

ಮಂಡ್ಯ: ಸಿ ಮತ್ತು ಡಿ ವರ್ಗದ ಹೊರಗುತ್ತಿಗೆ ಸಿಬ್ಬಂದಿಗೆ ನಿವೃತ್ತಿವರೆಗೆ ಸೇವಾ ಭದ್ರತೆ ಕೊಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾ ಘಟಕದಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾ ಪಂಚಾಯಿತಿ ಕಚೇರಿ ಆವರಣದಲ್ಲಿ ಜಮಾಯಿಸಿದ ನೌಕರರು ಬೇಡಿಕೆ ಈಡೇರಿಕೆಗೆಂದು ಘೋಷಣೆ ಕೂಗಿ ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್‌ಗೆ ಮನವಿ ಸಲ್ಲಿಸಿದರು. ರಾಜ್ಯಸರ್ಕಾರದ ವಿವಿಧ ಇಲಾಖೆಯಡಿ ನಡೆಸುತ್ತಿರುವ ಹಾಸ್ಟೆಲ್‌ನಲ್ಲಿ ಕಳೆದ ಹತ್ತರಿಂದ ಹದಿನೈದು ವರ್ಷದಿಂದ ಅಡುಗೆಯವರು, ಸಹಾಯಕರು, ಕಾವಲುಗಾರರು, ಸ್ವಚ್ಛತಾಗಾರರು, ಜವಾನರು, ಡಿ ಗ್ರೂಪ್ ನೌಕರರು ಕೆಲಸ ಮಾಡುತ್ತಿದ್ದಾರೆ. ಆದರೆ ಇವರಿಗೆ ಸೌಲಭ್ಯಗಳು ಸಿಗುತ್ತಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.
ಈ ಹಿನ್ನೆಲೆಯಲ್ಲಿ ನೇರವಾಗಿ ಇಲಾಖೆಯಿಂದ ಮಾಸಿಕ ವೇತನವನ್ನು ಬ್ಯಾಂಕ್ ಖಾತೆಗೆ ಜಮೆ ಮಾಡಬೇಕು. 2023 ಏ.1ರ ಕಾರ್ಮಿಕ ಇಲಾಖೆ ಆದೇಶದಂತೆ ಕನಿಷ್ಟ ವೇತನ ನೀಡಬೇಕು. ಕಾನೂನು ಪ್ರಕಾರ ವಾರದ ರಜೆ, ಹಬ್ಬಗಳ ರಜೆ, ವೇತನದ ಚೀಟಿ, ಇಎಸ್‌ಐ ಕಾರ್ಡ್, ಪಿಎಫ್‌ಗೆ ಹಣ ತುಂಬಿದ ರಶೀದಿ ಕೊಡಬೇಕು. ಸುಪ್ರೀಂ ಕೋರ್ಟ್ ಆದೇಶದಂತೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಕೆಲಸದ ಸಮಯ ನಿಗದಿ ಮಾಡಬೇಕು. ಸಮಾಜ ಕಲ್ಯಾಣ ಇಲಾಖೆಯಲ್ಲಿ ನೌಕರರ ಸಂಖ್ಯೆ ಕಡಿಮೆ ಮಾಡಿರುವ ಆದೇಶವನ್ನು ವಾಪಸ್ ಪಡೆಯಬೇಕೆಂದು ಆಗ್ರಹಿಸಿದರು.
ವಸತಿ ಶಿಕ್ಷಣ ಸಂಸ್ಥೆಗಳ ಸಂಘದಡಿ ಶಾಲಾ ಮತ್ತು ಕಾಲೇಜಿನಲ್ಲಿ ಕೆಲಸ ನಿರ್ವಹಿಸುತ್ತಿರುವ ಹೊರಗುತ್ತಿಗೆ ಸಿಬ್ಬಂದಿ 20 ರೂ ಛಾಪಾ ಕಾಗದದಲ್ಲಿ ಮುಚ್ಚಳಿಕೆ ಪತ್ರ ಬರೆದು ಕೊಡಬೇಕೆನ್ನುವ ಆದೇಶ ಹಿಂಪಡೆಯಬೇಕು. ಬಿಸಿಎಂ ಇಲಾಖೆಯ ಹಾಸ್ಟೆಲ್‌ನಲ್ಲಿ ಮಕ್ಕಳ ಸಂಖ್ಯೆ ಹೆಚ್ಚು ಮಾಡಿರುವಂತೆ ಸಿಬ್ಬಂದಿ ಸಂಖ್ಯೆಯನ್ನು ಹೆಚ್ಚಳ ಮಾಡಬೇಕು. ಬಾಕಿ ಇರುವ ವೇತನವನ್ನು ಕೂಡಲೇ ಕೊಡಬೇಕು. ನೇರ ನೇಮಕಾತಿ ಸಮಯದಲ್ಲಿ ಕೆಲಸ ಕಳೆದುಕೊಂಡ ಹೊರಗುತ್ತಿಗೆ ನೌಕರರನ್ನು ಮತ್ತೆ ಕೆಲಸಕ್ಕೆ ತೆಗೆದುಕೊಳ್ಳಬೇಕು. ಬಿಸಿಎಂ ಇಲಾಖೆಯ ಹಾಸ್ಟೆಲ್‌ಗಳಿಗೆ ಕಾವಲುಗಾರರನ್ನು ನಿಯೋಜಿಸಬೇಕು ಎಂದು ಒತ್ತಾಯಿಸಿದರು.
ಜನಪ್ರತಿನಿಧಿಗಳು ಹೊರಗುತ್ತಿಗೆ ನೌಕರರಾಗಿ ತೆಗೆದುಕೊಳ್ಳಬೇಕೆಂದು ನೀಡುವ ಶಿಫಾರಸು ಪತ್ರವನ್ನು ಪರಿಗಣಿಸಬಾರದು. ಇದರಿಂದ ಹಾಲಿ ನೌಕರರು ಕೆಲಸ ಕಳೆದುಕೊಳ್ಳುತ್ತಾರೆ. ವಾರ್ಡನ್ ಹಾಗೂ ಅಧಿಕಾರಿಗಳ ಕಿರುಕುಳ ನಿಲ್ಲಿಸಬೇಕು. ಅಕ್ರಮವಾಗಿ ನೇಮಕ ಮಾಡಿಕೊಳ್ಳುವ ವಾರ್ಡನ್ ಹಾಗೂ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ನಿವೃತ್ತಿ ನಂತರ ಜೀವನ ನಿರ್ವಹಣೆಗೆ 5 ಲಕ್ಷ ರೂ ಪರಿಹಾರ ನೀಡಬೇಕು. ಅಂತೆಯೇ ಸಿಇಒ ನೇತೃತ್ವದಲ್ಲಿ ನಾಲ್ಕು ಇಲಾಖೆಯ ಜಿಲ್ಲಾ ಮತ್ತು ತಾಲೂಕುಮಟ್ಟದ ಅಧಿಕಾರಿಗಳು ಗುತ್ತಿಗೆದಾರರ ಸಭೆ ಆಯೋಜಿಸಬೇಕೆಂದು ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಸಂಘದ ರಾಜ್ಯ ಉಪಾಧ್ಯಕ್ಷ ಎಂ.ಪುಟ್ಟಮಾದು, ಪ್ರಧಾನ ಕಾರ್ಯದರ್ಶಿ ಕೆ.ಹನುಮೇಗೌಡ, ಜಿಲ್ಲಾ ಸಂಚಾಲಕ ನಂಜುಂಡಸ್ವಾಮಿ, ಸುರೇಶ್, ಸಿ.ಕುಮಾರಿ, ಗಾಯಿತ್ರಮ್ಮ, ಮಂಗಳಮ್ಮ, ನೀಲಮ್ಮ ಇತರರಿದ್ದರು.