ಕೆಲಸಕ್ಕೆ ತಕ್ಕ ವೇತನ ಪಾವತಿಸಿ

HOSTEL WORKERS PROTEST KOPPAL SALARY DEMAND
ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಸರ್ಕಾರಿ ಹಾಸ್ಟೆಲ್ ಹಾಗೂ ವಸತಿ ಶಾಲೆ ಹೊರ ಗುತ್ತಿಗೆ ನೌಕರರ ಸಂಘದ ಜಿಲ್ಲಾ ಪದಾಧಿಕಾರಿಗಳು ಶುಕ್ರವಾರ ಕೊಪ್ಪಳದಲ್ಲಿ ಪ್ರತಿಭಟನೆ ನಡೆಸಿದರು. ಸಂಘದ ಜಿಲ್ಲಾಧ್ಯಕ್ಷ ಗ್ಯಾನೇಶ ಕಡಗದ, ಕಾರ್ಯದರ್ಶಿ ದವಲಸಾಬ, ಗುತ್ತಿಗೆ ನೌಕರರಾದ ಪಾರ್ವತಿ, ಮಂಜುನಾಥ ಜೋಶಿ, ಶಾಂತಮ್ಮ, ಶಿವಮ್ಮ ಇದ್ದರು.
Published on

ಕೊಪ್ಪಳ:ಸಮಾನ ಕೆಲಸಕ್ಕೆ ಸಮಾನ ವೇತನ ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಸರ್ಕಾರಿ ಹಾಸ್ಟೆಲ್ ಹಾಗೂ ವಸತಿ ಶಾಲೆ ಹೊರ ಗುತ್ತಿಗೆ ನೌಕರರ ಸಂಘದ ಜಿಲ್ಲಾ ಪದಾಧಿಕಾರಿಗಳು ಶುಕ್ರವಾರ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.

ಹಲವು ವರ್ಷಗಳಿಂದ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಗ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಬರುವ ವಸತಿ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದೇವೆ.

ಆದರೆ, ಸರ್ಕಾರದಿಂದ ನಮಗೆ ಸಿಗಬೇಕಾದ ಸೌಲಭ್ಯಗಳು ದೊರೆಯುತ್ತಿಲ್ಲ. ನೇರ ನೇಮಕಾತಿ ಮೂಲಕ ಸಿಬ್ಬಂದಿ ನೇಮಿಸುತ್ತಿದ್ದು, ಇಷ್ಟು ವರ್ಷ ಸೇವೆ ಸಲ್ಲಿಸಿದ ನಮಗೆ ಅನ್ಯಾಯವಾಗುತ್ತಿದೆ.

ಕನಿಷ್ಠ ವೇತನ, ರಜೆ, ಭತ್ಯೆ ಸೇರಿ ಇತರ ಸೌಲಭ್ಯಗಳು ದೊರೆಯುತ್ತಿಲ್ಲವೆಂದು ಪ್ರತಿಭಟನಕಾರರು ದೂರಿದರು.

ನೇರ ನೇಮಕಾತಿ ಕೈ ಬಿಟ್ಟು ಹೊರಗುತ್ತಿಗೆ ಸಿಬ್ಬಂದಿಗೆ ಸೇವಾ ಭದ್ರತೆ ನೀಡಿ. ಇಲಾಖೆಯಿಂದ ನೇರವಾಗಿ ವೇತನ ಪಾವತಿಸಬೇಕು.

ಕಾರ್ಮಿಕ ಕಾಯ್ದೆ ಅನ್ವಯ ರಜೆ, ಕನಿಷ್ಠ ವೇತನ, ಸಮಾನ ಕೆಲಸಕ್ಕೆ ಸಮಾನ ವೇತನ ಪಾವತಿಸಿ. ಕೆಲಸದ ಸಮಯ ನಿಗದಿಪಡಿಸಿ. ಮಕ್ಕಳ ಸಂಖ್ಯೆಗೆ ತಕ್ಕಂತೆ ಸಿಬ್ಬಂದಿ ಸಂಖ್ಯೆ ಹೆಚ್ಚಿಸಿ. ಬಾಕಿ ವೇತನ ಬಿಡುಗಡೆ ಮಾಡಿ.

ವಿದ್ಯಾರ್ಥಿನಿಯರ ಹಾಸ್ಟೆಲ್‌ಗಳಿಗೆ ಕಾವಲುಗಾರರನ್ನು ನೇಮಿಸಿ. ನಿವೃತ್ತಿ ಪರಿಹಾರ ಒದಗಿಸಿ. ಜನಪ್ರತಿನಿಧಿಗಳ ಶಿಫಾರಸ್ಸು ಪತ್ರಗಳನ್ನು ತರುವ ನೌಕರರಿಗೆ ಆದ್ಯತೆ ನೀಡಬಾರದು. ಮೊದಲಿನಿಂದ ಸೇವೆ ಸಲ್ಲಿಸಿದವರನ್ನು ಕೆಲಸದಿಂದ ತೆಗೆಯಬಾರದೆಂದು ಒತ್ತಾಯಿಸಿದರು.

ಪ್ರತಿಭಟನೆ ಬಳಿಕ ಜಿಪಂ ಉಪ ಕಾರ್ಯದರ್ಶಿ ಮಲ್ಲಪ್ಪ ತೊದಲಬಾಗಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಸಂಘದ ಜಿಲ್ಲಾಧ್ಯಕ್ಷ ಗ್ಯಾನೇಶ ಕಡಗದ, ಕಾರ್ಯದರ್ಶಿ ದವಲಸಾಬ, ಗುತ್ತಿಗೆ ನೌಕರರಾದ ಪಾರ್ವತಿ, ಮಂಜುನಾಥ ಜೋಶಿ, ಶಾಂತಮ್ಮ, ಶಿವಮ್ಮ, ನೂರಪಾಷಾ, ಆನಂದ, ವಲಿಸಾಬ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net