

ವಿಜಯವಾಣಿ ಸುದ್ದಿಜಾಲ ವಿಜಯಪುರ
ಪಟ್ಟಣದ ಸಮಾಜ ಕಲ್ಯಾಣ ಇಲಾಖೆಯ ಬಾಲಕರ ವಿದ್ಯಾರ್ಥಿನಿಲಯದ ಹುಡುಗರು ಸೊಳ್ಳೆ ಕಾಟಕ್ಕೆ ಹೈರಾಣಾಗಿದ್ದಾರೆ. ಬೆಳಗ್ಗೆ ರಾತ್ರಿ ಎನ್ನದೆ ಸೊಳ್ಳೆಗಳ ಕಾಟದಿಂದ ವಿದ್ಯಾರ್ಥಿಗಳು ಹಾಸ್ಟೆಲ್ ಸಹವಾಸವೇ ಬೇಡ ಎಂಬ ಪರಿಸ್ಥಿತಿಗೆ ಬಂದಿದ್ದಾರೆ.
ಹೌದು ಇಲ್ಲಿನ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‌ಗಳ ಕಿಟಕಿಗಳಿಗೆ ಗ್ಲಾಸ್‌ಗಳೇ ಇಲ್ಲ. ಪ್ರತಿ ಕೊಠಡಿಯ ಎಲ್ಲ ಕಿಟಕಿಗಳಲ್ಲೂ ಇದೇ ಪರಿಸ್ಥಿತಿ ಇದೆ. ಹಾಸ್ಟೆಲ್ ಆವರಣದಲ್ಲಿ ಗಿಡಗಂಟಿಗಳು ಬೆಳೆದು ನಿಂತಿದ್ದು ಸ್ವಚ್ಛತೆ ಬಗ್ಗೆ ಸಿಬ್ಬಂದಿ ಕಾಳಜಿ ವಹಿಸುತ್ತಿಲ್ಲ ಇದರಿಂದಾಗಿ ಸೊಳ್ಳೆಗಳ ಉತ್ಪಾದನಾ ಕೇಂದ್ರವಾಗಿ ಪರಿವರ್ತನೆಯಾಗಿದೆ. ಇಲ್ಲಿಂದ ಕಿಟಕಿಗಳ ಮೂಲಕ ದಾಳಿ ಮಾಡುವ ಸೊಳ್ಳೆಗಳ ವಿದ್ಯಾರ್ಥಿಗಳ ಪ್ರಾಣ ಹಿಂಡುತ್ತಿವೆ ಸೊಳ್ಳೆಗಳಿಂದ ತಪ್ಪಿಸಿಕೊಳ್ಳಲು ಹುಡುಗರು ಪರದಾಡುತ್ತಿದ್ದಾರೆ.
80 ಕ್ಕೂ ಹೆಚ್ಚು ಹುಡುಗರ ಪಾಡು: ದೇವನಹಳ್ಳಿ ಮುಖ್ಯರಸ್ತೆಯಲ್ಲಿರುವ ವಿದ್ಯಾರ್ಥಿ ನಿಲಯದಲ್ಲಿ 80ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು, ಇಲ್ಲಿನ ವಿದ್ಯಾರ್ಥಿನಿಲಯದಲ್ಲಿ ಎಲ್ಲ ಕೊಠಡಿಗಳ ಗ್ಲಾಸ್‌ಗಳು ಒಡೆದು ಹೋದ ಕಾರಣ ಸೊಳ್ಳೆಗಳ ಕಾಟದಿಂದ ರಾತ್ರಿ ವೇಳೆ ನಿದ್ರೆ ಮಾಡದೆ ಜಾಗರಣೆ ಇರುವಂತಾಗಿದೆ. ಬೆಳಗ್ಗಿನ ಸಮಯದಲ್ಲೂ ಇವುಗಳ ಕಾಟ ತಪ್ಪದ ಕಾರಣ ದಿಕ್ಕು ತೋಚದೆ ವಿದ್ಯಾರ್ಥಿಗಳು ನರಳುವಂತ ಪರಿಸ್ಥಿತಿ ಬಂದಿದೆ.
ಬಟ್ಟೆ ಪೇಪರ್ ಕಸರತ್ತು: ಹಾಸ್ಟೆಲ್‌ನ ಯಾವುದೇ ಕೊಠಡಿಗೆ ಹೋದರೂ ಅಲ್ಲಿನ ವಿದ್ಯಾರ್ಥಿಗಳು ಕಿಟಕಿಗಳಿಗೆ ಬಟ್ಟೆ ಅಥವಾ ಪೇಪರ್ ಶೀಟ್‌ಗಳನ್ನು ಕಟ್ಟಿಕೊಂಡಿರುವ ದೃಶ್ಯಗಳು ಕಂಡುಬರುತ್ತವೆ, ಇದರ ಮೂಲಕವೇ ಸೊಳ್ಳೆಗಳ ದಾಳಿಯಿಂದ ತಪ್ಪಿಸಿಕೊಳ್ಳುವ ಕಸರತ್ತು ನಡೆಸುತ್ತಿದ್ದಾರೆ. ಮಳೆಗಾಳದಲ್ಲಿ ಮಳೆ ನೀರು ಕಿಡಿಕಿ ಮೂಲಕ ಒಳಗೆ ಬರುತ್ತದೆ ಇದರಿಂದ ಮಕ್ಕಳ ಬಟ್ಟೆ ಸೇರಿ ಇನ್ನಿತರ ಪರಿಕರಗಳು ಒದ್ದೆಯಾಗುತ್ತಿವೆ. ಚಳಿ ತಡೆಯಲಾರದೆ ನಡುಗುವ ಮಕ್ಕಳು ಅನಿವಾರ್ಯವಾಗಿ ಎಲ್ಲ ಕಷ್ಟವನ್ನು ಎದುರಿಸುವಂತಾಗಿದೆ.
ಕೋತಿಗಳ ಹಾವಳಿ: ಒಂದು ಕಡೆ ಸೊಳ್ಳೆಗಳ ಕಾಟದಿಂದ ಹೈರಾಣಾಗಿರುವ ವಿದ್ಯಾರ್ಥಿಗಳು ಅತ್ತ ಕೋತಿಗಳ ಕಾಟವನ್ನೂ ಎದುರಿಸುವಂತಾಗಿದೆ. ಕಿಟಕಿಗಳ ಮೂಲಕ ಸುಲಭವಾಗಿ ಒಳಪ್ರವೇಶಿಸುವ ಮಂಗಗಳು ಹಾಸ್ಟೆಲ್‌ನಲ್ಲಿ ಬಟ್ಟೆ, ತಿಂಡಿ ತಿನಿಸಿ ಏನೆ ಕಂಡರೂ ಎತ್ತಿಕೊಂಡು ಪರಾರಿಯಾಗುತ್ತವೆ ಕೆಲವು ವೇಳೆ ಕೋತಿಗಳು ಓಡಿಸಲು ಬಂದರೆ ಹುಡುಗರ ಮೇಲೆ ಎರಗುವ ಸನ್ನಿವೇಶಗಳು ಕಂಡುಬರುತ್ತವೆ ಎಂಬುದು ವಿದ್ಯಾರ್ಥಿಗಳ ಅಳಲಾಗಿದೆ. ವಸತಿ ನಿಲಯಕ್ಕೆ ಸೂಕ್ತ ಭದ್ರತೆ ಕೊರತೆ ಎದುರಾಗಿದೆ.
ಹಾಸ್ಟೆಲ್‌ಗಳ ಕಿಟಿಕಿಗಳಲ್ಲಿನ ಗ್ಲಾಸುಗಳು ಒಡೆದು ಹೋಗಿ ಎಷ್ಟೋ ವರ್ಷಗಳಾಗಿವೆ, ಅವುಗಳನ್ನು ದುರಸ್ತಿ ಮಾಡುವ ಕೆಲಸಕ್ಕೆ ಮುಂದಾಗಿಲ್ಲ. ಇದರಿಂದ ವಿದ್ಯಾರ್ಥಿಗಳು ಸೊಳ್ಳೆ ಕಾಟ ಎದುರಿಸುವಂತಾಗಿದೆ. ಮಳೆಗಾಲದಲ್ಲಿ ಬಹಳ ತೊಂದರೆ ಎದುರಿಸುತ್ತಿದ್ದಾರೆ. ಇದರೊಂದಿಗೆ ಕೋತಿಗಳ ಕಾಟವೂ ವಿದ್ಯಾರ್ಥಿಗಳನ್ನು ಹೈರಾಣಾಗಿಸುತ್ತಿದೆ. ಸಂಬಂಧಪಟ್ಟವರು ಎಚ್ಚೆತ್ತುಕೊಂಡು ಕೂಡಲೇ ಕ್ರಮಕ್ಕೆ ಮುಂದಾಗಬೇಕು.
ವಿಜಯ್‌ಕುಮಾರ್, ವಿಜಯಪುರ ನಿವಾಸಿ
------
ವಿದ್ಯಾರ್ಥಿಗಳಿಗೆ ಮುಖ್ಯವಾಗಿ ಅಭ್ಯಾಸ ಮಾಡಲು ಅನುಕೂಲವಾಗುವಂತ ವಾತಾವರಣ ಇರಬೇಕು ಆದರೆ ಇಲ್ಲಿ ಅದಕ್ಕೆ ತದ್ವಿರುದ್ದವಾಗಿದೆ. ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಬೇಕಾದ ಹಾಸ್ಟೆಲ್ ಸಿಬ್ಬಂದಿಯೇ ಸ್ವಚ್ಛತೆ ಬಗ್ಗೆ ನಿರ್ಲಕ್ಷ್ಯ ತೋರಿಸುತ್ತಿದ್ದಾರೆ. ಇದರಿಂದ ಹಾಸ್ಟೆಲ್ ಸುತ್ತಮುತ್ತಲ ಪ್ರದೇಶದಲ್ಲಿ ಗಿಡಗಂಟಿಗಳು ಬೆಳೆದು ಸೊಳ್ಳೆಗಳ ಆವಾಸ ಸ್ಥಾನವಾಗಿ ರೂಪುಗೊಂಡಿದೆ. ಸಾಂಕ್ರಾಮಿಕ ರೋಗಳ ಭೀತಿ ಎದುರಾಗಿದೆ.
ಕೃಷ್ಣಪ್ಪ, ಸ್ಥಳೀಯ ನಿವಾಸಿ