ಹೋಟೆಲ್ ಉದ್ಯಮಕ್ಕೆ ಮತ್ತೆ ಸಂಕಷ್ಟ, ನೈಟ್, ವೀಕೆಂಡ್ ಕರ್ಫ್ಯೂಗಳಿಂದ ಗ್ರಾಹಕರ ಸಂಖ್ಯೆ ತೀವ್ರ ಕುಸಿತ

hotel new
Published on

ಉಡುಪಿ: ಕಳೆದ ವರ್ಷ ಕೋವಿಡ್ ಲಾಕ್‌ಡೌನ್ ಪರಿಣಾಮ ಸಂಪೂರ್ಣ ನೆಲಕಚ್ಚಿದ್ದ ಹೋಟೆಲ್ ಉದ್ಯಮ ಪ್ರಸಕ್ತ ಸುಧಾರಣೆಯತ್ತ ಮುಖ ಮಾಡುತ್ತಿರುವಾಗಲೇ ಕೋವಿಡ್ ಎರಡನೇ ಅಲೆ ಮಾರ್ಗಸೂಚಿ ಹೊಡೆತ ನೀಡಿದೆ.

ಹೋಟೆಲ್ ವ್ಯಾಪಾರಸ್ಥರಿಗೆ ಮತ್ತೆ ನಷ್ಟದ ಸುಳಿಗೆ ಸಿಲುಕುವ ಆತಂಕ ಎದುರಾಗಿದೆ. ಕರೊನಾ ಪ್ರಕರಣಗಳು ಹೆಚ್ಚಳವಾಗುತ್ತಿದ್ದಂತೆ ಕಳೆದ ಹದಿನೈದು ದಿನಗಳಿಂದ ಹೋಟೆಲ್‌ಗಳಲ್ಲಿ ಗ್ರಾಹಕರ ಸಂಖ್ಯೆ ತೀವ್ರ ಇಳಿಕೆ ಕಂಡಿತ್ತು. ಪ್ರವಾಸೋದ್ಯಮ ಚಟುವಟಿಕೆ ಸಂಪೂರ್ಣ ಸ್ತಬ್ಧವಾಗಿರುವುದು ವ್ಯಾಪಾರಕ್ಕೆ ತೀವ್ರ ಸಮಸ್ಯೆಯಾಗಿತ್ತು. ಈಗ ವೀಕೆಂಡ್ ಕರ್ಫ್ಯೂ ಮತ್ತು ಪಾರ್ಸೆಲ್‌ಗೆ ಮಾತ್ರ ಅವಕಾಶ ನೀಡಿರುವುದು ಹೋಟೆೆಲ್ ನಡೆಸುವವರಿಗೆ ದೊಡ್ಡ ಅಘಾತ ಉಂಟುಮಾಡಿದೆ ಎನ್ನುತ್ತಾರೆ ಹೋಟೆಲ್ ಮಾಲೀಕರ ಸಂಘದ ಕಾರ್ಯದರ್ಶಿ ನಾಗೇಶ್ ಭಟ್
ಕಳೆದ ಲಾಕ್‌ಡೌನ್ ಅವಧಿಯಲ್ಲಿ ಬೆರಳೆಣಿಕೆ ಹೋಟೆಲ್ ಹೊರತುಪಡಿಸಿ ಬಹುತೇಕ ಹೋಟೆಲ್‌ಗಳು ಹಲವು ತಿಂಗಳ ಕಾಲ ಬಾಗಿಲು ಮುಚ್ಚಿದ್ದವು. ವರ್ಷಾಂತ್ಯಕ್ಕೆ ಜಿಲ್ಲೆಯಲ್ಲಿ ಸೋಂಕು ಕ್ಷೀಣವಾಗಿದ್ದರಿಂದ ಉದ್ಯಮ ಮತ್ತೆ ಚೇತರಿಕೆ ಹಾದಿಗೆ ಮರಳಿತು. ತಿಂಗಳ ಹಿಂದೆ ಹೋಟೆಲ್‌ಗಳು ಗ್ರಾಹಕರಿಂದ ಉತ್ತಮ ವಹಿವಾಟು ನಡೆಸಿದ್ದು, ಗ್ರಾಹಕ ಸಂಖ್ಯೆ ಉತ್ತಮ ಸ್ಥಿತಿಯಲ್ಲಿತ್ತು. ಕಳೆದ 15-20 ದಿನಗಳಿಂದ 40ರಷ್ಟು ಆಸನಗಳು ಭರ್ತಿಯಾಗುತ್ತಿಲ್ಲ. ಲಾಭವಿರಲಿ, ನಷ್ಟವಾಗದಂತೆ ಹೋಟೆಲ್ ನಡೆಸುವುದು ಸವಾಲಿನ ವಿಚಾರವಾಗಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಮತ್ತೆ ಹೋಟೆಲ್‌ಗಳನ್ನು ಮುಚ್ಚಬೇಕಾಗುತ್ತದೆ. ಮಾಲೀಕರು ಸೇರಿದಂತೆ ಸಾವಿರಾರು ಮಂದಿ ನೌಕರರು ಬೀದಿ ಪಾಲಾಗಲಿದ್ದಾರೆ.

ಸಾಲದ ಸುಳಿಯಲ್ಲಿ ವ್ಯಾಪಾರಿಗಳು
ಕರೊನಾ ಕ್ಷೀಣವಾಗುತ್ತಿದ್ದಂತೆ ದೂರದ ಊರುಗಳಿಂದ ಮರಳಿದ ಬಹುತೇಕ ಮಂದಿ ಹೊಸ ಉದ್ಯಮಗಳನ್ನು ಆರಂಭಿಸಿದ್ದರು. ಅದರಲ್ಲಿ ಕೆಲವರು ಹೋಟೆಲ್ ಉದ್ಯಮವನ್ನು ಆಯ್ಕೆ ಮಾಡಿಕೊಂಡಿದ್ದು, ಉದ್ಯಮಕ್ಕೆ ಕಾಲಿಟ್ಟ ಯುವ ಉದ್ಯಮಿಗಳು ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ. ಲಕ್ಷಾಂತರ ರೂಪಾಯಿ ಬಂಡವಾಳ ಹೂಡಿ ಹೋಟೆಲ್ ಆರಂಭಿಸಿದ್ದೇವೆ. ಕಾರ್ಮಿಕರ ವೇತನ, ಬಾಡಿಗೆ, ಸಾಲದ ಇಎಂಐ ಸೇರಿದಂತೆ ಪ್ರತಿ ತಿಂಗಳು ದೊಡ್ಡ ಮೊತ್ತವನ್ನು ಕಟ್ಟಬೇಕು. ಈಗ ಎರಡನೇ ಅಲೆಯಿಂದಾಗಿ ಹೋಟೆಲ್ ಸಂಪೂರ್ಣ ಮುಚ್ಚಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಕೋವಿಡ್ ಲಾಕ್‌ಡೌನ್ ಅವಧಿಯಲ್ಲಿ ನೆಲಕಚ್ಚಿದ್ದ ಹೋಟೆಲ್ ಉದ್ಯಮ ಸುಧಾರಣೆ ಕಾಣುವ ಸಮಯದಲ್ಲಿ ಕೋವಿಡ್ ಎರಡನೇ ಅಲೆ ಹೊಟೆಲ್ ಉದ್ಯಮವನ್ನು ಮತ್ತೆ ಸಂಕಷ್ಟಕ್ಕೆ ಸಿಲುಕಿಸಿದೆ. ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಮಾರ್ಗಸೂಚಿಗಳಿಂದ ಹೋಟೆಲ್ ವಹಿವಾಟು ಸಂಪೂರ್ಣ ನೆಲಕಚ್ಚಲಿವೆ. ಕಳೆದ 15 ದಿನಗಳಿಂದ ಪ್ರವಾಸಿಗರು, ಗ್ರಾಹಕರು ಇಲ್ಲದೆ ವ್ಯಾಪಾರ ಸಂಪೂರ್ಣ ಕುಸಿದಿತ್ತು. ಕಳೆದ ಕೆಲವು ದಿನಗಳಿಂದ ವ್ಯಾಪಾರವಿಲ್ಲದೇ ಬಹುತೇಕ ಹೋಟೆಲ್ ಮಾಲೀಕರು ಬಾಡಿಗೆ, ವಿದ್ಯುತ್, ಕಾರ್ಮಿಕರ ವೇತನ ನೀಡಲು ಸಾಧ್ಯವಾಗಿಲ್ಲ.
- ಡಾ.ತಲ್ಲೂರು ಶಿವರಾಮ ಶೆಟ್ಟಿ, ಅಧ್ಯಕ್ಷ. ಜಿಲ್ಲಾ ಹೋಟೆಲ್ ಮಾಲೀಕರ ಸಂಘ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net