

ಶಿವಮೊಗ್ಗ: ಪೌರಾಡಳಿತ ಹಾಗೂ ಹಜ್ ಸಚಿವ ರಹೀಂ ಖಾನ್ ಯಾವ ಜಿಲ್ಲೆಗೆ ಹೋದರೂ ಇಂದಿರಾ ಕ್ಯಾಂಟಿನ್‌ಗೆ ಭೇಟಿ ನೀಡಿ ಆಹಾರದ ಗುಣಮಟ್ಟ ಪರೀಕ್ಷಿಸುತ್ತಾರೆ. ಸೋಮವಾರ ಶಿವಮೊಗ್ಗದಲ್ಲಿ ಇಂದಿರಾ ಕ್ಯಾಂಟಿನ್‌ಗೆ ಬಂದಿದ್ದ ಸಚಿವರಿಗೆ ಬೇರೆ ಹೋಟೆಲ್‌ನಿಂದ ಊಟ ತರಿಸಿ ಬಡಿಸುವ ಮೂಲಕ ಅಧಿಕಾರಿಗಳು ಎಡವಟ್ಟು ಮಾಡಿಕೊಂಡಿದ್ದಾರೆ.
ಡಿಡಿಪಿಐ ಕಚೇರಿ ಬಳಿಯ ಇಂದಿರಾ ಕ್ಯಾಂಟಿನ್‌ಗೆ ಸಚಿವ ರಹೀಂ ಖಾನ್ ಕಾಂಗ್ರೆಸ್ ಮುಖಂಡರೊಂದಿಗೆ ತೆರಳಿದರು. ಅಲ್ಲಿ ಬಿಸಿ ಬಿಸಿ ಪಲ್ಯ, ರೊಟ್ಟಿ, ಚಪಾತಿ ಊಟ ಬಡಿಸಲಾಯಿತು. ಕ್ಯಾಂಟಿನ್‌ನಲ್ಲಿ ಊಟ, ಉಪಾಹಾರದ ಮೆನು ಅಳವಡಿಸಿರಲಿಲ್ಲ. ಸಚಿವರು ಅಲ್ಲಿಗೆ ಬರುವ ಕೆಲ ಸಮಯದ ಮುನ್ನವಷ್ಟೇ ಹೊರಗಡೆಯಿಂದ ಊಟ ತರಿಸಲಾಗಿತ್ತು.
ಊಟ ಮುಗಿಸಿ ಹೊರಬಂದ ಸಚಿವರು ಸುದ್ದಿಗಾರರೊಂದಿಗೆ ಮಾತನಾಡಿ, ಇಂದಿರಾ ಕ್ಯಾಂಟಿನ್‌ನ ಮಹತ್ವ ವಿವರಿಸಿದರು. ನಾನೀಗ ಊಟ ಮಾಡಿದ್ದೇನೆ. ಬಹಳ ಚೆನ್ನಾಗಿತ್ತು. ಬೇರೆಯವರನ್ನೂ ಕೇಳಿದೆ ಚೆನ್ನಾಗಿತ್ತು ಎಂದಿದ್ದಾರೆ. ನೀವು ಮಾಡಿದ ಊಟವನ್ನು ಹೊರಗಿನಿಂದ ತರಿಸಲಾಗಿತ್ತೇ? ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ನಾನು ಪೌರಾಡಳಿತ ಸಚಿವನಾಗಿ ಹಾಗೆ ಹೇಳುವುದು ತಪ್ಪಾಗುತ್ತದೆ. ಆದರೆ ಅನ್ನವನ್ನು ಕಂಡಾಗ ಅದು ಇಂದಿರಾ ಕ್ಯಾಂಟಿನ್‌ನಲ್ಲಿ ಮಾಡಿದ್ದಲ್ಲ ಎಂಬ ಅನುಮಾನ ನನ್ನನ್ನು ಕಾಡುತ್ತಿದೆ ಎಂದು ನಿಜ ಬಾಯಿಬಿಟ್ಟರು.
ಗಣ್ಯರು ಬಂದಾಗ ಇಂದಿರಾ ಕ್ಯಾಂಟಿನ್‌ನಲ್ಲಿ ಹೊರಗಿನಿಂದ ಊಟ ತರಿಸುತ್ತಾರೆಂದು ನಮ್ಮ ಪಕ್ಷದ ಅನೇಕ ಮುಖಂಡರು ನನಗೆ ಹೇಳಿದ್ದಾರೆ. ನೋಡೋಣ, ಈ ಬಗ್ಗೆ ತನಿಖೆಗೆ ಆದೇಶಿಸುತ್ತೇನೆ. ಒಂದು ವೇಳೆ ಇದರಲ್ಲಿ ಅಧಿಕಾರಿಗಳ ಪಾತ್ರವಿದ್ದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಕ್ಯಾಂಟಿನ್‌ನವರೇ ತರಿಸಿದ್ದರೆ ಅವರ ವಿರುದ್ಧವೂ ಶಿಸ್ತುಕ್ರಮವಾಗಲಿದೆ. ಅವರ ಟೆಂಡರ್ ರದ್ದುಪಡಿಸಲಾಗುವುದು ಎಂದರು.