ವಸತಿ ನಿಲಯ ಅವ್ಯವಸ್ಥೆ ಕಂಡು ಸಿಡಿಮಿಡಿ

4 HPT 1 (1)
Published on

ಅಧಿಕಾರಿಗಳಿಗೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ತರಾಟೆ

ಹೊಸಪೇಟೆ: ಕಲಬೆರಿಕೆ ಹೆಸರು ಕಾಳು ಯಾಕೆ ತಗೊಂಡ್ರಿ? ಲ್ಯಾಬ್ ರಿಪೋರ್ಟ್ ಇಲ್ಲದ ನೀರು ಯಾಕೆ ಕೊಡುತ್ತೀರಿ? ಚಾಲು ಆಗದ ವಾಷಿಂಗ್ ಮಷಿನ್‌ನಿಂದ ಯಾರಿಗೆ ಪ್ರಯೋಜನೆ? ಎಲ್ಲದಕ್ಕೂ ಮೌನವೇ ಉತ್ತರ ಎಂದರೆ ಹೇಗೆ?
ಇಲ್ಲಿನ ಜಂಬುನಾಥಹಳ್ಳಿ ರಸ್ತೆಯಲ್ಲಿರುವ ಪರಿಶಿಷ್ಟ ಪಂಗಡದ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದಲ್ಲಿ ವಿಷಾಹಾರ ಸೇವಿಸಿ ೪೯ ವಿದ್ಯಾರ್ಥಿನಿಯರು ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಸೋಮವಾರ ಹಾಸ್ಟೆಲ್‌ಗೆ ಭೇಟಿ ನೀಡಿದ ರಾಜ್ಯ ವÀÄಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಅವರು ಇಲ್ಲಿನ ಅವ್ಯವಸ್ಥೆöಗೆ ಕಿಡಿಕಾರಿದ ಪರಿ ಇದು.
ವಿದ್ಯಾರ್ಥಿ ನಿಲಯದ ಅಡುಗೆ ಕೋಣೆ, ಸ್ಟೋರ್‌ಗೆ ತೆರಳಿದ ಅವರು ದಾಸ್ತಾನು ಪರಿಶೀಲಿಸಿದರು. ಈ ವೇಳೆ ಬಹುತೇಕ ಡಬ್ಬಗಳು ಖಾಲಿಯಾಗಿವೆ ಎನ್ನುತ್ತಲೇ ಹೆಸರು ಕಾಳು ಕೈಗೆತ್ತಿಕೊಂಡರು. ಯಾಕೆ ಇವು ಕಲಬೆರಿಕೆಯಾಗಿವೆ? ಟೆಂಡರ್‌ನಲ್ಲಿ ನಮೋದಿಸಿರುವ ಮಾದರಿಯಂತೆ ಧಾನ್ಯಗಳನ್ನು ಸ್ವೀಕರಿಸುತ್ತಿಲ್ಲವೇ ಎಂದು ವಾರ್ಡನ್ ಶಮಾ ಪರ್ವಿನ್‌ನ್ನು ತರಾಟೆಗೆ ತೆಗೆದುಕೊಂಡರು.
ಹೊಸ ವಾಷಿಂಗ್ ಮಷಿನ್ ಪೂರೈಕೆಯಾಗಿ ತಿಂಗಳು ಕಳೆದರೂ, ಚಾಲೂ ಆಗುತ್ತಿಲ್ಲ. ಕಂಪ್ಯೂಟರ್ ಲ್ಯಾಬ್‌ನಲ್ಲಿರುವ ಹತ್ತಾರು ಗಣಯಂತ್ರಗಳು ೩ ವರ್ಷದಿಂದ ಆನ್ ಆಗಿಲ್ಲ ಅಂದರೆ ಏನರ್ಥ? ಗ್ರಂಥಾಲಯಕ್ಕೆ ಸ್ಪರ್ಧಾತ್ಮಕ ಪರೀಕ್ಷೆಯ ಪುಸ್ತಕಗಳು ಬೇಕು. ಸುದ್ದಿ ಪತ್ರಿಕೆಗೂ ಬರುತ್ತಿಲ್ಲ ಎಂದು ವಿದ್ಯಾರ್ಥಿಗಳು ದೂರಿದರು. ಇದರಿಂದ ಕೆರಳಿದ ಆಯೋಗದ ಸದಸ್ಯರು ಸ್ಥಳದಲ್ಲಿ ಹಾಜರಿದ್ದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಪ್ರಶ್ನೆಗಳಿಗೆ ಅಧಿಕಾರಿಗಳು ನಿರುತ್ತರ:
ಇತ್ತೀಚೆಗೆ ವಸತಿ ನಿಲಯದ ೪೯ ವಿದ್ಯಾರ್ಥಿನಿಯರು ಅಸ್ವಸ್ಥಗೊಳ್ಳಲು ಕಾರಣವೇನು ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.
ಅದಕ್ಕೆ ಉತ್ತರಿಸಿದ ಪರಿಶಿಷ್ಟ ಪಂಗಡ ಇಲಾಖೆಯ ಜಿಲ್ಲಾಧಿಕಾರಿ ಮಂಜುನಾಥ, ಅಂದು ರಾತ್ರಿ ಚಿಕನ್ ಊಟ ಸೇವಿಸಿದ್ದರಿಂದ ವಿದ್ಯಾರ್ಥಿನಿಯರು ಅಸ್ವಸ್ಥಗೊಂಡಿದ್ದರು. ಅವರನ್ನು ಸರ್ಕಾರಿ ೧೦೦ ಬೆಡ್ ಹಾಸಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಎಲ್ಲರೂ ಗುಣಮುಖರಾಗಿದ್ದಾರೆ. ಈ ಕುರಿತು ಆಹಾರ, ಕುಡಿಯುವ ನೀರಿನ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಅದರಲ್ಲಿ ಯಾವುದೇ ಲೋಪವಿಲ್ಲವೆಂದು ವರದಿ ಬಂದಿದೆ ಎಂದು ವಿವರಿಸಿದರು.
ಹಾಗಾದರೆ, ಅನಾರೋಗ್ಯಕ್ಕೆ ಸಮಸ್ಯೆ ಏನು? ವಿದ್ಯಾರ್ಥಿಗಳು ರಾತ್ರಿ ಸೇವಿಸಿದ ಚಿಕನ್, ಅನ್ನ, ನೀರು ಲ್ಯಾಬ್‌ಗೆ ಕಳುಸಿದ್ದೀರಿ. ಆದರೆ, ಆ ದಿನ ಹಾಸ್ಟಲ್‌ನಲ್ಲಿ ಬೆಳಗ್ಗೆ ಸೇವಿಸಿದ ಇಡ್ಲಿ, ಮಧ್ಯಾಹ್ನದ ಅನ್ನ- ಸಾಂಬರ್ ಯಾಕೆ ಕಳಿಸಿಲ್ಲ? ಶುದ್ಧ ನೀರಿನ ಘಟಕದ ನೀರು ಸರಿಯಿದ್ದರೆ, ಖಾಸಗಿ ಶುದ್ಧ ನೀರಿನ ಘಟಕದಿಂದ ಯಾಕೆ ನೀರು ಪೂರೈಸುತ್ತಿದ್ದೀರಿ? ಖಾಸಗಿ ಆರ್‌ಒ ಪ್ಲಾಂಟ್‌ಗಳ ನೀರನ್ನು ನೀವು ಪರೀಕ್ಷೆಗೊಳಪಡಿಸಿದ್ದೀರಾ ಎಂಬ ಪ್ರಶ್ನೆಗೆ ಅಧಿಕಾರಿಗಳು ಮೌನಕ್ಕೆ ಶರಣಾದರು.
ಸಾರ್ವಜನಿಕರು ಯಾವ ನೀರು ಕುಡಿಯುತ್ತಾರೆ ಎಂಬುದು ನಮಗೆ ಮುಖ್ಯವಲ್ಲ. ಹಾಸ್ಟೆಲ್‌ನಲ್ಲಿರುವವರಿಗೆ ಶುದ್ಧ ನೀರು, ಗುಣಮಟ್ಟದ ಆಹಾರ ಒದಗಿಸುವುದು ನಮ್ಮ ಜವಾಬ್ದಾರಿ ಎಂದು ಎಚ್ಚರಿಸಿದರು.

ವಾರ್ಡನ್ ಬದಲಾವಣೆಗೆ ನಿರ್ದೇಶನ:
ಹಾಸ್ಟೆಲ್‌ನಲ್ಲಿ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ, ಸದ್ಯ ಎಷ್ಟು ಜನರು ಇದ್ದಾರೆ? ಶ್ರಾವಣ ಸೋಮವಾರದ ನಿಮಿತ್ತ ತಮ್ಮೂರಿಗೆ ತೆರಳಿದ ವಿದ್ಯಾರ್ಥಿನಿಯರು ಲಿಖಿತ ಪತ್ರ ನೀಡಿದ್ದಾರೆಯೇ? ಆಹಾರ ಧಾನ್ಯಗಳ ಇಂಡೆAಟ್ ಕುರಿತಾದ ಪ್ರಶ್ನೆಗಳಿಗೆ ವಾರ್ಡನ್ ಶಮಾ ಪರ್ವಿನ್ ಉತ್ತರಿಸಲಾಗದೇ ತಡಬಾಯಿಡಿದರು. ಬಹುತೇಕ ಮೌನವಾಗುತ್ತಿದ್ದ ಮೇಲ್ವಿಚಾರಕಿಯ ನಡೆಗೆ ಆಯೋಗದ ಸದಸ್ಯ ಕೋಸುಂಬೆ ಬೇಸರ ವ್ಯಕ್ತಪಡಿಇದರು. ಅಲ್ಲದೇ, ಆದಷ್ಟು ಬೇಗ ಅವರ ಜಾಗಕ್ಕೆ ಸಮರ್ಥರನ್ನು ನಿಯೋಜಿಸುವಂತೆ ಅಧಿಕಾರಿಗೆ ನಿರ್ದೇಶಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net