ಹಾಸ್ಟೆಲ್ ಹೊರಗುತ್ತಿಗೆ ಸಿಬ್ಬಂದಿ ಪ್ರತಿಭಟನೆ, ಸೇವಾ ಭದ್ರತೆಗೆ ಆಗ್ರಹ

IMG_20230705_174454.jpg
Published on

ಬೆಳಗಾವಿ: ಹಾಸ್ಟೆಲ್ ಹೊರಗುತ್ತಿಗೆ ಸಿಬ್ಬಂದಿ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಒತ್ತಾಯಿಸಿ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾ ಸಮಿತಿಯಿಂದ ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಯಿತು.
 ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳಡಿ ನಡೆಸುತ್ತಿರುವ ವಿದ್ಯಾರ್ಥಿ ನಿಲಯಗಳಲ್ಲಿ 15-20 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಅಡುಗೆ ಸಹಾಯಕರು, ಕಾವಲುಗಾರರು, ಸ್ವಚ್ಛತಾಗಾರರು, ಜವಾನರು, ನರ್ಸ್‌ಗಳು, ಡಿ ಗ್ರೂಪ್ ನೌಕರರು ಕೆಲಸ ಮಾಡುತ್ತಿದ್ದಾರೆ. ಆದರೆ, ಇವರಿಗೆ ಸಿಗಬೇಕಾದ ಸೌಲಭ್ಯಗಳು ಸಿಗುತ್ತಿಲ್ಲ. ಹೀಗಾಗಿ ‘ಸಿ’ ಮತ್ತು ‘ಡಿ’ ವರ್ಗದ ಹೊರ ಗುತ್ತಿಗೆ ಸಿಬ್ಬಂದಿಗೆ ನಿವೃತ್ತಿವರೆಗೆ ಸೇವಾ ಭದ್ರತೆ ಕೊಡಬೇಕು. ನೇರವಾಗಿ ಇಲಾಖೆಯಿಂದ ಮಾಸಿಕ ವೇತನ ಬ್ಯಾಂಕ್ ಖಾತೆಗೆ ಹಾಕಬೇಕು. 2023 ಏಪ್ರಿಲ್ 1ರ ಕಾರ್ಮಿಕ ಇಲಾಖೆ ಆದೇಶದಂತೆ ಕನಿಷ್ಠ ವೇತನ ಕೊಡಬೇಕು. ಕಾನೂನು ಪ್ರಕಾರ ವಾರದ ರಜೆ, ಹಬ್ಬಳಗಳ ರಜೆ, ಇಎಸ್‌ಐ ಕಾರ್ಡ್, ಪಿ.ಎಫ್.ಗೆ ಹಣ ತುಂಬಿದ ರಶೀದಿ ಕೊಡಬೇಕು. ಸಮಾಜ ಕಲ್ಯಾಣ ಇಲಾಖೆಯಲ್ಲಿ ನೌಕರರ ಸಂಖ್ಯೆ ಕಡಿಮೆ ಮಾಡಿರುವ ಆದೇಶ ವಾಪಸ್ ಪಡೆಯಬೇಕು. ಕೆಲಸದ ಸ್ಥಳದಲ್ಲೇ ನಮಗೆ ಕೆಲಸದ ಭದ್ರತೆ ಕೊಡಬೇಕು. ಬಿಸಿಎಂ ಇಲಾಖೆಯ ವಿದ್ಯಾರ್ಥಿ ನಿಲಯಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚು ಮಾಡಿದ್ದು, ಹಾಗೆಯೇ ಸಿಬ್ಬಂದಿ ಸಂಖ್ಯೆ ಸಹ ಹೆಚ್ಚಿಸಬೇಕು. ಬಾಕಿ ಇರುವ ಸಂಬಳ ತಕ್ಷಣ ಕೊಡಬೇಕು. ನೇರ ನೇಮಕಾತಿ ಸಮಯದಲ್ಲಿ ಕೆಸಲ ಕಳೆದುಕೊಂಡ ಹೊರಗುತ್ತಿಗೆ ನೌಕರನ್ನು ಮತ್ತೆ ಕೆಲಸಕ್ಕೆ ತೆಗೆದುಕೊಳ್ಳಬೇಕು. ಜನಪ್ರತಿನಿಧಿಗಳು ಹೊರುಗುತ್ತಿಗೆ ನೌಕರರಾಗಿ ಕೆಲಸಕ್ಕೆ ತೆಗೆದುಕೊಳ್ಳಲು ಶಿಫಾರಸು ಪತ್ರಗಳನ್ನು ಪರಿಗಣಿಸಬಾರದು. ಇದರಿಂದ ಹಾಲಿ ಹೊರಗುತ್ತಿಗೆ ನೌಕರರು ಕೆಲಸ ಕಳೆದುಕೊಳ್ಳುತ್ತಾರೆ. ವಾರ್ಡನ್ ಮತ್ತು ಅಧಿಕಾರಿಗಳ ಕಿರುಕುಳ ನಿಲ್ಲಬೇಕು. ಅಕ್ರಮವಾಗಿ ನೇಮಕ ಮಾಡಿಕೊಳ್ಳುವ ವಾರ್ಡನ್ ಮತ್ತು ಅಧಿಕಾರಿಗಳ ಮೇಲೆ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಮನವಿ ಮೂಲಕ ಜಿಪಂ ಕಾರ್ಯ ನಿರ್ವಾಹಕ ಅಧಿಕಾರಿಗೆ ಮನವಿ ಸಲ್ಲಿಸಿದರು.
 ರೇಣುಕಾ ನಾಗನೂರು, ಪ್ರದೀಪ ದಳವಾಯಿ, ಲಕ್ಕಪ್ಪ ಕಾಂಬಳೆ, ದ್ವಾರಿಕಾ ಯದ್ದಲಪುಡಿ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net