

ವಿಜಯವಾಣಿ ಸುದ್ದಿಜಾಲ ಹೊಸೂರು
ರಾಜ್ಯದಿಂದ ತಮಿಳುನಾಡು ಕಡೆಗೆ ಪ್ರಯಾಣ ಬೆಳೆಸಿರುವ 85ಕ್ಕೂ ಹೆಚ್ಚು ಆನೆಗಳ ಚಲನವಲನಗಳ ಮೇಲೆ ಅರಣ್ಯ ಇಲಾಖೆ ಡ್ರೋನ್ ಕ್ಯಾಮರಾ ಮೂಲಕ ನಿಗಾ ವಹಿಸಿದ್ದು, ಹೊಸೂರು ಕಡೆಗೆ ಸಾಗದಂತೆ ತಡೆಯೊಡ್ಡುವ ಕಾರ್ಯಾಚರಣೆ ರೂಪಿಸಲಾಗಿದೆ.
ರಾಜ್ಯದಿಂದ ವಲಸೆ ಬಂದಿರುವ ಗಜಪಡೆಗಳು ತಮಿಳುನಾಡು ಗಡಿಯಲ್ಲಿ ಬೀಡುಬಿಟ್ಟಿವೆ, ಮೂರ‌್ನಾಲ್ಕು ಗುಂಪುಗಳಾಗಿ ಪ್ರಯಾಣ ಬೆಳೆಸುತ್ತಿರುವ ಆನೆಗಳು ಮೀಸಲು ಅರಣ್ಯ ಪ್ರದೇಶದಲ್ಲಿ ವಾಸ್ತವ್ಯ ಹೂಡಿವೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ರಾಜ್ಯದ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಿಂದ ಪ್ರತಿ ವರ್ಷ 150ಕ್ಕೂ ಹೆಚ್ಚು ಆನೆಗಳು ತಮಿಳುನಾಡು ಗಡಿಭಾಗದ ಜವಳಗಿರಿ,ಡೆೆಂಕಣಿಕೋಟೆ, ಹೂಸೂರು ಅರಣ್ಯದ ಮೂಲಕ ಹಾದು ಆಂಧ್ರದ ಅರಣ್ಯಕ್ಕೆ ಪ್ರವೇಶ ಪಡೆಯುತ್ತವೆ ನಂತರ ಬಂದ ದಾರಿಯಲ್ಲಿಯೇ ರಾಜ್ಯದ ಕಾಡಿಗೆ ಮರಳುತ್ತವೆ ಎನ್ನಲಾಗಿದ್ದು, ಪ್ರತೀ ವರ್ಷದಂತೆ ಈಬಾರಿಯೂ ತಮಿಳುನಾಡು ಕಡೆಗೆ ಆನೆಗಳು ಹೆಜ್ಜೆಹಾಕಿವೆ. ಇದರಲ್ಲಿ ತಳಿ ಅರಣ್ಯ ಪ್ರದೇಶದಲ್ಲಿ 30ಕ್ಕೂ ಹೆಚ್ಚು ಆನೆಗಳು ಬೀಡು ಬಿಟ್ಟಿದ್ದು, ಜವಳಗಿರಿ ಅರಣ್ಯ ಪ್ರದೇಶದಲ್ಲಿ 35ಕ್ಕೂ ಹೆಚ್ಚು ಆನೆಗಳು ಓಡಾಟ ನಡೆಸಿವೆ. ಅದೇ ರೀತಿ 20ಕ್ಕೂ ಹೆಚ್ಚು ಆನೆಗಳು 3 ಗುಂಪುಗಳಾಗಿ ಡೆಂಕಣಿಕೋಟೆ ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ಸಂಚಾರ ನಡೆಸಿವೆ ಎಂಬುದು ಡ್ರೋನ್ ಕ್ಯಾಮಾರ ಮೂಲಕ ಮಾಹಿತಿ ಕಲೆಹಾಕಲಾಗುತ್ತಿದೆ.
ಒಂದೇ ಆನೆ ಒಂಟಿಯಾಗಿದೆ.
ಬೆಳೆ ಹಾನಿ ಆತಂಕ: ಅರಣ್ಯ ಪ್ರದೇಶದಲ್ಲಿ ಸಂಚಾರ ನಡೆಸುತ್ತಿರುವ ಗಜಪಡೆ ಸುತ್ತಮುತ್ತಲ ಜಮೀನುಗಳಿಗೆ ಲಗ್ಗೆ ಹಾಕಿದರೆ ಅಪಾರ ಪ್ರಮಾಣದಲ್ಲಿ ಬೆಳೆ ನಾಶವಾಗುತ್ತದೆ ಎಂಬ ಆತಂಕ ಎದುರಾಗಿದೆ. ಜತೆಗೆ ಈ ಭಾಗದಲ್ಲಿ ಪ್ರಾಣಹಾನಿಯ ಸಾಧ್ಯತೆ ಇರುತ್ತದೆ ಎಂಬ ಹಿನ್ನೆಲೆಯಲ್ಲಿ ಮುಂಜಾಗ್ರತೆ ವಹಿಸಿರುವ ಅರಣ್ಯ ಇಲಾಖೆ ಸಿಬ್ಬಂದಿ ಕಾಡಂಚಿನ ಗ್ರಾಮಗಳಿಗೆ ಆನೆಗಳ ಪ್ರವೇಶ ತಡೆಯಲು ಕಾರ್ಯತಂತ್ರ ರೂಪಿಸಿದೆ ಎನ್ನಲಾಗಿದೆ. ಹೀಗಾಗಿ 80ಕ್ಕೂ ಹೆಚ್ಚು ಅರಣ್ಯಾಧಿಕಾರಿಗಳು, ನಿಗ್ರಹ ಸಿಬ್ಬಂದಿ ಹಾಗೂ ಡ್ರೋನ್ ಕ್ಯಾಮರಾ ನಿರ್ವಾಹಕರು ಶ್ರಮಿಸುತ್ತಿದ್ದು ಕ್ಯಾಮರಾದಲ್ಲಿ ಸೆರೆಯಾಗುತ್ತಿರುವ ದೃಶ್ಯಗಳ ಆಧಾರದ ಮೇಲೆ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಇಲಾಖೆಯಿಂದ ಜಾಗೃತಿ: ಹೊಸೂರು ಕಡೆಗೆ ಆನೆಗಳು ಹೆಜ್ಜೆ ಇಡದಂತೆ ತಡೆಯುವ ಪ್ರಯತ್ನ ನಡೆಯುತ್ತಿದೆ ಇದರ ನಡುವೆ ಅರಣ್ಯ ಪ್ರದೇಶದ ಅಕ್ಕಪಕ್ಕದ ಗ್ರಾಮಸ್ಥರ ಸುರಕ್ಷತೆ ಹಾಗೂ ಕೃಷಿ ಭೂಮಿ ರಕ್ಷಣೆಗಾಗಿ ಸ್ವಯಂ ಸೇವಕರ ಮೂಲಕ ರಾತ್ರಿ ಕಾವಲಿನ ವ್ಯವಸ್ಥೆ ಮಾಡಲಾಗಿದೆ. ಅರಣ್ಯದಂಚಿಗೆ ಜಾನುವಾರು ಕರೆದೊಯ್ಯದಂತೆ ಮನವರಿಕೆ ಮಾಡಿಕೊಡಲಾಗುತ್ತಿದೆ, ಧ್ವನಿವರ್ಧಕಗಳ ಮೂಲಕ ಅರಣ್ಯದಂಚಿನ ಗ್ರಾಮಗಳಲ್ಲಿ ಸಿಬ್ಬಂದಿ ಮುನ್ನೆಚ್ಚರಿಕೆ ವಹಿಸುವಂತೆ ಸೂಚನೆ ನೀಡುತ್ತಿದ್ದಾರೆ.
ಹೊಸೂರು ಪ್ರವೇಶ: ಜವಳಗಿರಿ ಹಾಗೂ ತಳಿ ಮೀಸಲು ಅರಣ್ಯ ಪ್ರದೇಶದಲ್ಲಿ ಬೀಡುಬಿಟ್ಟಿರುವ ಆನೆಗಳು ಯಾವುದೇ ಕ್ಷಣದಲ್ಲಿ ರಾಯಕೋಟೆ ಅರಣ್ಯ ಪ್ರದೇಶ ವ್ಯಾಪ್ತಿಯ ಊರೇದುರ್ಗ ಅರಣ್ಯಕ್ಕೆ ಪ್ರವೇಶಿಸಬಹುದು. ನಂತರ ಅಲ್ಲಿಂದ ಹೊಸೂರು ಭಾಗಕ್ಕೆ ತೆರಳುವ ಸಾಧ್ಯತೆ ಇದೆ, ಈ ಹಿನ್ನೆಲೆಯಲ್ಲಿ ಡ್ರೋನ್ ಕ್ಯಾಮರಾಗಳ ಮೂಲಕ ಆನೆಗಳ ಚಲನವಲನಗಳ ಮೇಲೆ ನಿಗಾ ವಹಿಸಲಾಗಿದ್ದು, ಕಾರ್ಯಾಚರಣೆ ರೂಪಿಸಲಾಗಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.