ಹೋಟೆಲ್‌ನಲ್ಲಿ ಫೈಬರ್ ಗ್ಲಾಸ್ ಸ್ಕ್ರೀನ್

glassl new
Published on

ವೇಣುವಿನೋದ್ ಕೆ.ಎಸ್.ಮಂಗಳೂರು

ಕರೊನಾ ಲಾಕ್‌ಡೌನ್ ಬಳಿಕ ಹೋಟೆಲ್‌ಗಳು ವಾರದ ಹಿಂದೆ ಪುನರಾರಂಭಗೊಂಡಿದ್ದು, ಎಂದಿನಂತೆ ವಹಿವಾಟು ಇನ್ನೂ ಚುರುಕುಕೊಂಡಿಲ್ಲ. ಈ ನಡುವೆ ಸರ್ಕಾರದ ಸೂಚನೆ ಮೇರೆಗೆ, ನಗರದ ಹೋಟೆಲೊಂದರಲ್ಲಿ ಮೊದಲ ಬಾರಿಗೆ ಗ್ರಾಹಕರ ಮಧ್ಯೆ ಅಂತರ ಕಾಪಾಡುವ ನವೀನ ವ್ಯವಸ್ಥೆ ಪರಿಚಯಿಸಲಾಗಿದೆ.

ಎದುರು-ಬದುರಾಗಿ ಇಬ್ಬರು ಕುಳಿತುಕೊಳ್ಳುವಾಗ ಒಬ್ಬರು ಕೆಮ್ಮಿದರೆ ಇನ್ನೊಬ್ಬರಿಗೆ ಕರೊನಾ ಸೋಂಕು ಹರಡುವ ಸಾಧ್ಯತೆ ಇದೆ. ಅದನ್ನು ತಪ್ಪಿಸಲು ನಗರದ ಕೂಳೂರಿನಲ್ಲಿರುವ ಹೋಟೆಲ್ ಗಡಿಯಾರ್ ಮಾಲೀಕರು ಇಬ್ಬರು ಗ್ರಾಹಕರನ್ನು ಪ್ರತ್ಯೇಕಿಸುವ ಹಗುರವಾದ ಫೈಬರ್ ಗಾಜನ್ನು ಇಡುವ ವ್ಯವಸ್ಥೆ ಮಾಡಿದ್ದಾರೆ.

ನಮಗೆ ಗ್ರಾಹಕರ ಸುರಕ್ಷತೆ ಮುಖ್ಯ. ಒಂದು ವೇಳೆ ಅವರಿಗೆ ಸೋಂಕು ಇದ್ದರೆ, ಅವರಿಂದ ನಮ್ಮ ಸಿಬ್ಬಂದಿಗೂ ಹರಡಬಹುದು. ಅದಕ್ಕಾಗಿ ಎಚ್ಚರಿಕೆ ಕ್ರಮವಾಗಿ ಸರ್ಕಾರದ ಮಾರ್ಗಸೂಚಿ ಅನುಸಾರ ಇಂತಹ ಗಾಜಿನ ಗೋಡೆ ರೂಪಿಸಿದ್ದೇವೆ. ಸಿಂಗಾಪುರದಲ್ಲಿ ಇದೇ ರೀತಿ ವ್ಯವಸ್ಥೆ ಇದೆ. ಬೆಂಗಳೂರಿನಲ್ಲಿ ಕೆಲವು ರೆಸ್ಟೋರೆಂಟ್‌ಗಳಲ್ಲಿ ಮಾಡಿರಬಹುದು, ಆದರೆ ಮಂಗಳೂರಿನಲ್ಲಿ ಇದನ್ನು ನಾನು ಮೊದಲು ಮಾಡಿದ್ದೇನೆ. ಕಾಯಂ ಗ್ರಾಹಕರು ಇದನ್ನು ಮೆಚ್ಚಿದ್ದಾರೆ ಎಂದು ಹೋಟೆಲ್ ಮಾಲೀಕ ಗಣೇಶ್ ಶೆಟ್ಟಿ ತಿಳಿಸಿದರು.

ಬೇಕಾದ ಕಡೆ ಎತ್ತಿ ಇಡಬಹುದು ಸಿಂಗಾಪುರದಲ್ಲಿರುವ ಬಂಧುವೊಬ್ಬರು ಫೈಬರ್ ಗಾಜಿನ ಸ್ಕ್ರೀನ್ ವಿಷಯವನ್ನು ಗಣೇಶ್ ಶೆಟ್ಟಿ ಅವರ ಗಮನಕ್ಕೆ ತಂದಿದ್ದರು. ಅದರಂತೆ ಅಗತ್ಯ ವಸ್ತುಗಳನ್ನು ಖರೀದಿಸಿದ ಗಣೇಶ್ ತಮಗೆ ಬೇಕಾದ ರೀತಿಯಲ್ಲಿ ಗ್ಲಾಸ್ ಸ್ಕ್ರೀನ್ ಮಾಡಿಸಿಕೊಂಡಿದ್ದಾರೆ. ಈ ಗ್ಲಾಸ್ ಸ್ಕ್ರೀನ್ ಸುಲಭದಲ್ಲಿ ಒಡೆಯದು. ಬೇಕಾದ ಕಡೆಗೆ ಎತ್ತಿ ಇರಿಸಬಹುದು. ಪಾರದರ್ಶಕವಾದ್ದರಿಂದ ಮುಂದೆ ಕುಳಿತವರ ಮುಖಕ್ಕೆ ಅಡ್ಡವೂ ಆಗದು.

ಬಹುತೇಕ ಹೋಟೆಲ್‌ಗಳು ಇನ್ನೂ ಇಂತಹ ಕ್ರಮ ಅನುಸರಿಸುತ್ತಿಲ್ಲ. ಇದರಿಂದಾಗಿ ಕರೊನಾ ಹರಡಬಹುದು. ಸೋಂಕು ತಡೆಗೆ ಖರ್ಚಾದರೂ ಇಂತಹ ಗ್ಲಾಸ್ ಸ್ಕ್ರೀನ್ ಹಾಕಿದ್ದೇನೆ. ಸುರಕ್ಷತೆಗೆ ಜನ ಮೆಚ್ಚಿದ್ದಾರೆ. ಗಣೇಶ್ ಶೆಟ್ಟಿ, ಮಾಲೀಕ, ಹೋಟೆಲ್ ಗಡಿಯಾರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net