ಹೋಟೆಲ್​ ಉದ್ಯಮದಿಂದ ವಿಶ್ವಮಟ್ಟದಲ್ಲಿ ದೇಶದ ಸಂಸ್ಕೃತಿ ಪರಿಚಯ:ಥಾವರ್​ಚಂದ್​ ಗೆಹಲೋತ್​ ಮೆಚ್ಚುಗೆ

hotel award
Published on

ಬೆಂಗಳೂರು: ದೇಶದ ಪ್ರವಾಸೋದ್ಯಮ ಮತ್ತು ಆರ್ಥಿಕತೆ ಬೆಳವಣಿಗೆಗೆ ಅಪಾರ ಕೊಡುಗೆ ನೀಡುತ್ತಿರುವ ಹೋಟೆಲ್​ ಉದ್ಯಮ, ಅಂದಾಜು 30 ಲಕ್ಷಗಿಂತ ಅಧಿಕ ಜನರಿಗೆ ಉದ್ಯೋಗ ಕಲ್ಪಿಸಿದೆ ಎಂದು ರಾಜ್ಯಪಾಲ ಥಾವರ್​ಚಂದ್​ ಗೆಹಲೋತ್​ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ರಾಜ್ಯ ಹೋಟೆಲ್​ಗಳ ಸಂಘ, ನಗರದ ಎಫ್​​​​​​​​​ಕೆಸಿಸಿಐ ಸಭಾಂಗಣದಲ್ಲಿ ಗುರುವಾರ ಆಯೋಜಿಸಲಾಗಿದ್ದ "ಆತಿಥ್ಯ ರತ್ನ ಮತ್ತು ಉದ್ಯಮ ರತ್ನ' ಪ್ರಶಸ್ತಿ ಸಮಾರಂಭದಲ್ಲಿ ಮಾತನಾಡಿದರು.

ನಗರ ಮತ್ತು ಗ್ರಾಮೀಣ ಭಾಗದಲ್ಲಿ ಉದ್ಯಮವಾಗಿ ಗುರುತಿಸಿಕೊಂಡಿದೆ. ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡುವ ವಿದೇಶಿ ಪ್ರವಾಸಿಗರಿಗೆ ಶುಚಿ,ರುಚಿಯಾದ ವಿವಿಧ ಖಾದ್ಯ ಒದಗಿಸುವುದಲ್ಲದೆ, ವಿಶ್ರಾಂತಿಗೆ ಉತ್ತಮ ವ್ಯವಸ್ಥೆ ಕಲ್ಪಿಸುತ್ತಿದೆ. ಆ ಮೂಲಕ ನಾಡಿನ ಸಂಸ್ಕೃತಿ, ಪರಂಪರೆಯನ್ನು ವಿಶ್ವ ಮಟ್ಟದಲ್ಲಿ ಪರಿಚಯಿಸುವ ಕೆಲಸ ಮಾಡುತ್ತಿದೆ. ದೇಶ,ರಾಜ್ಯದ ಸಾಮಾಜಿಕ, ಆರ್ಥಿಕ ಹಾಗೂ ಸಾಂಸತಿಕ ಬೆಳವಣಿಗೆಯಲ್ಲಿ ಹೋಟೆಲ್​ ಉದ್ಯಮ ಪ್ರಮುಖ ಪಾತ್ರ ವಹಿಸಿದೆ ಎಂದರು.

ಶಾಸಕ ಡಾ.ಸಿ.ಎನ್​. ಅಶ್ವತ್ಥನಾರಾಯಣ ಮಾತನಾಡಿ, ಯಾವುದೇ ಬೆಲೆ ಹೆಚ್ಚಳವಾದರೂ ನೇರವಾಗಿ ಹೋಟೆಲ್​ ಉದ್ಯಮದ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ, ಬೆಲೆ ಏರಿಕೆ ನಿಯಂತ್ರಿಸುವ ಕೆಲಸವಾಗಬೇಕಿದೆ. ವಿವಿಧ ಕ್ಷೇತ್ರದ ಸಾಧಕರನ್ನು ಗುರುತಿಸಿ ನೀಡಲಾಗುವ ಸಾರ್ವಜನಿಕ ಪ್ರಶಸ್ತಿಗಳನ್ನು ಹೋಟೆಲ್​ ಉದ್ಯಮದವರಿಗೂ ಪರಿಗಣಿಸುವಂತೆ ಸರ್ಕಾರಕ್ಕೆ ಒತ್ತಾಯಿಸುತ್ತೇನೆ ಎಂದರು. ಹಲವು ಸಾಧಕರಿಗೆ ಆತಿಥ್ಯ ರತ್ನ ಮತ್ತು ಉದ್ಯಮ ರತ್ನ' ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಂಘದ ಅಧ್ಯಕ್ಷ ಜಿ.ಕೆ. ಶೆಟ್ಟಿ, ಗೌರವಾಧ್ಯಕ್ಷ ಚಂದ್ರಶೇಖರ್​ ಹೆಬ್ಬಾರ್​, ಮಾಜಿ ಅಧ್ಯಕ್ಷ ಸಿ.ವಿ.ಮಹದೇವಯ್ಯ, ಹೋಟೆಲ್​ ಮತ್ತು ರೆಸ್ಟೋರೆಂಟ್​ ಸಂಘಗಳ ಒಕ್ಕೂಟದ ಅಧ್ಯಕ್ಷ ಕೆ.ಶ್ಯಾಮರಾಜು ಮತ್ತಿತರರಿದ್ದರು.

ರಾಜ್ಯದ ಪ್ರವಾಸೋದ್ಯಮ ಕ್ಷೇತ್ರ ಅಭಿವೃದ್ಧಿಯಲ್ಲಿ ಹೋಟೆಲ್​ಗಳು ಪಾತ್ರ ಹಿರಿದಾಗಿದೆ. ನಮ್ಮ ಸಂಸ್ಕೃತಿ ಆಚಾರ, ವಿಚಾರಗಳು, ಸ್ಥಳಿಯ ಖಾದ್ಯವನ್ನು ವಿಶ್ವಕ್ಕೆ ಪರಿಚಯಿಸುತ್ತಿದೆ. ಈ ಉದ್ಯಮ ಎದುರಿಸುತ್ತಿರುವ ಸಮಸ್ಯೆಗಳ ಈಡೇರಿಸುವ ಕಾರ್ಯವನ್ನು ಜನಪ್ರತಿನಿಧಿಗಳು ಮಾಡುವಂತಾಗಲಿ.

| ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net