

ಲಿಂಗಸುಗೂರು: ಸುಡುಬಿಸಿಲು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಝಳ ತಾಳದೆ ಜನರು ನೆರಳು ಆಶ್ರಯಿಸುವ ಜತೆಗೆ ಕಲ್ಲಂಗಡಿ, ಕರಬೂಜು ಹಣ್ಣು, ತಂಪು ಪಾನೀಯಗಳಿಗೆ ಮೊರೆ ಹೋಗುತ್ತಿದ್ದಾರೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಏಪ್ರಿಲ್ ಆರಂಭದಿಂದಲೇ ಸೂರ್ಯನ ಪ್ರತಾಪ ಭೂಮಿ ಸುಡುವ ಕೆಂಡದಂತಾಗಿದ್ದು, ಕ್ರಮೇಣ ತಾಪಮಾನ ಏರುತ್ತಿದೆ. ಜತೆಗೆ ಕಳೆದೊಂದು ವಾರದಿಂದ ತಾಪಮಾನ ಜತೆಗೆ ಬಿಸಿ ಉಷ್ಣಾಂಶದಿಂದ ಕೂಡಿದ ಹವಾಮಾನ ಮಿಶ್ರಣದಿಂದಾಗಿ ಜನ-ಜಾನುವಾರುಗಳು ಬಳಲುತ್ತಿವೆ. ಬಿಸಿಲಿಗೆ ಅಂಜಿ ಜನರು ಬೆಳಗ್ಗೆ 11 ರಿಂದ ಮಧ್ಯಾಹ್ನ 4 ಗಂಟೆವರೆಗೆ ಹೊರ ಬರಲು ಹಿಂದೇಟು ಹಾಕುವಂತಾಗಿದೆ.
ಸಾರ್ವಜನಿಕರು ಟೋಪಿ, ಕೊಡೆ ಬಳಸಿದರೆ, ಮನೆ, ಕಚೇರಿ, ವ್ಯಾಪಾರಿ ಮಳಿಗೆಗಳಲ್ಲಿ ಫ್ಯಾನ್, ಏರ್‌ಕೂಲರ್, ಏರ್ ಕಂಡೀಷ್ನರ್ ಸೇರಿದಂತೆ ತಂಪು ನೀಡುವ ಯಂತ್ರಗಳ ಮೊರೆ ಹೋಗಿದ್ದಾರೆ. ಮಾರುಕಟ್ಟೆಯಲ್ಲಿ ಅವುಗಳ ಬೇಡಿಕೆಯೂ ಹೆಚ್ಚಾಗಿದ್ದು, ಗ್ರಾಮೀಣ ಭಾಗದ ಜನತೆ ಆಗಾಗ ವಿದ್ಯುತ್ ವ್ಯತ್ಯಯದಿಂದ ಸಂಕಷ್ಟ ಎದುರಿಸುವುದು ಅನಿವಾರ್ಯವಾಗಿದೆ.
ಬಿಸಿಲಿನ ತಾಪ ನೀಗಿಸಿಕೊಳ್ಳಲು ಕಲ್ಲಂಗಡಿ, ಕರಬೂಜು ಹಣ್ಣುಗಳ ಸೇವನೆ ಹಾಗೂ ಎಳೆನೀರು, ಕಬ್ಬಿನ ಹಾಲು, ಜ್ಯೂಸ್, ಶರಬತ್, ಮಜ್ಜಿಗೆ, ಲಸ್ಸಿ, ಐಸ್‌ಕ್ರೀಮ್ ಸೇರಿದಂತೆ ಇತರ ತಂಪು ಪಾನೀಯಗಳ ಮೊರೆ ಹೋಗಿದ್ದು, ಮಾರಾಟ ಜೋರಾಗಿದೆ. ಕಲ್ಲಂಗಡಿ ಒಂದು (ಹಣ್ಣಿನ ತುಂಡು)ಪ್ಲೇಟ್‌ಗೆ 20 ರೂ. ಹಾಗೂ ಒಂದು ಕೆಜಿಗೆ 25 ರೂ.ಇದೆ.