

ಕೆ.ಎಂ.ದೊಡ್ಡಿ: ಭಾರತೀ ವಿದ್ಯಾಸಂಸ್ಥೆಯ ಗುಣಮಟ್ಟ ಹೆಚ್ಚಲು ಶಾಸಕ ಡಿ.ಸಿ.ತಮ್ಮಣ್ಣ ಕಾರಣರಾಗಿದ್ದು, ಶಿಕ್ಷಣ ಕ್ಷೇತ್ರದ ಹರಿಕಾರರಾಗಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ತಿಳಿಸಿದರು.
ಸಮೀಪದ ಗುಡಿಗೆರೆಯಲ್ಲಿ ಡಿ.ದೇವರಾಜು ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದ ಘಟಕ-2ರ ಕಟ್ಟಡ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಡಿ.ಸಿ.ತಮ್ಮಣ್ಣ ಅವರಿಗೆ ಶಿಕ್ಷಣದ ಬಗ್ಗೆ ಅಪಾರ ಕಾಳಜಿ ಇದೆ. ಹೀಗಾಗಿಯೇ ಅವರು ಶಾಸಕರಾದ ನಂತರ ಗ್ರಾಮೀಣ ಭಾಗದಲ್ಲಿ ಸರ್ಕಾರಿ ಪ್ರೌಢಶಾಲೆ ಮತ್ತು ಕಾಲೇಜುಗಳನ್ನು ತೆರೆದು ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿದ್ದಾರೆ. ಇದೀಗ ಬೃಹತ್ ವಿದ್ಯಾರ್ಥಿ ನಿಲಯ ನಿರ್ಮಿಸಿ ಮಕ್ಕಳಿಗೆ ಮತ್ತಷ್ಟು ಅನುಕೂಲ ಕಲ್ಪಿಸಿಕೊಟ್ಟಿದ್ದಾರೆ ಎಂದು ಶ್ಲಾಘಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಡಿ.ಸಿ.ತಮ್ಮಣ್ಣ ಮಾತನಾಡಿ, ಜಿಲ್ಲೆಯಲ್ಲಿ ಮಾಜಿ ಸಂಸದ ಜಿ.ಮಾದೇಗೌಡ ಮಾಡಿದ ಶೈಕ್ಷಣಿಕ ಕ್ರಾಂತಿ ಅಜಾರಾಮರ. ಇದೀಗ ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಶಿಕ್ಷಣ ಸಂಸ್ಥೆಯ ಜವಾಬ್ದಾರಿ ವಹಿಸಿಕೊಂಡು ಉತ್ತಮವಾಗಿ ನಡೆಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ತಹಸೀಲ್ದಾರ್ ನರಸಿಂಹಮೂರ್ತಿ, ಜಿಲ್ಲಾ ಹಿಂದುಳಿದ ವರ್ಗಗಳ ಜಿಲ್ಲಾ ಅಧಿಕಾರಿ ಶ್ರೀನಿವಾಸ್, ತಾಲೂಕು ಅಧಿಕಾರಿ ಪ್ರಕಾಶ್ ಕೋರ್ಜಿ, ವಿಸ್ತರಣಾಧಿಕಾರಿ ಶಿವರಾಜು, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ನಾಗಲಕ್ಷ್ಮೀ, ನಿರ್ಮಿತ ಕೇಂದ್ರದ ಎಇಇ ನರೇಶ್, ಗ್ರಾಪಂ ಅಧ್ಯಕ್ಷ ವಕ್ರತುಂಡ ವೆಂಕಟೇಶ್, ಉಪಾದ್ಯಕ್ಷೆ ಮಹದೇವಮ್ಮ, ಗ್ರಾಪಂ ಸದಸ್ಯರಾದ ಕೆ.ಟಿ.ಶ್ರೀನಿವಾಸ್, ರಾಘವೇಂದ್ರ, ರಾಮಚಂದ್ರೇಗೌಡ, ಮಿಥುನ್, ಸಿದ್ದರಾಜು, ಮಂಜುನಾಥ್ ಇತರರಿದ್ದರು.