

ಮಂಗಳೂರು: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಹೋಟೆಲ್‌ಗಳನ್ನು ಜೂ.8ರಿಂದ ಆರಂಭಿಸಲು ಸಿದ್ಧತೆ ನಡೆದಿದೆ. ಆದರೆ ಮಧ್ಯಮ ಮತ್ತು ದೊಡ್ಡ ಮಟ್ಟದ ಹೋಟೆಲ್‌ಗಳಲ್ಲಿ ಅಡುಗೆ, ಕ್ಲೀನಿಂಗ್ ಕೆಲಸದವರು ಬರದಿದ್ದರೆ ತೊಂದರೆಯಾಗುವ ಸಾಧ್ಯತೆ ಇದೆ. ಈಗಾಗಲೇ ಕೆಲವು ಸಣ್ಣ ಹೋಟೆಲ್‌ಗಳಲ್ಲಿ ಪಾರ್ಸೆಲ್ ವ್ಯವಸ್ಥೆ ಇದ್ದರೂ ಗ್ರಾಹಕರ ಸ್ಪಂದನೆ ನೀರಸವಾಗಿದೆ. ಸೋಮವಾರ ಸಾಮಾನ್ಯ ಹೋಟೆಲ್‌ಗಳು ಕಾರ್ಯಾರಂಭಿಸಬಹುದು. ಕೆಲವೇ ಕೆಲವು ಕೆಲಸಗಾರರು, ಮಾಲೀಕರು ಜತೆ ಸೇರಿ ಕೆಲಸ ಮಾಡುವ ಹೋಟೆಲ್‌ಗಳು ಆರಂಭವಾಗಬಹುದು. ಈ ನಿಟ್ಟಿನಲ್ಲಿ ಸಿದ್ಧತೆಯೂ ನಡೆದಿದೆ. ಸರ್ಕಾರದ ಮಾರ್ಗಸೂಚಿ ಅನುಸರಿಸಿಕೊಂಡು ವ್ಯವಹಾರ ನಡೆಸಬೇಕಾಗಿದ್ದು, ಗ್ರಾಹಕರೂ ಸಹಕರಿಸಬೇಕು. ದೈಹಿಕ ಅಂತರ ಕಾಯ್ದುಕೊಳ್ಳಲು ಮತ್ತು ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿದೆ ಎಂದು ನಗರದ ಹೋಟೆಲ್ ಮಾಲೀಕ ಸುದರ್ಶನ್ ತಿಳಿಸಿದ್ದಾರೆ. ಹೋಟೆಲ್‌ಗಳಲ್ಲಿ ಕೆಲಸ ಮಾಡುತ್ತಿದ್ದ ಹೊರ ಜಿಲ್ಲೆ ಕಾರ್ಮಿಕರು ಊರಿಗೆ ತೆರಳಿದ್ದು, ಇನ್ನೂ ಒಂದೆರಡು ತಿಂಗಳು ಬರಲಾರರು. ಅಷ್ಟರ ತನಕ ಸೀಮಿತ ವ್ಯವಸ್ಥೆಯಲ್ಲಿ ಸೇವೆ ನೀಡಬೇಕಿದೆ. ಈಗಾಗಲೇ ಉದ್ಯಮಕ್ಕೆ ಬಹಳಷ್ಟು ನಷ್ಟ ಉಂಟಾಗಿದೆ. ಜನರು ಬಸ್‌ಗಳಲ್ಲಿ ಓಡಾಟಕ್ಕೆ ಹಿಂದೇಟು ಹಾಕುತ್ತಿರುವ ಆತಂಕವೂ ಹೋಟೆಲ್ ಮಾಲೀಕರಲ್ಲಿದೆ.
ಹೋಟೆಲ್‌ಗಳ ಚಟುವಟಿಕೆಗೆ ಕೆಲಸಗಾರರ ಸಮಸ್ಯೆ ಉಂಟಾಗಿದೆ. ಉಡುಪಿ, ಕುಂದಾಪುರ, ಕಾರ್ಕಳ ಭಾಗಗಳಲ್ಲಿ ಈ ಸಮಸ್ಯೆ ದೊಡ್ಡ ಮಟ್ಟದಲ್ಲಿದೆ. ಕರೊನಾ ಸೋಂಕಿನ ಭಯದಿಂದ ದೂರದಿಂದ ಬಸ್‌ಗಳಲ್ಲಿ ಬರುವ ಕೆಲಸಗಾರರು ಬರಲು ಒಪ್ಪುತ್ತಿಲ್ಲ. ಹೊಸ ಕೆಲಸಗಾರರು ಸಿಗುತ್ತಿಲ್ಲ. ಒಂದಷ್ಟು ಸಮಯ ಸಮಸ್ಯೆ ಆಗುವ ಸಾಧ್ಯತೆ ಇದೆ. - ಕುಡ್ಪಿ ಜಗದೀಶ್ ಶೆಣೈ, ದ.ಕ ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಮಂಗಳೂರಿನ ಹೋಟೆಲ್‌ನಲ್ಲಿ 13 ವರ್ಷಗಳಿಂದ ಸಪ್ಲಾಯರ್ ಆಗಿದ್ದೆ. ಲಾಕ್‌ಡೌನ್ ಬಳಿಕ ಊರು ಕಲ್ಲಡ್ಕದಲ್ಲಿದ್ದೇನೆ. ಎರಡು ದಿನಗಳ ಹಿಂದೆ ಮಾಲೀಕರು ಕರೆ ಮಾಡಿ ಸೋಮವಾರದಿಂದ ಕೆಲಸಕ್ಕೆ ಬರುವಂತೆ ತಿಳಿಸಿದ್ದಾರೆ. ಆದರೆ ಕರೊನಾ ಭಯದಿಂದ ಮನೆಯವರು ಹೋಗಲು ಬಿಡುತ್ತಿಲ್ಲ. ಪ್ರಸ್ತುತ ಸ್ಥಳೀಯವಾಗಿ ಇತರ ಕೆಲಸ ಮಾಡಿಕೊಂಡಿದ್ದೇನೆ. - ದೇವರಾಜ್ ಕಲ್ಲಡ್ಕ, ಹೋಟೆಲ್ ಸಪ್ಲಾಯರ್