

ಮಂಗಳೂರು: ಬೇಸಿಗೆಯ ತಾಪಮಾನ ಕರಾವಳಿ ಸೇರಿದಂತೆ ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಹೆಚ್ಚುತ್ತಲೇ ಇದ್ದು, ಮೇ 2ರವರೆಗೆ ಕರಾವಳಿಯಲ್ಲಿ ಬಿಸಿ ಗಾಳಿ (ಉಷ್ಣ ಮಾರುತ) ಪ್ರಮಾಣ ಇನ್ನಷ್ಟು ಹೆಚ್ಚುವ ಸಾಧ್ಯತೆಯಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಎಚ್ಚರಿಸಿದೆ.
ಮೇ 2ರವರೆಗೆ ದ.ಕ, ಉಡುಪಿ, ಉತ್ತರ ಕನ್ನಡ ಸೇರಿದಂತೆ ರಾಜ್ಯದ ಒಳನಾಡು ಜಿಲ್ಲೆಗಳಲ್ಲಿ ಬಿಸಿಗಾಳಿ ಅಲೆ ಹೆಚ್ಚಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿ ಮಾಡಿದೆ. ಬಿಸಿಗಾಳಿಯಿಂದಾಗಿ ಉಂಟಾಗುವ ಸನ್ ಸ್ಟ್ರೋಕ್ ಮತ್ತು ಇತರ ಸಮಸ್ಯೆಗಳಿಂದ ತಪ್ಪಿಸಿಕೊಳ್ಳಲು ಮಧ್ಯಾಹ್ನ 1ರಿಂದ 3ರವರೆಗೆ ಬಿಸಿಲಿನಲ್ಲಿ ಹೊರಗೆ ಹೋಗಬಾರದು, ತೆಳು-ಹಗುರ ಬಟ್ಟೆಗಳನ್ನು ಧರಿಸಬೇಕು, ನಿರ್ಜಲೀಕರಣ ತಡೆಯಲು ನೀರು ಕುಡಿಯುತ್ತಿರಬೇಕು ಎಂದು ಸೂಚನೆ ನೀಡಲಾಗಿದೆ.
ದ.ಕ. ಜಿಲ್ಲೆಯ ಗರಿಷ್ಠ ತಾಪಮಾನ ಸದ್ಯಕ್ಕೆ ಸ್ಥಿರವಾಗಿದೆ. ಸೋಮವಾರ ಈ ಪ್ರಮಾಣ 34 ಡಿಗ್ರಿ ಸೆಲ್ಸಿಯಸ್ಗೆ ಇಳಿಕೆಯಾಗಿದ್ದು, ಭಾನುವಾರ ಗರಿಷ್ಠ 34.9 ಡಿಗ್ರಿ ಸೆಲ್ಸಿಯಸ್, ಕನಿಷ್ಠ 24 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಕರಾವಳಿ ಜಿಲ್ಲೆಗಳ ದಿನದ ಸರಾಸರಿ ತಾಪಮಾನ 36.7 ಡಿಗ್ರಿ ಸೆಲ್ಸಿಯಸ್, ಕನಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್. ಜಿಲ್ಲೆಯ ಬಹುತೇಕ ಗಡಿ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚನೆ ಇರಲಿದೆ.