

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ರಾಜ್ಯದಲ್ಲಿ ಹೆಚ್ಚುತ್ತಿರುವ ತಾಪಮಾನದಲ್ಲಿ ಮುಂಬರುವ ದಿನಗಳಲ್ಲಿ ಬಿಸಿ ಗಾಳಿ (ಹೀಟ್ ವೇವ್) ಬೀಸುವ ಸಾಧ್ಯತೆ ಇರುವ ಕಾರಣ ಮಕ್ಕಳು ಸೇರಿ ಜನ- ಜಾನುವಾರುಗಳು ಬಿಸಿಲಿನಿಂದ ರಕ್ಷಿಸಿಕೊಳ್ಳಲು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು ಎಂದು ಜಿಲ್ಲಾಧಿಕಾರಿ ಎ.ಬಿ ಬಸವರಾಜು ಸಲಹೆ ನೀಡಿದ್ದಾರೆ.
ದೇವನಹಳ್ಳಿಯ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮುಂಬರುವ ಬೇಸಿಗೆ ಸಮಯದಲ್ಲಿ ಉಂಟಾಗಬಹುದಾದ ಕುಡಿಯುವ ನೀರು, ಮೇವು ಸಮಸ್ಯೆ ಹಾಗೂ ಬಿಸಿಗಾಳಿಯಿಂದ ಉಂಟಾಗುವ ಪರಿಣಾಮಗಳ ಕುರಿತು ಚರ್ಚಿಸಲು ಕರೆಯಲಾಗಿದ್ದ ಸಭೆಯಲ್ಲಿ ಮಾತನಾಡಿದರು. ಮುಂಬರುವ ದಿನಗಳಲ್ಲಿ ತಾಪಮಾನ ಹೆಚ್ಚಾಗಿ ಬಿಸಿ ಗಾಳಿ ಬೀಸುವ ಸಂಭವವಿದ್ದು ಇದರಿಂದ ಜನ-ಜಾನುವಾರುಗಳಿಗೆ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಮುಂಜಾಗ್ರತೆ ವಹಿಸಬೇಕು ಎಂದರು. ಜಾನುವಾರುಗಳಿಗೆ ಮೇವಿನ ಸಮಸ್ಯೆ ಆಗದಂತೆ ಈಗಾಗಲೇ ಗೋಶಾಲೆಗಳಲ್ಲಿ ಅಂದಾಜು 3 ಲಕ್ಷ ಟನ್‌ನಷ್ಟು ಮೇವು ಸಂಗ್ರಹಿಸಿಡಲಾಗಿದೆ ಎಂದು ಸಭೆಯಲ್ಲಿ ತಿಳಿಸಿದರು.
ಹಕ್ಕಿಜ್ವರ ಬರಲ್ಲ: ಹಕ್ಕಿ ಜ್ವರ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಕೋಳಿಗಳು ಅಥವಾ ಇನ್ನಿತರ ಪ್ರಾಣಿ ಪಕ್ಷಿಗಳ ಅನುಮಾನಾಸ್ಪದವಾಗಿ ಅಸಹಜವಾಗಿ ಇಲ್ಲವೇ ಇದ್ದಕ್ಕಿದ್ದಂತೆ ಸಾವನ್ನಪ್ಪುವುದು ಕಂಡುಬಂದಲ್ಲಿ ಹತ್ತಿರದ ಪಶು ಇಲಾಖೆಗೆ ಮಾಹಿತಿ ನೀಡಬೇಕು. ಕೋಳಿ ಮಾಂಸ ಮತ್ತು ಮೊಟ್ಟೆಗಳನ್ನು ಚೆನ್ನಾಗಿ ಬೇಯಿಸಿ ಸೇವಿಸುವುದರಿಂದ ಹಕ್ಕಿ ಜ್ವರ ಬರುವುದಿಲ್ಲ ಎಂದು ತಿಳಿಸಿದರು.
ಕಾಯಿಸಿ ಆರಿಸಿ ಕುಡಿಯಬೇಕು: ಬೇಸಿಗೆ ಸಮಯದಲ್ಲಿ ಕಾಲರಾ ರೋಗ ಉಲ್ಬಣವಾಗುವ ಸಾಧ್ಯತೆ ದಟ್ಟವಾಗಿದ್ದು, ಸಾರ್ವಜನಿಕರು ನೀರನ್ನು ಕಾಯಿಸಿ ಆರಿಸಿ ಕುಡಿಯಬೇಕು. ತಮ್ಮ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಹಣ್ಣು ಹಾಗೂ ಹಸಿ ತರಕಾರಿಯನ್ನು ತೊಳೆದು ಸೇವಿಸಬೇಕು. ವಾಂತಿ ಅಥವಾ ಬೇಧಿ ಕಾಣಿಸಿಕೊಂಡ ಕೂಡಲೇ ವೈದ್ಯರನ್ನು ಸಂಪರ್ಕಿಸಿ, ಆರೋಗ್ಯ ಸಲಹೆ ಪಡೆದುಕೊಳ್ಳುಬೇಕು ಎಂದು ಡಿಸಿ ತಿಳಿಸಿದರು.
ಬಿಸಿ ಗಾಳಿಯಿಂದ ರಕ್ಷಣೆ ಪಡೆಯುವುದು ಅವಶ್ಯ: ವಿಶೇಷವಾಗಿ ಮಧ್ಯಾಹ್ನ 12 ರಿಂದ 3 ರವರೆಗೆ ಬಿಸಿಲಿನಲ್ಲಿ ಹೋಗುವುದನ್ನು ತಪ್ಪಿಸಿ. ಹೆಚ್ಚಾಗಿ ಬಾಯಾರಿಕೆ ಇಲ್ಲದಿದ್ದರೂ ಸಹ ಸಾಕಷ್ಟು ನೀರು ಕುಡಿಯಿರಿ. ಸಾಧ್ಯವಾದಷ್ಟು ಹಗುರವಾದ, ತಿಳಿ ಬಣ್ಣದ, ಸಡಿಲವಾದ ಮತ್ತು ರಂಧ್ರವಿರುವ ಹತ್ತಿ ಬಟ್ಟೆಗಳನ್ನು ಧರಿಸಿ, ಬಿಸಿಲಿನಲ್ಲಿ ಹೋಗುವಾಗ ರಕ್ಷಣಾತ್ಮಕ ಕನ್ನಡಕ, ಛತ್ರಿಯಂಥ ವಸ್ತುಗಳನ್ನು ಬಳಸಿ, ಹೊರಗಿನ ತಾಪಮಾನ ಹೆಚ್ಚಿರುವಾಗ ಶ್ರಮದಾಯಕ ಚಟುವಟಿಕೆಗಳನ್ನು ತಪ್ಪಿಸಿ, ಹೆಚ್ಚಿನ ಪ್ರೋಟೀನ್ ಆಹಾರವನ್ನು ತಪ್ಪಿಸಿ ಮತ್ತು ಹಳೆಯ ಆಹಾರವನ್ನು ಸೇವಿಸಬೇಡಿ ಎಂದು ಸಲಹೆ ನೀಡಿದರು.
ಸನ್‌ಸ್ಟ್ರೋಕ್ ವೇಳೆ ಪ್ರಾಥಮಿಕ ಚಿಕಿತ್ಸೆ:
ವ್ಯಕ್ತಿಯನ್ನು ತಂಪಾದ ಸ್ಥಳದಲ್ಲಿ, ನೆರಳಿನ ಕೆಳಗೆ ಇರಿಸಿ ಅವರನ್ನು ಒದ್ದೆ ಬಟ್ಟೆಯಿಂದ ಒರೆಸಿ, ಆಗಾಗ ದೇಹವನ್ನು ತೊಳೆಯಿರಿ. ತಲೆಯ ಮೇಲೆ ಸಾಮಾನ್ಯ ತಾಪಮಾನದ ನೀರನ್ನು ಸುರಿಯಿರಿ. ದೇಹದ ಉಷ್ಣತೆಯನ್ನು ಕಡಿಮೆ ಮಾಡುವುದು ಮುಖ್ಯ ವಿಷಯವಾಗಿದೆ ಎಂದು ಸನ್‌ಸ್ಟೋಕ್ ವೇಳೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿ ಮಾಹಿತಿ ನೀಡಿದರು. ತಕ್ಷಣ ವ್ಯಕ್ತಿಯನ್ನು ಹತ್ತಿರದ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿ. ರೋಗಿಗೆ ತಕ್ಷಣದ ಆಸ್ಪತ್ರೆಯ ಅಗತ್ಯವಿರುತ್ತದೆ, ಏಕೆಂದರೆ ಶಾಖದ ಹೊಡೆತಗಳು ಮಾರಣಾಂತಿಕವಾಗಬಹುದು ಎಂದರು.
------------