

ಮೈಸೂರು: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ನೂತನ ಹಾಸ್ಟೆಲ್ ಪ್ರಾರಂಭೋತ್ಸವಕ್ಕೆ ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಕೆ.ಬಿ.ಪ್ರಭುಸ್ವಾಮಿ ಅವರು, ದೇವರಾಜ ಅರಸು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು.
ಹಳ್ಳಿ ಬೋಗಾದಿಯಲ್ಲಿರುವ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿನಿಲಯದಲ್ಲಿ ಬುಧವಾರ ಆಯೋಜಿಸಿದ್ದ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಿಕ್ಷಣಕ್ಕೆ ಹೆಚ್ಚು ಒತ್ತುಕೊಟ್ಟು ರಾಜ್ಯದಲ್ಲಿ 150 ಹಿಂದುಳಿದ ವರ್ಗಗಳ ಹಾಸ್ಟೆಲ್‌ಗಳನ್ನು ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಆನ್‌ಲೈನ್ ಮೂಲಕ ಉದ್ಘಾಟನೆ ಮಾಡಿದ್ದಾರೆ ಎಂದು ಹೇಳಿದರು.
ಮೈಸೂರು ಜಿಲ್ಲೆಗೆ 14 ಹಾಸ್ಟೆಲ್‌ಗಳು ಮಂಜೂರಾಗಿದ್ದು, ವಿದ್ಯಾರ್ಥಿಗಳು ಸರ್ಕಾರದ ಸೌಲಭ್ಯವನ್ನು ಸದುಪಯೋಗಪಡಿಸಿಕೊಂಡು ಜೀವನದಲ್ಲಿ ಗುರಿ ತಲುಪಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಂಡು ಸಾಧನೆ ಮಾಡಬೇಕು ಎಂದು ಸಲಹೆ ನೀಡಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ರಾಘವೇಂದ್ರ ಮಾತನಾಡಿ, ಮುಖ್ಯಮಂತ್ರಿಗಳು ಮೈಸೂರಿನವರೇ ಆಗಿರುವುದರಿಂದ ನಮ್ಮ ಜಿಲ್ಲೆಗೆ 14 ಹಾಸ್ಟೆಲ್‌ಗಳನ್ನು ಕೊಟ್ಟಿದ್ದಾರೆ. ವಿದ್ಯಾರ್ಥಿಗಳಿಗೆ ಹಂತ, ಹಂತವಾಗಿ ಎಲ್ಲ ಸೌಲಭ್ಯಗಳನ್ನು ಮಾಡಿಕೊಡುತ್ತೇವೆ. ಎಲ್ಲರೂ ಚೆನ್ನಾಗಿ ಓದಬೇಕು. ಸರ್ಕಾರಕ್ಕೆ ತಂದೆ ತಾಯಿಗೆ ಒಳ್ಳೆಯ ಹೆಸರು ತರಬೇಕು ಎಂದರು.
ತಾಲೂಕು ಕಲ್ಯಾಣಾಧಿಕಾರಿ ಚಂದ್ರಕಲಾ, ನಿಲಯಪಾಲಕ ಜಗದೀಶ್ ಜಿ. ಕೋರಿ ಇತರರು ಇದ್ದರು.