ಹೋಟೆಲ್‌ಗಳು ಖಾಲಿ ಖಾಲಿ

2SND-02
Published on

ಸಿಂಧನೂರು: ಹೆಚ್ಚುತ್ತಿರುವ ತಾಪಮಾನ ಬೀದಿ ಬದಿ ವ್ಯಾಪಾರ ಮತ್ತು ಹೋಟೆಲ್ ಉದ್ಯಮದ ಮೇಲೆ ತೀವ್ರ ಪೆಟ್ಟು ಬಿದ್ದಿದೆ. ಹೋಟೆಲ್‌ಗಳಿಗೆ ಗ್ರಾಹಕರು ಬರುತ್ತಿಲ್ಲ.

ಉಷ್ಣಾಂಶ ದಾಖಲೆಯ ಹೆಚ್ಚಳದಿಂದ ಜನರು ಮನೆಯಿಂದ ಹೊರಬರಲು ಹಿಂಜರಿಯುತ್ತಿದ್ದಾರೆ. ಮಾರುಕಟ್ಟೆಗೆ ಹೋಗುವುದು ಸೇರಿ ಮನೆ ಹೊರಗಿನ ಕೆಲಸಗಳನ್ನು ಬೆಳಗ್ಗೆ 11 ಗಂಟೆಯೊಗೆ ಮುಗಿಸಲು ಯತ್ನಿಸುತ್ತಿದ್ದಾರೆ. ಗ್ರಾಮೀಣ ಪ್ರದೇಶದ ಜನರು ಕೂಡ ನಗರದತ್ತ ಬರುವುದು ಕಡಿಮೆಯಾಗಿದೆ. ಇದರಿಂದಾಗಿ ಮಧ್ಯಾಹ್ನದ ಬಳಿಕ ಬೀದಿ ಬದಿ ವ್ಯಾಪಾರ ಹಾಗೂ ಹೋಟೆಲ್ ವಹಿವಾಟು ಸಂಪೂರ್ಣ ಸ್ತಬ್ಧವಾದಂತಾಗಿದೆ. ಸುಡು ಬಿಸಿಲಿನ ಅಲೆಯ ಹೊಡೆತದಿಂದ ಸಂರಕ್ಷಿಸಿಕೊಳ್ಳಲು ಜನರು ಮನೆಯಿಂದ ಹೊರಬರದಿರುವುದೇ ಇದಕ್ಕೆ ಕಾರಣವಾಗಿದೆ.

ಬಹುತೇಕ ಕಳೆದ ಒಂದು ತಿಂಗಳಿಂದ ಹೋಟೆಲ್ ವಹಿವಾಟು ಇಳಿಮುಖವಾಗಿದೆ. ಮಧ್ಯಾಹ್ನ ಇಲ್ಲವೇ ಸಂಜೆ ಹೋಟೆಲ್‌ಗೆ ಬಂದು ಊಟ ಮಾಡುವವರ ಸಂಖ್ಯೆ ಕಡಿಮೆಯಾಗಿದೆ. ವಿಪರೀತ ಬಿಸಿಲಿನಿಂದಾಗಿ ಮಧ್ಯಾಹ್ನ ಜನರು ಟಿ, ಕಾಫಿ ಸೇವಿಸುತ್ತಿಲ್ಲ. ಹೀಗಾಗಿ ಕೇವಲ ಟೀ, ಕಾಫಿ ಮಾರಾಟ ಮಾಡುವವರು ಕೂಡ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಬಿಸಿಗಾಳಿ ಬೀಸಲಿದ್ದು, ಮಧ್ಯಾಹ್ನ 12ರಿಂದ ಸಂಜೆ 4 ಗಂಟೆವರೆಗೆ ಬಿಸಿಲಿನಲ್ಲಿ ಹೋಗುವುದನ್ನು ತಪ್ಪಿಸಿ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿರುವುದರಿಂದ ಜನರು ಮನೆಯಿಂದ ಹೊರಬರಲು ಹೆದರುವಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net