ಮಾರ್ಗಸೂಚಿ ದರ ಏರಿಕೆಯ ಬಿಸಿ

SRO
Published on

ಸಂತೋಷ ವೈದ್ಯ ಹುಬ್ಬಳ್ಳಿ
ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿನ ಸ್ಥಿರಾಸ್ತಿಗಳ ಮಾರ್ಗಸೂಚಿ ದರವನ್ನು ಯದ್ವಾತದ್ವಾ ಏರಿಕೆ ಮಾಡಿ ಪರಿಷ್ಕರಣೆ ಮಾಡಿರುವುದು ರಿಯಲ್ ಎಸ್ಟೇಟ್ ಉದ್ಯಮವನ್ನು ಕಂಗೆಡಿಸಿದೆ. ಪರಿಷ್ಕೃತ ದರವು ಯಥಾವತ್ತಾಗಿ ಜಾರಿಯಾದರೆ ರಿಯಲ್ ಎಸ್ಟೇಟ್ ಉದ್ಯಮದ ಜತೆಗೆ ನಾಗರಿಕರಿಗೂ ಹೊರೆಯಾಗಲಿದೆ.

ಸ್ಥಿರಾಸ್ತಿ ಖರೀದಿ ಮೇಲೆ ನಾಗರಿಕರು ಮಾರ್ಗಸೂಚಿ ದರಕ್ಕೆ ಅನುಗುಣವಾಗಿ ಶೇ. 5.6ರಷ್ಟು ಮುದ್ರಾಂಕ ಶುಲ್ಕ ಹಾಗೂ ಶೇ. 1 ರಷ್ಟು ನೋಂದಣಿ ಶುಲ್ಕ ಪಾವತಿಸಬೇಕು. ಇದರಿಂದಲೇ ಮುದ್ರಾಂಕ ಮತ್ತು ನೋಂದಣಿ ಇಲಾಖೆಯ ಹುಬ್ಬಳ್ಳಿ ಉತ್ತರ ಹಿರಿಯ ಉಪ ನೋಂದಣಾಧಿಕಾರಿ ಕಚೇರಿಯು 2022-23ನೇ ಸಾಲಿನಲ್ಲಿ 106.5 ಕೋಟಿ ರೂ. ಹಾಗೂ ಹುಬ್ಬಳ್ಳಿ ದಕ್ಷಿಣ ಹಿರಿಯ ಉಪ ನೋಂದಣಾಧಿಕಾರಿ ಕಚೇರಿಯು 65 ಕೋಟಿ ರೂ. ಆದಾಯ ಗಳಿಸಿತ್ತು.
2023-24ನೇ ಸಾಲಿಗೆ ಈ ಆದಾಯವು ದುಪ್ಪಟ್ಟಾಗುವ ಎಲ್ಲ ಸಾಧ್ಯತೆಗಳಿವೆ. ಪರಿಷ್ಕೃತ ಮಾರ್ಗಸೂಚಿ ದರದಲ್ಲಿ ಶೇ. 30ರಿಂದ ಶೇ. 230ರವರೆಗೆ ಏರಿಕೆಯನ್ನು ತೋರಿಸಲಾಗಿದೆ. 2023-24ನೇ ಸಾಲಿನ ಪರಿಷ್ಕೃತ ಮಾರ್ಗಸೂಚಿ ದರವು ಅಕ್ಟೋಬರ್ 1ರಿಂದ ಜಾರಿಯಾಗಲಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಇಲಾಖೆ ಆಕ್ಷೇಪಣೆಗಳನ್ನು ಆಹ್ವಾನಿಸಿದ್ದು, ನಗರದ ಬಿಲ್ಡರ್ಸ್‌, ಡೆವಲಪರ್ಸ್‌ ಆಕ್ಷೇಪಣೆಗಳನ್ನು ಸಲ್ಲಿಸಿದ್ದಾರೆ.

ಪರಿಷ್ಕೃತ ದರ

ವಿದ್ಯಾನಗರ ತಿಮ್ಮಸಾಗರ ಬಸವಣ್ಣ ದೇವರಗುಡಿ ಬಡಾವಣೆ ಸುತ್ತಮುತ್ತ ಪ್ರತಿ ಚದರ ಮೀ.ಗೆ 6,000 ರೂ. ಇದ್ದ ಮಾರ್ಗಸೂಚಿ ದರವು 12000 ರೂ.ಗೆ ಏರಿಕೆ ಮಾಡಲಾಗಿದೆ. ಇಲ್ಲಿ ವಾಣಿಜ್ಯ ನಿವೇಶನವು ಚ.ಮೀ.ಗೆ 9,200 ರೂ. ನಿಂದ 18,000 ರೂ. ಗೆ, ಗೋಕುಲ ರಸ್ತೆ ಎಂ.ಎಂ. ಜೋಶಿ ಆಸ್ಪತ್ರೆಯಿಂದ ಹಳೇ ಉಣಕಲ್ ಕ್ರಾಸ್‌ವರೆಗೆ 11,100 ರೂ. ನಿಂದ 25,000 ರೂ. ಗೆ (ಶೇ. 125ರಷ್ಟು), ಭಾರತ ಮಿಲ್ ಬಳಿ 10,000 ರೂ. ನಿಂದ 20,000 ರೂ. ವರೆಗೆ, ಇಂದಿರಾ ಗಾಜಿನ ಮನೆ ಹಿಂಭಾಗ 9,700 ರೂ. ನಿಂದ 15,000 ರೂ. (ಶೇ. 133ರಷ್ಟು) ಏರಿಕೆ ಮಾಡಿ ಪರಿಷ್ಕರಿಸಲಾಗಿದೆ.

ನೀಲಿಜಿನ್ ರಸ್ತೆ (142/1 ರಿಂದ 160)ಯ ಮಾರ್ಗಸೂಚಿ ದರವು ಪ್ರತಿ ಚ.ಮೀ.ಗೆ 13,300 ರಿಂದ 28,000 ರೂ.ಗೆ, ಮೂರುಸಾವಿರ ಮಠದ ರಸ್ತೆ ಮತ್ತು ಅಡ್ಡೆ 8,000 ರೂ. ನಿಂದ 22,000 ರೂ. ಗೆ (ಶೇ. 175), ತೊರವಿ ಹಕ್ಕಲ 5,200 ರೂ. ನಿಂದ 9,000 ರೂ. (ವಸತಿ) ಹಾಗೂ ಇಲ್ಲಿ ವಾಣಿಜ್ಯ ನಿವೇಶನವು 8,000 ರೂ. ನಿಂದ 13,000 ರೂ. ಗೆ ಏರಿಕೆ ಮಾಡಲಾಗಿದೆ.

ಭೂಸಪೇಟ, ತಂಬದ ಓಣಿ, ದೇಸಾಯಿ ಓಣಿ, ಹೂಗಾರ ಓಣಿಯಲ್ಲಿ ಮಾರ್ಗಸೂಚಿ ದರವು ಪ್ರತಿ ಚ.ಮೀ.ಗೆ ಶೇ. 8,300 ರೂ. ನಿಂದ 19,000 ರೂ.ಗೆ, ಪಿ.ಬಿ. ರಸ್ತೆ ನ್ಯೂ ಇಂಗ್ಲಿಷ್ ಸ್ಕೂಲ್, ಗಾರ್ಡನಪೇಟ 8,100 ರೂ. ನಿಂದ 20,000 ರೂ. (ಶೇ. 147), ಜಿಗಳೂರ ಕಟ್ಟಡದಿಂದ ಬಿಡನಾಳ ಹಳ್ಳದವರೆಗೆ 8,500 ರೂ. ನಿಂದ 21,000 ರೂ. (ಶೇ. 147), ಅಂಚಟಗೇರಿ ಓಣಿ 7,400 ರೂ. ನಿಂದ 17,000 ರೂ. (ಶೇ. 130), ಗಬ್ಬೂರ ಹೆದ್ದಾರಿಗೆ ಹೊಂದಿದ ಜಾಗ 4,500 ರೂ. ನಿಂದ 12,000 ರೂ. (ಶೇ. 167), ತಾರಿಹಾಳ ಬೈಪಾಸ್ 3,000 ದಿಂದ 10,000 ರೂ. (ಶೇ. 233) ಗೆ ಏರಿಕೆ ತೋರಿಸಲಾಗಿದೆ.

ಕೇಶ್ವಾಪುರ ರಾಮನಗರದಲ್ಲಿ ಮಾರ್ಗಸೂಚಿ ದರವು ಪ್ರತಿ ಚ.ಮೀ. 5,000 ರೂ. ನಿಂದ 9,500 (ಶೇ. 90), ಕೇಶ್ವಾಪುರ ನವೀನ ಪಾರ್ಕ್ 8,000 ರೂ. ನಿಂದ 15,000 (ಶೇ. 88), ಕೇಶ್ವಾಪುರ ಬಡಾವಣೆ (ಸಿಸನಂ 429 ಹಾಗೂ ಇತರ ) 7,755ರಿಂದ 17,500 (ಶೇ. 126)ಗೆ ಹೆಚ್ಚಿಸಲಾಗಿದೆ.

ಕೃಷಿ ಭೂಮಿಯ ಮಾರ್ಗಸೂಚಿ ದರದಲ್ಲಿ ಏರಿಕೆ ತೋರಿಸಲಾಗಿದೆ. ಅಮರಗೋಳದಿಂದ ಧಾರವಾಡದವರೆಗೆ ಹಾಗೂ ಹುಬ್ಬಳ್ಳಿಯವರೆಗೆ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಕೃಷಿ ಜಮೀನು (ತರಿ) ಎಕರೆಗೆ 95 ಲಕ್ಷ ರೂ., ಭಾಗಾಯ್ತ 10 ಲಕ್ಷ ರೂ. ನಿಗದಿ ಪಡಿಸಲಾಗಿದೆ.

ಸ್ಥಿರಾಸ್ತಿಗಳ ಮಾರ್ಗಸೂಚಿ ದರದಲ್ಲಿ ಶೇ. 10ರಿಂದ 30ರಷ್ಟು ಏರಿಕೆಯನ್ನು ಸಹಿಸಿಕೊಳ್ಳಬಹುದು. ಕಳೆದ 4 ವರ್ಷಗಳ ಕಾಲ ಪರಿಷ್ಕರಣೆ ಮಾಡಿಲ್ಲ ಎಂಬ ಕಾರಣಕ್ಕೆ ಈ ರೀತಿ ಏರಿಕೆ ಮಾಡಿರುವುದು ಸರಿಯಲ್ಲ. ಅದರಲ್ಲೂ ಹುಬ್ಬಳ್ಳಿಯಲ್ಲಿ ಮಾತ್ರ ಯದ್ವಾತದ್ವಾ ಏರಿಕೆ ಮಾಡಲಾಗಿದೆ. ಬೆಳಗಾವಿಯಲ್ಲಿ ಶೇ. 22ರಷ್ಟು ಏರಿಕೆ ಮಾಡಲಾಗಿದೆ.I ಸಂಜಯ ಕೋಠಾರಿ, ಅಧ್ಯಕ್ಷ, ಕ್ರೆಡೈ ಹು-ಧಾ ಒಂದೇ ಬಡಾವಣೆ, ರಸ್ತೆಯ ಅಕ್ಕ-ಪಕ್ಕದ ಸ್ಥಿರಾಸ್ತಿಗಳ ಮಾರ್ಗಸೂಚಿ ದರದಲ್ಲಿ ಅಜಗಜಾಂತರ ವ್ಯತ್ಯಾಸಗಳಿದ್ದವು. ಈ ವೈಪರೀತ್ಯಗಳನ್ನು ಸರಿಪಡಿಸಿ ಪರಿಷ್ಕೃತ ಮಾರ್ಗಸೂಚಿ ದರವನ್ನು ಪ್ರಕಟಿಸಿದ್ದೇವೆ. ಅಕ್ಟೋಬರ್ 1ರಿಂದ ಹೊಸ ಮಾರ್ಗಸೂಚಿ ದರ ಜಾರಿಯಾಗಬಹುದು. iಎಸ್.ಬಿ. ಕೋಟಿ, ಹಿರಿಯ ಉಪ ನೋಂದಣಾಧಿಕಾರಿ, ಹುಬ್ಬಳ್ಳಿ ದಕ್ಷಿಣ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net