

ಮೊಳಕಾಲ್ಮೂರು: ತಂದೆ-ತಾಯಿಯನ್ನು ತೊರೆದು ಓದಿ ಸಾಧನೆ ಮಾಡಲು ಬಂದಿರುವ ಮಕ್ಕಳನ್ನು ಪ್ರೀತಿಯಿಂದ ಕಾಣುವ ಮೂಲಕ ಅವರ ಪಾಲಿಗೆ ದೈವಸ್ವರೂಪರಾಗಬೇಕು ಎಂದು ಹಾಸ್ಟೆಲ್ ಸಿಬ್ಬಂದಿಗೆ ಶಾಸಕ ಎನ್.ವೈ.ಗೋಪಾಲಕೃಷ್ಣ ಕಿವಿಮಾತು ಹೇಳಿದರು.
ತಾಲೂಕಿನ ಯರ‌್ರೇನಹಳ್ಳಿ ಸಮೀಪದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಗೆ ಮಂಗಳವಾರ ಭೇಟಿ ನೀಡಿ ಮಕ್ಕಳ ವಸತಿ-ಶಿಕ್ಷಣದ ವ್ಯವಸ್ಥೆ ಪರಿಶೀಲಿಸಿ ಮಾತನಾಡಿದರು.
ಬಹಳಷ್ಟು ಹಾಸ್ಟೆಲ್‌ಗಳಲ್ಲಿ ಮಕ್ಕಳನ್ನು ದೌರ್ಜನ್ಯದಿಂದ ನಡೆಸಿಕೊಳ್ಳಲಾಗುತ್ತಿದೆ ಎಂಬ ದೂರು ಇದೆ. ಇಂತಹ ಆರೋಪಗಳು ಕೇಳಿಬಂದರೆ ನಾನು ಸುಮ್ಮನೆ ಇರುವುದಿಲ್ಲ.
ಸರ್ಕಾರ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಾಕಷ್ಟು ಯೋಜನೆ, ಸೌಲಭ್ಯ ಕಲ್ಪಿಸಿದೆ. ಅವುಗಳನ್ನು ಅವರಿಗೆ ಸಮರ್ಪಕವಾಗಿ ತಲುಪಿಸಬೇಕು. ಮುಖ್ಯವಾಗಿ ಅವರನ್ನು ಮಾತೃವಾತ್ಸಲ್ಯದಿಂದ ಕಾಣಬೇಕು ಎಂದು ಹೇಳಿದರು.
ಯಾವ ಮಗುವನ್ನೂ ಕಡೆಗಣಿಸದೆ ಕರ್ತವ್ಯ ನಿಷ್ಠೆ ಮೆರೆಯಬೇಕು. ಬೆಳಗ್ಗೆ ಮತ್ತು ಸಂಜೆ ವೇಳೆ ಆ-ದಿನದ ಪಾಠ ಪ್ರವಚನಗಳ ಅಧ್ಯಯನ ಮಾಡುವಂತೆ ಉತ್ತೇಜಿಸಬೇಕು.
ಊಟದಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು. ಸ್ವಚ್ಚತೆಗೆ ಆದ್ಯತೆ ನೀಡಬೇಕು. ಅದೇ ರೀತಿ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸಬೇಕು.
ಆರೋಗ್ಯ ಸುರಕ್ಷತೆ ಜಾಗೃತಿ ನಡೆಸಬೇಕು. ಲೋಪ ಕಂಡುಬಂದರೆ ನಾನು ಸಹಿಸುವುದಿಲ್ಲ ಎಂದು ಎಚ್ಚರಿಸಿದರು.
ಇನ್ಮುಂದೆ ತಾಲೂಕಿನ ಎಲ್ಲ ಹಾಸ್ಟೆಲ್, ಶಾಲಾ-ಕಾಲೇಜ್‌ಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸುವುದನ್ನು ನನ್ನ ಕಾರ್ಯಕ್ರಮದ ಭಾಗವಾಗಿಸಿಕೊಳ್ಳುತ್ತೇನೆ.
ಎಲ್ಲಾದರೂ ನಿರ್ಲಕ್ಷೃ, ಅಸಡ್ಡೆ, ದೌರ್ಜನ್ಯ ಕಂಡುಬಂದರೆ ಕಠಿಣ ಕ್ರಮ ಖಚಿತ ಎಂದರು.
ಕ್ರೈಸ್ ಅಧೀನದಲ್ಲಿರುವ ಪ್ರತಿಷ್ಠಿತ ವಸತಿ ಶಾಲೆಗಳ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಹಾಗೂ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಅಗತ್ಯವಾದ ಸೌಲಭ್ಯ ಕಲ್ಪಿಸಲು ಕ್ರಮಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.
ಆರ್ಥಿಕ ಹಾಗೂ ಶೈಕ್ಷಣಿಕವಾಗಿ ತೀರಾ ಹಿಂದುಳಿದ ಪ್ರದೇಶದಲ್ಲಿನ ಮಕ್ಕಳ ಶಿಕ್ಷಣದ ಪ್ರಗತಿಗೆ ಒತ್ತುಕೊಡಲಾಗಿದೆ.
ಅತೀ ಮುಖ್ಯವಾಗಿ ವಸತಿ ಶಿಕ್ಷಣದ ಶಾಲೆಗಳಲ್ಲಿ ಎಲ್ಲ ರೀತಿಯ ಸೌಲಭ್ಯಗಳ ಲಭ್ಯತೆಗೆ ಜಿಲ್ಲಾಡಳಿತ ಹಾಗೂ ಸರ್ಕಾರದ ಜತೆ ಚರ್ಚಿಸಲಾಗುವುದು ಎಂದರು.