

ಹಟ್ಟಿಚಿನ್ನದಗಣಿ: ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಬಿಸಿಲಿನ ತಾಪದಿಂದ ಹಗಲಲ್ಲಿ ಭೂಮಿ ಕಾದು ಕುಲುಮೆಯಂತಾಗುತ್ತಿದ್ದು, ಝಳಕ್ಕೆ ಜನರು ಹೈರಾಣಾಗಿದ್ದಾರೆ.
ವರ್ಷದಿಂದ ವರ್ಷಕ್ಕೆ ಬಿಸಿಲಿನ ತಾಪಮಾನ ಏರಿಕೆಯಾಗುತಿದ್ದು, ರೋಸಿ ಹೋಗಿರುವ ಜನರು ದೇಹವನ್ನು ತಂಪು ಮಾಡಿಕೊಳ್ಳಲು ಈಜುಕೋಳ, ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಆದರೆ, ಹೊಲ-ಗದ್ದೆಗಳಲ್ಲಿ ನೀರಿಲ್ಲದೆ ಬಿಸಿಲಿನ ಝಳಕ್ಕೆ ಜನ ಜಾನುವಾರುಗಳು ರೋದಿಸುತ್ತಿವೆ.
ಮುಂಜಾನೆಯಿಂದ ಏರುವ ಬಿಸಿಲಿನ ಕಾವು ಮಧ್ಯಾಹ್ನದ ವೇಳೆಗೆ ಕೆಂಡದಂತಾಗಿರುತ್ತದೆ. ರಸ್ತೆ ಮೇಲೆ ವಾಹನಗಳ ಓಡಾಟವೂ ಕಡಿಮೆಯಾಗಿದೆ. ಧಗೆಯಿಂದ ಬಚಾವಾಗಲು ಸಾರ್ವಜನಿಕರು ಮನೆಯಿಂದ ಹೊರಬರುತ್ತಿಲ್ಲ. ಗ್ರಾಹಕರಿಲ್ಲದೆ ವಿವಿಧ ಅಂಗಡಿಗಳಲ್ಲಿ ವ್ಯಾಪಾರವೂ ಕುಗ್ಗುತ್ತಿದೆ ಎಂದು ವ್ಯಾಪಾರಿಗಳು ಹೇಳಿದರೆ, ಕಲ್ಲಂಗಡಿ, ಕಬ್ಬಿನಹಾಲು, ನಿಂಬೆ ಹಣ್ಣಿನ ಜ್ಯೂಸ್, ಎಳನೀರು ಹಾಗೂ ತರಹೇವಾರಿ ತಂಪು ಪಾನೀಯಗಳ ಅಂಗಡಿಗಳನ್ನು ಜನ ಹುಡುಕಿಕೊಂಡು ಹೋಗುತ್ತಿದ್ದಾರೆ. ಆದರೆ, ತಂಪುಪಾನೀಯಗಳ ದುಬಾರಿ ಬೆಲೆ ಬಿಸಿಯೂ ಜನರನ್ನು ಬೇಸರಕ್ಕೆ ದೂಡುತ್ತಿದೆ.
ಅಲ್ಲದೇ ಬಿಸಿಲಿನ ತಾಪಕ್ಕೆ ಜನರು ಎಲ್ಲೇ ಕುಳಿತರು, ನಿಂತರೂ ಚಡಪಡಿಸುತ್ತಿದ್ದಾರೆ. ಮನೆಯಲ್ಲಿ ತಿರುಗುವ ಫ್ಯಾನ್, ಕೂಲರ್‌ಗಳಿಗೆ ವಿಶ್ರಾಂತಿಯೇ ಇಲ್ಲದಂತಾಗಿದೆ. ವಿದ್ಯುತ್ ಕೈಕೊಟ್ಟರೆ ಸಾಕು ಕಿರಿಯರಿಂದ ಹಿರಿಯ ಜೀವಗಳು ಪರದಾಡುವಂತಾಗಿದ್ದು, ಬಿಸಿ ಗಾಳಿಗೆ ವೃದ್ಧರು, ರೋಗಿಗಳು, ಬಾಣಂತಿಯರ ಸ್ಥಿತಿಯಂತೂ ದೇವರೇ ಬಲ್ಲ. ಇದರಿಂದ ಜೆಸ್ಕಾಂ ಅಧಿಕಾರಿಗಳಿಗೆ ಹಿಡಿಶಾಪ ಹಾಕುವುದು ಸಾಮಾನ್ಯವಾಗಿದೆ.
ದುಂಬಾಲು ಬೀಳುವ ಮಕ್ಕಳು: ಹಟ್ಟಿಯಲ್ಲಿ ಖಾಸಗಿ ಈಜುಕೊಳ ಇದ್ದು, ದೇಹ ತಂಪಾಗಿಸಿಕೊಳ್ಳಲು ಯುವಕರು, ಮಕ್ಕಳು ಪ್ರತಿದಿನನ ತೆರಳುತ್ತಾರೆ. ಬೇಸಿಗೆ ರಜೆ ಇರುವುದರಿಂದ ಮಕ್ಕಳು ದುಂಬಾಲು ಬಿದ್ದು ಅವರ ಪಾಲಕರ ಈಜಲು ತೆರಳುತ್ತಾರೆ. ನಿತ್ಯವೂ 36 ಡಿ.ಸೆ.ಗಿಂತ ಹೆಚ್ಚಿರುವ ಬಿಸಿಲು ಈ ಭಾಗದಲ್ಲಿ ಸಾಮಾನ್ಯವಾಗಿದ್ದು, ಜಲಮೂಲಗಳಲ್ಲಿ ನೀರಿನ ಹರಿವು ಕುಗ್ಗಿರುವುದರಿಂದ ಪ್ರವೇಶ ಶುಲ್ಕ ಭರಿಸಿಯಾದರೂ ಈಜುಕೊಳದ ಮೊರೆ ಹೋಗುತ್ತಿದ್ದಾರೆ.
ಕೋಟ್: ಬಿಸಿಲ ತಾಪ ಹೆಚ್ಚಾಗಿದ್ದರಿಂದ ಸೆಕೆ ಹೆಚ್ಚಿದೆ. ಕಳೆದ ವಾರದಿಂದ ಬೇಸಿಗೆಯ ತಾಪಕ್ಕೆ ಮೈ ತಂಪಾಗಿಸಿಕೊಳ್ಳಲು ಮಕ್ಕಳೊಂದಿಗೆ ನಿತ್ಯವೂ ಈಜುಕೊಳಕ್ಕೆ ತೆರಳುತ್ತಿದ್ದೇವೆ.
> ಹನುಮಂತರಡ್ಡಿ. ಹಟ್ಟಿ ಪಟ್ಟಣದ ನಿವಾಸಿ
ಕೋಟ್: ಪ್ರತಿ ವರ್ಷ ಬೇಸಿಗೆ ಶುರುವಾದರೆ ಸಾಕು ನಾವು ಬೆಂಗಳೂರು-ಮೈಸೂರಿನ ನಮ್ಮ ಸಂಬಂಧಿಕರ ಮನೆಗೆ ತೆರಳುತ್ತಿದ್ದೆವು. ಆದರೆ ಹಟ್ಟಿ ಪಟ್ಟಣದಲ್ಲಿ ಈಜುಕೊಳ ಇರುವುದರಿಂದ ನಿತ್ಯವೂ ಈಜಲು ಬರುತ್ತಿದ್ದೇವೆ.
> ಶಮಂತ ವಿದ್ಯಾರ್ಥಿ