

ಶ್ರೀರಂಗಪಟ್ಟಣ: ತಾಲೂಕು ವ್ಯಾಪ್ತಿಯಲ್ಲಿ ಪುಂಡರ ಪುಂಡಾಟ ಮಿತಿ ಮೀರಿದ್ದು, ಸಾರ್ವಜನಿಕರ ಮೇಲೆ ರೌಡಿಸಂನಂತಹ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ.
ಇದಕ್ಕೆ ನಿದರ್ಶನವೆಂಬಂತೆ ತಾಲೂಕಿನ ಬೆಂಗಳೂರು-ಮೈಸೂರು ಹೆದ್ದಾರಿಯ ಸರ್ವೀಸ್ ರಸ್ತೆಯ ಟಿ.ಎಂ.ಹೊಸೂರು ಗೇಟ್ ಬಳಿ ಶನಿವಾರ ರಾತ್ರಿ 8 ಗಂಟೆ ಸಮಯದಲ್ಲಿ ಹಲವು ಬೈಕ್‌ಗಳಲ್ಲಿ ಆಗಮಿಸಿದ 18 ರಿಂದ 20 ವರ್ಷದ 10ಕ್ಕೂ ಹೆಚ್ಚು ಪುಂಡ ಯುವಕರ ಗ್ಯಾಂಗ್ ಗುಂಪು ಕಟ್ಟಿಕೊಂಡು ಗಲಾಟೆ ಆರಂಭಿಸಿದೆ. ಈ ವೇಳೆ ಸಮೀಪದ ಸಣ್ಣ ಹೋಟೆಲ್ವೊಂದರ ಮುಂಭಾಗ ನಿಂತು ತನ್ನ ಮಾಲೀಕನೊಂದಿಗೆ ಮಾತನಾಡುತ್ತಿದ್ದ ಸಿಬ್ಬಂದಿ ಮೇಲೆ ಕುಡಿದ ಅಮಲಿನಲ್ಲಿ ಈ ಗ್ಯಾಂಗ್ ಕ್ಯಾತೆ ತೆಗೆದು ಏಕಾಏಕಿ ಹಲ್ಲೆ ಮಾಡಿದೆ.
ಘಟನೆಯಿಂದ ಆತಂಕಗೊಂಡ ಹೋಟೆಲ್ ಮಾಲೀಕ ತಕ್ಷಣ ತನ್ನ ಸಿಬ್ಬಂದಿಯ ರಕ್ಷಣೆಗೆ ಮುಂದಾಗಿ ಹಲ್ಲೆಯನ್ನು ತಡೆದು ಪ್ರಶ್ನಿಸಿದ್ದಾರೆ. ಈ ವೇಳೆ ಮಾಲೀಕನೊಂದಿಗೆ ಈ ಗ್ಯಾಂಗ್ ಮಾತಿನ ಚಕಮಕಿ ನಡೆಸಿದ್ದು, ವಿಕೋಪಕ್ಕೆ ತಿರುಗಿದೆ. ಘಟನೆ ಗಮನಿಸಿ ಸ್ಥಳಕ್ಕೆ ಜಗಳ ಬಿಡಿಸಲು ಬಂದ ಹೊಟೇಲ್ ಮಾಲೀಕನ ತಾಯಿಯ ಎದುರೇ ಕೈಗೆ ಸಿಕ್ಕಿದ ಕಲ್ಲಿನಿಂದ ಮನಬಂದಂತೆ ಹಲ್ಲೆ ಮಾಡಿದ್ದಾರೆ.
ಹಲ್ಲೆಗೊಳಗಾದ ಹೋಟೆಲ್ ಮಾಲೀಕ ತಾಲೂಕಿನ ಟಿ.ಎಂ.ಹೊಸೂರು ಗ್ರಾಮದ ಮನು ಹಾಗೂ ಸಿಬ್ಬಂದಿ ರಾಮಮೂರ್ತಿ ಎನ್ನಲಾಗಿದೆ. ಹಲ್ಲೆ ಮಾಡಿರುವ ಪುಂಡ ಯುವಕರ ಗ್ಯಾಂಗ್ ಸಹ ಗಣಂಗೂರು ಗ್ರಾಮದವರು ಎಂದು ತಿಳಿದುಬಂದಿದೆ. ಈ ಗಲಾಟೆಯ ಸಂಪೂರ್ಣ ದೃಶ್ಯ ಸಿಸಿ ಟಿವಿಯಲ್ಲಿ ರೆಕಾರ್ಡ್ ಆಗಿದೆ. ಹಲ್ಲೆಗೊಳಗಾದ ಮನು ತನ್ನ ಸಿಬ್ಬಂದಿಯೊಂದಿಗೆ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ತೆರಳಿ 6 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.