು ಕೂಡ ಬಸ್‌ಗಳಲ್ಲಿ ಬರಲು ಹಿಂದೇಟು ಹಾಕುವುದರಿಂದ ಒಂದಷ್ಟು ಗೊಂದಲಗಳು ಉಂಟಾಗುವ ಸಾಧ್ಯತೆ ಇದೆ ಎಂದು ಹೊಟೇಲ್ ಮಾಲೀಕರು ತಿಳಿಸಿದ್ದಾರೆ.
ಹೋಟೆಲ್‌ಗಳನ್ನು ಆರಂಭಿಸಲು ಅನುಮತಿ ನೀಡುವಂತೆ ಸಿಎಂ ಅವರಿಗೆ ಮನವಿ ಸಲ್ಲಿಸಿದ್ದೇವೆ. ಕೇಂದ್ರದ ಆದೇಶ ಬಂದ ತಕ್ಷಣ ಅವಕಾಶ ನೀಡುವುದಾಗಿ ಅವರು ಪ್ರತಿಕ್ರಿಯಿಸಿದ್ದಾರೆ. ಸಿದ್ಧತೆ ಮಾಡಿಕೊಂಡಿದ್ದೇವೆ. ಆರಂಭದಲ್ಲಿ ಒಂದಷ್ಟು ಸಮಸ್ಯೆ ಉಂಟಾದರೂ ಕ್ರಮೇಣ ಸಹಜ ಸ್ಥಿತಿ ಬರುವ ವಿಶ್ವಾಸವಿದೆ.
ಕುಡ್ಪಿ ಜಗದೀಶ್ ಶೆಣೈ , ಅಧ್ಯಕ್ಷ, ದ.ಕ ಜಿಲ್ಲಾ ಹೋಟೆಲ್ ಮಾಲೀಕರ ಸಂಘ
ಮಾಲ್ ತೆರೆಯಲು ಪೂರ್ವಸಿದ್ಧತೆ
ಮಂಗಳೂರು: ಲಾಕ್‌ಡೌನ್ 5.0ರಲ್ಲಿ ಮಾಲ್‌ಗಳಿಗೆ ರಿಯಾಯಿತಿ ಸಿಗುವ ನಿರೀಕ್ಷೆ ಹಿನ್ನೆಲೆಯಲ್ಲಿ ಈಗಾಗಲೇ ನಗರದ ಕೆಲ ಮಾಲ್‌ಗಳು ಕಾರ್ಯಾರಂಭಕ್ಕೆ ಪೂರ್ವಸಿದ್ಧತೆ ಮಾಡಿಕೊಂಡಿವೆ.
ಎರಡು ದಿನದ ಮೊದಲೇ ನಗರದ ಸಿಟಿ ಸೆಂಟರ್ ಹಾಗೂ ಫೋರಂ ಮಾಲ್ ಅಂತರವನ್ನು ಕಾಯ್ದುಕೊಳ್ಳುತ್ತಾ ಕಾರ್ಯನಿರ್ವಹಿಸಲು ಸಿದ್ಧತೆ ಶುರುಮಾಡಿವೆ. ಪ್ರವೇಶ ದ್ವಾರದಲ್ಲೇ ಥರ್ಮಲ್ ಟೆಸ್ಟ್ ನಡೆಸಲಾಗುವುದು, ಅಲ್ಲದೆ ಫುಲ್ ಬಾಡಿ ಸ್ಯಾನಿಟೈಸೇಶನ್ ಟನಲ್ ಅಳವಡಿಸುವ ಕೆಲಸ ನಡೆಯುತ್ತಿದೆ. ಲಿಫ್ಟ್‌ಗಳಲ್ಲಿ ಗರಿಷ್ಠ ನಾಲ್ಕು ಮಂದಿಯಷ್ಟೇ ಹೋಗುವ ವ್ಯವಸ್ಥೆ, ಮಳಿಗೆಗಳಲ್ಲೂ ಪರಸ್ಪರ ಅಂತರ ಕಾಪಾಡುವ ವ್ಯವಸ್ಥೆ ಸೇರಿದಂತೆ ಸಿದ್ಧತೆ ನಡೆದಿದೆ. ಎಸ್ಕಲೇಟರ್, ಮಳಿಗೆ ಮುಂದೆ ಸರತಿ ಸಾಲಿಗೆ ಮಾರ್ಕಿಂಗ್, ಶೌಚಾಲಯದಲ್ಲೂ ಒಂದು ಬಿಟ್ಟು ಒಂದನ್ನು ಬಳಸುವಂತಹ ವ್ಯವಸ್ಥೆ ಮಾಡಲಾಗುತ್ತಿದೆ. ಸಾಧ್ಯವಾದರೆ ಸೋಮವಾರದಿಂದಲೇ ನಮ್ಮ ಮಾಲ್ ಪ್ರಾರಂಭಿಸುವ ಉದ್ದೇಶವಿದೆ ಎಂದು ಫೋರಂ ಮಾಲ್ ಮ್ಯಾನೇಜರ್ ಸುನಿಲ್ ತಿಳಿಸಿದ್ದಾರೆ.
ಆದರೆ ಮಾಲ್‌ವೊಳಗಿನ ಎಲ್ಲಾ ಮಳಿಗೆಗಳೂ ಒಟ್ಟಿಗೇ ಕಾರ್ಯಾರಂಭಿಸುವ ಸಾಧ್ಯತೆ ಕಡಿಮೆ, ಅವರೆಲ್ಲರಿಗೂ ಅವರ ಸಂಸ್ಥೆಗಳಿಂದ ನಿಗದಿಪಡಿಸಿರುವ ಸೂಚನೆಯನ್ವಯ ಸಜ್ಜುಗೊಳಿಸಲು ಕೆಲ ದಿನ ಬೇಕಾಗಬಹುದು.
ಸುಮಾರು 75 ದಿನಗಳಿಂದ ಮಾಲ್‌ಗಳು ಬಂದ್ ಆಗಿದ್ದವು, ಕೇಂದ್ರ ಸರ್ಕಾರ ಲಾಕ್‌ಡೌನ್ ಘೋಷಿಸುವ ಒಂದು ವಾರ ಮೊದಲೇ ರಾಜ್ಯದಲ್ಲಿ ಮಾಲ್‌ಗಳನ್ನು ಬಂದ್ ಮಾಡಿಸುವ ಆದೇಶ ಹೊರಡಿಸಲಾಗಿತ್ತು. ಆ ಹಿನ್ನೆಲೆಯಲ್ಲಿ ನಷ್ಟ ಅನುಭವಿಸಿದ್ದ ಮಾಲ್‌ಗಳು ಈಗ ಲಾಕ್‌ಡೌನ್ ಸಡಿಲಿಕೆಯ ನಿರೀಕ್ಷೆಯಲ್ಲಿವೆ. ನಮ್ಮಲ್ಲಿನ ಮಳಿಗೆಯಲ್ಲಿ ತೆರೆಯದೆ ಹಾಳಾಗಿದ್ದ ವಸ್ತುಗಳನ್ನು ತೆರವು ಮಾಡಿ ಮಳಿಗೆ ಶುಚಿಗೊಳಿಸುವುದು, ಸ್ಯಾನಿಟೈಸೇಶನ್ ಕುರಿತಾದ ಸಿದ್ಧತೆಗಳನ್ನೂ ಮಾಡಿಕೊಂಡಿದ್ದೇವೆ ಎಂದು ಸಿಟಿಸೆಂಟರ್ ಮಾಲ್ ಮ್ಯಾನೇಜರ್ ತಿಳಿಸಿದ್ದಾರೆ.