

ಉಡುಪಿ/ಮಂಗಳೂರು: ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಬೆಲೆ ಏರಿಕೆಯಿಂದಾಗಿ ಹೋಟೆಲ್ ಉದ್ಯಮ ಸಂಕಷ್ಟಕ್ಕೆ ಸಿಲುಕಿದೆ. ಬೆಲೆ ಏರಿಕೆಯಿಂದ ಹೊಡೆತ ತಿನ್ನುತ್ತಿರುವ ಹೋಟೆಲ್‌ಗಳ ಮಾಲೀಕರಲ್ಲಿ ತಿಂಡಿ ತಿನಸು ಬೆಲೆ ಏರಿಸಲಾಗದೆ ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ.
ಹೆಚ್ಚುತ್ತಿರುವ ವೆಚ್ಚಗಳನ್ನು ಭರಿಸಲು ಊಟ, ಉಪಾಹಾರದ ದರ ಹೆಚ್ಚಳ ಮಾಡಬೇಕು, ಬೆಲೆ ಹೆಚ್ಚಿಸಿದಲ್ಲಿ ಗ್ರಾಹಕರನ್ನು ಕಳೆದುಕೊಳ್ಳುವ ಆತಂಕ. ಕರೊನಾ ಲಾಕ್‌ಡೌನ್ ಬಳಿಕ ಆರಂಭದಲ್ಲೇ ಕೆಲವು ಹೋಟೆಲ್‌ಗಳು ದರ ಹೆಚ್ಚಳ ಮಾಡಿದ್ದವು. ಇನ್ನು ಕೆಲವರು ಹೊಸ ವರ್ಷದ ಆರಂಭದಿಂದ ತಿಂಡಿ ತಿನಿಸುಗಳ ದರ ಹೆಚ್ಚಿಸಿದ್ದರು. ಚಹಾ, ಕಾಫಿ ತಿಂಡಿ, ಊಟ ಎಲ್ಲದರ ಬೆಲೆಯನ್ನೂ 1ರಿಂದ 4 ರೂ. ವರೆಗೂ ಏರಿಸಲಾಗಿತ್ತು. ಹೀಗೆ ಹೆಚ್ಚಳ ಮಾಡಿದ್ದರಿಂದ ಕೆಲವು ಹೋಟೆಲ್‌ಗಳು ವ್ಯಾಪಾರ ಇಲ್ಲದೆ ಮುಚ್ಚಲ್ಪಟ್ಟಿವೆ ಎನ್ನುತ್ತಾರೆ ಹೋಟೆಲ್‌ಗಳ ಮಾಲೀಕರು.
ಈಗಲೂ ಕೆಲವು ಹೋಟೆಲ್‌ಗಳಲ್ಲಿ ಎಲ್ಲ ಟೇಬಲ್‌ಗಳನ್ನು ಮುಕ್ತವಾಗಿರಿಸಿಲ್ಲ. ಶೇ.70ರಷ್ಟು ಮಾತ್ರ ಟೇಬಲ್‌ಗಳು ಗ್ರಾಹಕರಿಗಾಗಿ ಇಡಲಾಗಿದೆ. ಅದಕ್ಕೂ ಗ್ರಾಹಕರು ಭರ್ತಿಯಾಗುತ್ತಿಲ್ಲ. ಈ ಸಮಯದಲ್ಲಿ ಉಪಾಹಾರ, ಚಹಾ, ಊಟಕ್ಕೆ ದರ ಏರಿಕೆ ಮಾಡಿದಲ್ಲಿ ಇರುವ ಗ್ರಾಹಕರು ಕಡಿಮೆಯಾಗಬಹುದು. ಕೆಲವು ಸಾಮಗ್ರಿಗಳಿಗೆ ಬೆಲೆ ಏರಿಕೆ ಆಗಿದೆ. ಹೇಗೋ ನಿರ್ವಹಣೆ ಮಾಡುತ್ತಿದ್ದೇವೆ ಎನ್ನುತ್ತಾರವರು.
‘ಲಾಕ್‌ಡೌನ್ ಬಳಿಕ ವ್ಯಾಪಾರಕ್ಕೆ ಸಮಸ್ಯೆಯಾಗಿರುವುದು ಹೌದು. ತೈಲ ಬೆಲೆ ಏರಿಕೆ ನೇರ ಪರಿಣಾಮ ಬಿದ್ದಿಲ್ಲ. ಸಸ್ಯಾಹಾರಿ ಹೋಟೆಲ್ ಉದ್ಯಮ ನಿರ್ವಹಣೆ ಅಲ್ಲಿಂದ ಅಲ್ಲಿಗೆ ಆಗುತ್ತಿದೆ’ ಎಂದು ಉಡುಪಿಯ ದುರ್ಗಾಪ್ರಸಾದ್ ಹೋಟೆಲ್ ಮಾಲೀಕ ಶ್ರೀಧರ ಭಟ್ ಪ್ರತಿಕ್ರಿಯಿಸಿದ್ದಾರೆ.
‘ಪಾಮ್ ಆಯಿಲ್, ಗ್ಯಾಸ್, ಮೀನು, ತೆಂಗಿನೆಣ್ಣೆ, ಹೀಗೆ ಎಲ್ಲ್ಲ ಪೂರಕ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ನಮಗೆ ನಡೆಸುವುದು ನಿಜಕ್ಕೂ ಕಷ್ಟವಾಗಿದೆ. ಹಾಗೆಂದು ಗ್ರಾಹಕರ ಮೇಲೆ ಹೊರೆಯನ್ನು ಹಾಕಲು ಹೋದರೆ ಮತ್ತೆ ಅವರು ಬರುವುದೇ ಕಷ್ಟ. ಈಗಾಗಲೇ ಕೋವಿಡ್‌ನ ಹೊಡೆತದಿಂದ ಚೇತರಿಸಿಕೊಳ್ಳುತ್ತಿರುವಾಗ ಮತ್ತೆ ಬೆಲೆ ಏರಿಸುವುದು ಹೇಗೆ’ ಎನ್ನುತ್ತಾರೆ ಕೂಳೂರಿನ ಗಡಿಯಾರ್ ರೆಸ್ಟೋರೆಂಟ್ ಮಾಲೀಕ ಗಣೇಶ್ ಶೆಟ್ಟಿ.
ಮೊದಲೇ ಲಾಕ್‌ಡೌನ್‌ನಿಂದ ತತ್ತರಿಸಿದ್ದ ಹೋಟೆಲ್ ಮಾಲೀಕರು, ಬೆಲೆ ಏರಿಕೆ ಪರಿಣಾಮ ವ್ಯಾಪಾರ ಮತ್ತೆ ನಷ್ಟದಲ್ಲಿ ಸಾಗುವಂತಾಗಿದೆ. ದರ ಏರಿಸಲು ನಮ್ಮಿಂದ ಸಾಧ್ಯವಾಗುತ್ತಿಲ್ಲ.
- ಡಾ.ತಲ್ಲೂರು ಶಿವರಾಮ ಶೆಟ್ಟಿ, ಅಧ್ಯಕ್ಷ, ಉಡುಪಿ ಜಿಲ್ಲಾ ಹೋಟೆಲ್ ಮಾಲೀಕರ ಸಂಘ