ಹಾಸ್ಟೆಲ್ ಮಕ್ಕಳ ಆರೋಗ್ಯದ ನಿರ್ಲಕ್ಷೃ ಸಲ್ಲದು

26 HANUR 4
26 ಹನೂರು 4 ರಾಮಾಪುರ ಡಾ.ಬಿ.ಆರ್ ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಮುನಿರಾಜು ಭೇಟಿ ನೀಡಿ ಪರಿಶೀಲಿಸಿದರು. ಕೇಶವಮೂರ್ತಿ, ಪ್ರಕಾಶ್ ಇದ್ದರು.
Published on

ಹನೂರು: ತಾಲೂಕಿನ ರಾಮಾಪುರ ಡಾ.ಬಿ.ಆರ್.ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯಕ್ಕೆ ಬುಧವಾರ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮುನಿರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಹಾಸ್ಟೆಲ್‌ನಲ್ಲಿ ಪ್ರಸ್ತುತ 26 ವಿದ್ಯಾರ್ಥಿಗಳಿದ್ದು, ಇಲ್ಲಿ ಶುದ್ಧ ಕುಡಿಯುವ ನೀರು ಇಲ್ಲದಿರುವುದು ಹಾಗೂ ಗುಣಮಟ್ಟದ ಆಹಾರದ ಕೊರತೆಯಿಂದ ಇತ್ತೀಚಿಗೆ ಬಹುತೇಕ ಮಕ್ಕಳಲ್ಲಿ ಅಲರ್ಜಿಯಿಂದ ಗುಳ್ಳೆಗಳು ಕಾಣಿಸಿಕೊಂಡಿತ್ತು. ಈ ಬಗ್ಗೆ ಕೆಲ ಪಾಲಕರು ಮಕ್ಕಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದರು. ಆದರೂ ಕೆಲ ಮಕ್ಕಳು ಈ ಸಮಸ್ಯೆಯಿಂದ ಬಳಲುತ್ತಿದ್ದರು. ಈ ಬಗ್ಗೆ ಪಾಲಕರು ರೈತ ಸಂಘಟನೆಗೆ ಮಾಹಿತಿ ನೀಡಿದ್ದ ಹಿನ್ನೆಲೆ ಮಂಗಳವಾರ ರೈತ ಸಂಘದ ತಾಲೂಕು ಅಧ್ಯಕ್ಷ ಅಮ್ಜಾದ್ ಖಾನ್ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲಿಸಿ ಅವ್ಯವಸ್ಥೆಯ ಬಗ್ಗೆ ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದ್ದು, ಸಮಸ್ಯೆಯನ್ನು ಬಗೆಹರಿಸುವುದರ ಮೂಲಕ ಶುಚಿತ್ವ ಕಾಪಾಡಿಕೊಳ್ಳುವಂತೆ ವಾರ್ಡನ್ ಪ್ರಕಾಶ್‌ಗೆ ಒತ್ತಾಯಿಸಿದ್ದರು. ಡಾ. ಪ್ರಕಾಶ್ ನೇತೃತ್ವದ ತಂಡ ಮಕ್ಕಳನ್ನು ತಪಾಸಣೆ ನಡೆಸಿದ್ದರು. ಈ ಬಗ್ಗೆ ಮಾಧ್ಯಮದಲ್ಲಿ ವರದಿ ಪ್ರಕಟವಾಗಿತ್ತು.

ಈ ಹಿನ್ನಲೆ ಬುಧವಾರ ಉಪ ನಿರ್ದೇಶಕ ಮುನಿರಾಜು ಹಾಗೂ ಸಹಾಯಕ ನಿರ್ದೇಶಕ ಕೇಶವಮೂರ್ತಿ ಅವರು ಹಾಸ್ಟೆಲ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮುನಿರಾಜು ಮಾತನಾಡಿ, ಕುಡಿಯುವ ನೀರಿನ ತೊಟ್ಟಿಯನ್ನು ಶುಚಿಗೊಳಿಸಿ ಬಳಕೆಗೆ ಯೋಗ್ಯವಾದ ನೀರು ಸಂಗ್ರಹವಾಗುವಂತೆ ನೋಡಿಕೊಳ್ಳಬೇಕು. ಅಡುಗೆ ಮನೆ, ಶೌಚಗೃಹದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಪ್ರತಿ ತಿಂಗಳು ವಿದ್ಯಾರ್ಥಿಗಳಿಗೆ ಆರೋಗ್ಯ ತಪಾಸಣೆ ನಡೆಸಬೇಕು. ನಿತ್ಯ ಸ್ನಾನ ಮಾಡುವಂತೆ ತಿಳಿಸಬೇಕು. ಬಿಸಿನೀರು, ಗುಣಮಟ್ಟದ ಆಹಾರ ನೀಡಬೇಕು. ಅಲರ್ಜಿಗೆ ಒಳಗಾಗಿರುವ ಮಕ್ಕಳಿಗೆ ಈಗಾಗಲೇ ಚಿಕಿತ್ಸೆ ನೀಡಿದ್ದು, ಅಗತ್ಯವಿದ್ದಲ್ಲಿ ಮತ್ತೊಮ್ಮೆ ಚಿಕಿತ್ಸೆ ಕೊಡಿಸಬೇಕು. ಇದೀಗ ಪರೀಕ್ಷಾ ಸಮಯವಾದ್ದರಿಂದ ಮಕ್ಕಳ ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡಬೇಕು. ಇದರಲ್ಲಿ ಯಾವುದೇ ನಿರ್ಲಕ್ಷ್ಯ ಸಲ್ಲದು. ಇನ್ನು ವಾರ್ಡನ್ ಹಾಸ್ಟೆಲ್‌ನಲ್ಲೇ ಉಳಿದು ಮಕ್ಕಳ ಆರೋಗ್ಯದ ಬಗ್ಗೆ ನಿಗಾ ವಹಿಸಬೇಕು ಎಂದು ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net