

ಸವದತ್ತಿ: ರಾಜ್ಯ ಅಕ್ಷರ ದಾಸೋಹ ನೌಕರರ ಸಂಘಟನೆ ತಾಲೂಕು ಘಟಕದಿಂದ ಮಧ್ಯಾಹ್ನದ ಬಿಸಿಯೂಟ ಕಾರ್ಮಿಕರಿಗೆ ಸರ್ಕಾರದಿಂದ ಸೂಕ್ತ ಪರಿಹಾರ ನೀಡಲು ಒತ್ತಾಯಿಸಿ ಬುಧವಾರ ತಾಲೂಕು ಪಂಚಾಯಿತಿ ಅಕ್ಷರ ದಾಸೋಹ ಅಧಿಕಾರಿ ಗಿರೀಶ ಮುನವಳ್ಳಿ ಮೂಲಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.
ಸಂಘಟನೆ ಅಧ್ಯಕ್ಷ ಎಲ್.ಎಸ್.ನಾಯಕ ಮಾತನಾಡಿ, ಸರ್ಕಾರದ ಅಕ್ಷರ ದಾಸೋಹ ಯೋಜನೆಯಲ್ಲಿ ಅತ್ಯಂತ ದುರ್ಬಲ ವರ್ಗಕ್ಕೆ ಸೇರಿದ 1.18 ಲಕ್ಷ ಮಹಿಳೆಯರು 18-20 ವರ್ಷಗಳಿಂದ ದುಡಿಯುತ್ತಿದ್ದಾರೆ. ಅವರ ಕುಟುಂಬ ಕೂಡ ಅದೇ ಮಹಿಳೆಯರಿಂದ ನಿರ್ವಹಣೆಯಾಗುತ್ತಿದೆ. ಅದರಲ್ಲಿ ವಿಧವೆಯರೂ ಇದ್ದಾರೆ. ಹಾಗಾಗಿ ಅವರಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಲಾಕ್‌ಡೌನ್ ಸಂದರ್ಭದಲ್ಲಿ ಮಕ್ಕಳ ಆರೋಗ್ಯ ಹಿತದೃಷ್ಟಿಯಿಂದ ಶಾಲೆಗಳನ್ನು ಮುಚ್ಚಲಾಗಿತ್ತು. ಆದರೆ, ಆಹಾರ ಧಾನ್ಯಗಳನ್ನು ಮಕ್ಕಳ ಮನೆ ಮನೆಗೆ ತಲುಪಿಸುವ ಕೆಲಸ ಮಾಡಿದ್ದಾರೆ. ಅದಲ್ಲದೆ ಕ್ವಾರೆಂಟೈನ್‌ನಲ್ಲಿದ್ದರಿಗೂ ಅವರಿಂದ ಅಡುಗೆ ಮಾಡಿಸಿ ಹಾಕಲಾಗಿದೆ.
ಏಪ್ರಿಲ್‌ನಿಂದ ಶಾಲೆ ಆರಂಭವಾಗುವವರೆಗೂ ಸಂಪೂರ್ಣ ವೇತನ, ಎಲ್‌ಐಸಿ ಆಧಾರಿತ ಪೆನ್ಶನ್, ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಪ್ರವೇಶ ಶುಲ್ಕ ಮತ್ತು ಇತರ ಶುಲ್ಕಗಳಿಂದ ಸಂಪೂರ್ಣ ವಿನಾಯತಿ, ಕಾರ್ಮಿಕರ ಮತ್ತು ಅವರ ಕುಟುಂಬಗಳು ಅನಾರೋಗ್ಯಕ್ಕೆ ತುತ್ತಾದರೆ ಸರ್ಕಾರವೇ ಉಚಿತ ಆರೋಗ್ಯ ಸೌಲಭ್ಯ ನೀಡುವುದು ಹಾಗೂ ಕಾರ್ಮಿಕರ ನೌಕರಿ ಕಾಯಂ ಮಾಡಬೇಕು ಎಂದು ನೌಕರರ ಸಂಘದ ಪದಾಧಿಕಾರಿಗಳು ಮನವಿ ಮೂಲಕ ವಿನಂತಿಸಿದರು.
ಬಸಮ್ಮ ಸೊಗಲದ, ಎಂ.ಎಸ್. ಸಂಬಾಳದ, ಎಸ್.ಎಸ್.ಮ್ಯಾಕಲಮರಡಿ,
ಎನ್.ಆರ್.ಹಡಪದ, ಶಾಂತವ್ವ ಮಡಿವಾಳರ ಹಾಗೂ ಇತರರು ಇದ್ದರು.