

ವಿಜಯವಾಣಿ ವಿಶೇಷ ಕೂಡ್ಲಿಗಿ
ಸರ್ಕಾರಿ ಶಾಲೆಗಳು ಅಂದರೆ ಜನರು ನೋಡುವ ದೃಷ್ಟಿಕೋನವೇ ಬೇರೆ. ಆದರೆ ತಾಲೂಕಿನ ಗೆದ್ದಲಗಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆಯುವ ರೀತಿಯಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ಇದಕ್ಕೆ ಹಳೇ ವಿದ್ಯಾರ್ಥಿಗಳ ಜತೆಗೆ ಹಲವರು ಕೈಜೋಡಿಸಿದ್ದರಿಂದ ಶಾಲೆದು ರೂಪವೇ ಬದಲಾಗಿದೆ.
ಈ ಮೊದಲು ಶಾಲೆ ಅಧೋಗತಿಗೆ ತಲುಪಿತ್ತು. ಕಿಡಿಗೇಡಿಗಳು ಶಾಲೆಯ ಪರಿಸರ ಹಾಳು ಮಾಡಿದ್ದರು. ಇದನ್ನು ಕಂಡು ಬೇಸರಗೊಂಡ ಹಳೆಯ ವಿದ್ಯಾರ್ಥಿಗಳು, ಗ್ರಾಪಂ ಸದಸ್ಯರು, ಶಿಕ್ಷಣ ಪ್ರೇಮಿಗಳು ಒಂದೆಡೆ ಸೇರಿ, ಕಲಿತ ಶಾಲೆ ಎಂಬ ಅಭಿಮಾನದಿಂದ ಲಕ್ಷಾಂತರ ರೂ. ಖರ್ಚು ಮಾಡಿ ಸರ್ಕಾರಿ ಶಾಲೆಯನ್ನು ಸುಂದರವಾಗಿಸಿ ಎಲ್ಲರನ್ನೂ ಸೆಳೆಯುವಂತೆ ಮಾಡಿದ್ದಾರೆ. ಕೂಡ್ಲಿಗಿಯ ಹಾರ್ಡ್‌ವೇರ್ ಅಂಗಡಿ ಮಾಲೀಕ ಅಕ್ಕಿ ಕೊಟ್ರೇಶ್ ಶಾಲೆಗೆ ಬಣ್ಣ ನೀಡಿದ್ದು, ಹಳೆಯ ವಿದ್ಯಾರ್ಥಿಗಳೇ ಸ್ವತಃ ಶಾಲೆಗೆ ಬಣ್ಣ ಹಚ್ಚುವ ಮೂಲಕ ಸಂಭ್ರಮಿಸಿದ್ದಾರೆ.
ಇದನ್ನೂ ಓದಿ: ಸಂಬಳದಲ್ಲಿ ಸ್ಮಾರ್ಟ್ಕ್ಲಾಸ್ ಮಾಡಿದ ಸರ್ಕಾರಿ ಶಾಲೆ ಶಿಕ್ಷಕ
ಎಸ್ಡಿಎಂಸಿ ಅಧ್ಯಕ್ಷ ಹಾಗೂ ಪದಾಧಿಕಾರಿಗಳು, ಗ್ರಾಮಸ್ಥರು, ಗ್ರಾಪಂ ಸದಸ್ಯರು ಸಹಾಯ ಹಸ್ತ ಚಾಚಿದ್ದರಿಂದ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್‌ಗಳು ಆರಂಭವಾಗಿದೆ. ಕೆಕೆಆರ್‌ಡಿಬಿ ಯೋಜನೆಯಿಂದ ಎಲ್‌ಸಿಡಿ ಟಿವಿ ಶಾಲೆಗೆ ಬಂದಿದ್ದು, ಇದರ ಮೂಲಕ ಅನುಭವಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಪರಿಣಾಮಕಾರಿ ಬೋಧನೆ ಮಾಡುತ್ತಿದ್ದಾರೆ.
ಗ್ರಾಮದಲ್ಲಿನ ದಾನಿಗಳು ಮುಂದೆ ಬಂದು ಹಣ ನೀಡಿದರೆ, ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಅನುಕೂಲವಾಗಲೆಂದು ಗೋಡೆಯ ಮೇಲೆ ಕಲಿಕೆಗೆ ಸಂಬಂಧಿಸಿದ ಅಕ್ಷರ ರೈಲು, ರಾಷ್ಟ್ರೀಯ ಪ್ರಾಣಿ, ಪಕ್ಷಿಗಳ ಚಿತ್ರಗಳು, ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದ ಮತ್ತು ಬರವಣಿಗೆ ಸೇರಿದಂತೆ ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾದ ಚಿತ್ರಗಳನ್ನು ಬಿಡಿಸುವ ಮೂಲಕ ಇಲ್ಲಿನ ಶಿಕ್ಷಕರು ವಿದ್ಯಾರ್ಥಿಗಳ ಮನಸ್ಸು ಗೆದ್ದಿದ್ದಾರೆ.
ಗೆದ್ದಲಗಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸದ್ಯ 202 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಮಕ್ಕಳಿಗೆ ಅತ್ಯುತ್ತಮ ಶಿಕ್ಷಣ ದೊರೆಯುತ್ತಿದೆ. ಕಳೆದ ಬಾರಿ ಶಾಲೆ ವಿದ್ಯಾರ್ಥಿಗಳು ರಾಷ್ಟ್ರೀಯ ವಿಜ್ಞಾನ ಸಮಾವೇಶದಲ್ಲಿ ಭಾಗವಹಿಸಿ ರಾಜ್ಯಮಟ್ಟದ ಪ್ರಶಸ್ತಿ ಪಡೆದಿರುವುದು ಗಮನಾರ್ಹವಾಗಿದೆ. ಶಾಲೆಯ ಅಭಿವೃದ್ಧಿಗೆ ಶಿಕ್ಷಕರು ಕೂಡ ತಲಾ 5 ಸಾವಿರ ರೂ.ನೀಡಿ, ಹೆಚ್ಚಿನ ಅಭಿವೃದ್ಧಿ ಕಾರ್ಯಕ್ಕೆ ಮುಂದಾಗಿದ್ದಾರೆ. ಒಟ್ಟಾರೆ ಸರ್ಕಾರಿ ಶಾಲೆಯೊಂದು ಹಳೆಯ ವಿದ್ಯಾರ್ಥಿಗಳು, ಗ್ರಾಮಸ್ಥರು ಹಾಗೂ ಗ್ರಾಪಂ ಸದಸ್ಯರ ಸಹಕಾರದಿಂದ ಹೈಟೆಕ್ ಆಗಿದ್ದು, ಮಾದರಿಯಾಗಿದೆ.
ಹಳೆಯ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರ ಸಹಕಾರದಿಂದ ಶಾಲೆಗೆ ಬಣ್ಣ, ನಾನಾ ರೀತಿಯ ಗೋಡೆ ಬರಹ ಮಾಡಿಸಲು ಸಾಧ್ಯವಾಗಿದೆ. ಅಲ್ಲದೆ ಗ್ರಾಮಸ್ಥರು, ಮುಖಂಡರು ಸಹ ಶಾಲೆಯ ಮೇಲೆ ಅಭಿಮಾನ ಹೊಂದಿ ಸಹಾಯ ಹಸ್ತ ಚಾಚಿ ಮಕ್ಕಳ ಭವಿಷ್ಯಕ್ಕೆ ಪೂರಕವಾದಂತಹ ಕಾರ್ಯ ಮಾಡಿ ಶಾಲೆಯ ಸೊಬಗು ಹೆಚ್ಚಿಸುವ ಜತೆಗೆ ಶಿಕ್ಷಣಕ್ಕೂ ಹೆಚ್ಚಿನ ಒತ್ತು ನೀಡಿದ್ದಾರೆ ಜಿ.ಜಗದೀಶ್
ಮುಖ್ಯಶಿಕ್ಷಕ, ಗೆದ್ದಲಗಟ್ಟೆ ಸರ್ಕಾರಿ ಶಾಲೆ