ಹಾಸ್ಟೆಲ್ ಸೀಟುಗಳಿಗೆ ಡಿಮಾಂಂಡ್  ಕೈ ಚೆಲ್ಲಿ ಕುಳಿತಿದೆ ಜಿಲ್ಲಾಡಳಿತ  ಕೇಳೊರಿಲ್ಲ ಬಡ ಮಕ್ಕಳ ಗೋಳು

20TMK_BCM_Hostel1
Published on

ತುಮಕೂರು ; ಎಸ್ಸೆಸ್ಸೆಲ್ಸಿ ನಂತರದ ವಿದ್ಯಾಭ್ಯಾಸಕ್ಕಾಗಿ ಕನಸುಕಟ್ಟಿಕೊಂಡು ಜಿಲ್ಲಾ ಕೇಂದ್ರ ತುಮಕೂರಿಗೆ ಬಂದಿರುವ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ನೆಲೆ ಇಲ್ಲದಂತಾಗಿದೆ, ಬಿಸಿಎಂ ಹಾಸ್ಟೆಲ್‌ನಲ್ಲಿ ಸೀಟುಗಳಿಗೆ ವಿಪರೀತ ಬೇಡಿಕೆ ಸೃಷ್ಟಿಯಾಗಿದ್ದು ಬಿಸಿಎಂ, ಜಿಪಂ ಕಚೇರಿ ಮುಂದೆ ಪ್ರತಿದಿನ ನೂರಾರು ವಿದ್ಯಾರ್ಥಿಗಳು ಬಾಗಿಲು ಕಾದು ವಾಪಸಾಗುತ್ತಿದ್ದಾರೆ.

ಕರೊನಾ ಹಿನ್ನೆಲೆಯಲ್ಲಿ ಪರೀಕ್ಷೆ ಇಲ್ಲದೆ ಎಸ್ಸೆಸ್ಸೆಲ್ಸಿ, ಪಿಯು ಓದುತ್ತಿದ್ದ ಎಲ್ಲ ವಿದ್ಯಾರ್ಥಿಗಳನ್ನು ತೇರ್ಗಡೆ ಮಾಡಿದ್ದು ಹಾಸ್ಟೆಲ್ ಸೀಟುಗಳಿಗೆ ಬೇಡಿಕೆ ಹೆಚ್ಚಾಗಲು ಕಾರಣವಾಗಿದೆ. ಜಿಲ್ಲೆಯಲ್ಲಿ 49 ಬಿಸಿಎಂ ಹಾಸ್ಟೆಲ್‌ಗಳಲ್ಲಿ ಲಭ್ಯವಿರುವ 5227 ಸೀಟುಗಳಿಗೆ ಬರೋಬ್ಬರಿ 10033 ಅರ್ಜಿಗಳು ಸಲ್ಲಿಕೆಯಾಗಿದ್ದು ಬಹುತೇಕ ವಿದ್ಯಾರ್ಥಿಗಳು ನೆಲೆ ಇಲ್ಲದೆ ಅಲೆದಾಡುವಂತಾಗಿದೆ.

ತುಮಕೂರು ನಗರದಲ್ಲಿಯೇ ಹಾಸ್ಟೆಲ್ ಸೀಟುಗಳಿಗೆ ಹೆಚ್ಚು ಬೇಡಿಕೆ ಸೃಷ್ಟಿಯಾಗಿದ್ದು 16 ವಿದ್ಯಾರ್ಥಿನಿಲಯಗಳಲ್ಲಿ 2025 ಸೀಟುಗಳಿದ್ದು 5992 ವಿದ್ಯಾರ್ಥಿಗಳು ಹಾಸ್ಟೆಲ್ ಬಯಸಿದ್ದಾರೆ. 3967 ವಿದ್ಯಾರ್ಥಿಗಳು ಪ್ರತಿದಿನ ಬಿಸಿಎಂ ಇಲಾಖೆ ಕಚೇರಿಗಳು ಹಾಗೂ ಜಿಪಂ ಸಿಇಒ, ಜಿಲ್ಲಾಧಿಕಾರಿ ಕಚೇರಿ ಮುಂದೆ ಕಾಯುತ್ತಿರುವುದು ಸಾಮಾನ್ಯ ಎನಿಸಿದೆ.

ತುಮಕೂರು ನಗರದಲ್ಲಿ ಪ್ರಸ್ತುತ 13 ಹಾಸ್ಟೆಲ್‌ಗೆ ಅರ್ಜಿ ಆಹ್ವಾನಿಸಲಾಗಿದ್ದು, 5992 ವಿದ್ಯಾರ್ಥಿಗಳು ಬಿಸಿಎಂ ಹಾಸ್ಟೆಲ್‌ಗಳನ್ನು ಬಯಸಿದ್ದಾರೆ, ಈ ಪೈಕಿ ವರ್ಗ1ರ 948, 2ಎ 1542, 2ಬಿ 86, 3ಎ ಪ್ರವರ್ಗದ 2103, 3ಬಿ 476, ಎಸ್ಸಿ 570, ಎಸ್ಟಿ ಸಮುದಾಯದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್‌ಗಳಲ್ಲಿಯೂ ಇದೇ ಪರಿಸ್ಥಿತಿಯಿದ್ದು ಜಿಲ್ಲೆಯಲ್ಲಿ ವಿದ್ಯಾರ್ಥಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಲಭ್ಯವಿರುವ ಸೀಟುಗಳಲ್ಲಿಯೇ ಇನ್ನೂ ಪ್ರವೇಶಾತಿ ನಡೆಯುತ್ತಿರುವ ಬಿ.ಇಡಿ, ಮೆಡಿಕಲ್ ಹಾಗೂ ತಾಂತ್ರಿಕ ಶಿಕ್ಷಣ ಕೋರ್ಸ್‌ಗಳ ವಿದ್ಯಾರ್ಥಿಗಳಿಗೆ ಅವಕಾಶ ನೀಡಬೇಕಿದೆ. ಹಾಗಾಗಿ, ಲಭ್ಯವಿರುವ ಸೀಟಿನಲ್ಲಿ ಅರ್ಜಿ ಸಲ್ಲಿಸಿರುವ ಶೇ.25 ವಿದ್ಯಾರ್ಥಿಗಳಿಗೂ ಸೀಟು ನೀಡಲು ಸಾಧ್ಯವಿಲ್ಲ. ಬಡ ವಿದ್ಯಾರ್ಥಿಗಳು ನಗರದ ದುಬಾರಿ ಜೀವನ ನಿರ್ವಹಣೆ ಸಾಧ್ಯವಾಗದೆ ವಿದ್ಯಾಭ್ಯಾಸ ಮೊಟಕುಗೊಳಿಸುವ ಸಾಧ್ಯತೆಯೂ ಇದೆ.

ಹೆಚ್ಚುವರಿ ಸೀಟು ಕೊಟ್ಟರೆ ಮೂಲಸೌಕರ್ಯ ಕಷ್ಟ : ಹಾಸ್ಟೆಲ್‌ಗೆ ಬೇಡಿಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಹೆಚ್ಚುವರಿ ಸೀಟು ಸೃಜಿಸಲು ಇಲಾಖೆ ಕೊನೆಯ ಸಮಯದಲ್ಲಿ ಆದೇಶ ನೀಡುವ ಸಾಧ್ಯತೆಯಿದೆ, ಮೂಲಸೌಕರ್ಯವೇ ಇಲ್ಲದೆ ಹೆಚ್ಚುವರಿ ಸೀಟು ನೀಡಿ ಮಕ್ಕಳಿಗೆ ಪ್ರವೇಶ ನೀಡಿದರೆ ತುಮಕೂರು ನಗರದಲ್ಲಿ ಕೊಠಡಿ ಸಮಸ್ಯೆ ಎದುರಾಗಲಿದೆ. ಕೊಠಡಿ ಲಭ್ಯವಾದರೂ ಹಾಸ್ಟೆಲ್ ನಿರ್ವಹಣೆಗೆ ಅಗತ್ಯವಾದ ಮಾನವ ಸಂಪನ್ಮೂಲ ಒದಗಿಸಲು ಹಣಕಾಸು ಇಲಾಖೆ ಒಪ್ಪಿಗೆ ಅಗತ್ಯವಿದ್ದು ಅದೂ ಕಷ್ಟವಾಗಲಿದೆ. ಹಾಗಾಗಿ, ಪೂರ್ವಾಲೋಚನೆ ಇಲ್ಲದೆ ಕಾಲೇಜು ಆರಂಭಿಸಲಾಗಿದ್ದು ಬಡ ಮಕ್ಕಳು ಪರಿತಪಿಸುವಂತಾಗಿದೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿಯಾದರೂ ಸರ್ಕಾರ ಮುಂದಾಲೋಚನೆಯಿಂದ ಎಲ್ಲ ಮಕ್ಕಳಿಗೂ ಹಾಸ್ಟೆಲ್ ನೀಡುವ ನಿಟ್ಟಿನಲ್ಲಿ ಪೂರ್ವತಯಾರಿ ಮಾಡಿಕೊಳ್ಳಬೇಕಿದೆ.

ಜನಪ್ರತಿನಿಧಿಗಳ ೆನ್ ನಾಟ್ ರೀಚಬಲ್ : ಹಾಸ್ಟೆಲ್ ಸೀಟುಗಳಿಗೆ ಬೇಡಿಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಉತ್ತರಿಸಲಾಗದೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹೈರಾಣಾಗಿದ್ದಾರೆ. ಖುದ್ದು ಜಿಪಂ ಸಿಇಒ ಕಚೇರಿ ಮುಂದೆಯೇ ವಿದ್ಯಾರ್ಥಿಗಳ ದಂಡು ಬರುತ್ತಿದೆ. ಜನಪ್ರತಿನಿಧಿಗಳು ಶಿಫಾರಸು ಮಾಡಿದರೂ ಸೀಟು ಕೊಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದ್ದು ಎಲ್ಲರೂ ಕೈಚೆಲ್ಲಿದ್ದಾರೆ. ಕ್ಷೇತ್ರದ ಜನರು ಹಾಸ್ಟೆಲ್ ಸೀಟುಗಳಿಗೆ ಜನಪ್ರತಿನಿಧಿಗಳ ಮೊರೆ ಹೋಗಿದ್ದು ಅಸಹಾಯಕರಾಗಿರುವ ಜನಪ್ರತಿನಿಧಿಗಳು ೆನ್ ರಿಸಿವ್ ಮಾಡದೆ ತಪ್ಪಿಸಿಕೊಂಡು ಓಡಾಡುತ್ತಿದ್ದಾರೆ. ಶಾಸಕರ ಆಪ್ತ ಸಹಾಯಕರು ಕರೆ ಸ್ವೀಕರಿಸಿ ಸಾಹೇಬರು ಅಧಿವೇಶನದಲ್ಲಿದ್ದಾರೆ ಎಂದು ಹೇಳಿ ಕೈತೊಳೆದುಕೊಳ್ಳುತ್ತಿದ್ದಾರೆ.

ಹಾಸ್ಟೆಲ್ ಸೀಟು ಸಿಗಲಿದೆ ಎಂದು ನಂಬಿ ತುಮಕೂರಿನ ಕಾಲೇಜಿಗೆ ಸೇರಿದ್ದು ತಪ್ಪಾಗಿ ಹೋಗಿದೆ, ಈಗ ನಾನು ಉಳಿಯಲು ಜಾಗವಿಲ್ಲದೆ ಕಾಲೇಜು ಬಿಡುವ ಸ್ಥಿತಿ ಎದುರಾಗಿದೆ. ಅರ್ಜಿ ಹಿಡಿದು ಯಾರ ಬಳಿ ಹೋದರೂ ಉಪಯೋಗವಾಗುತ್ತಿಲ್ಲ. ಹಾಸ್ಟೆಲ್ ಸಿಗದಿದ್ದರೆ ನನ್ನಂತಹ ನೂರಾರು ಬಡ ಕುಟುಂಬದ ಮಕ್ಕಳು ಕಾಲೇಜು ಬಿಡಬೇಕಷ್ಟೇ. ಯಶೋದಾ ವಿದ್ಯಾರ್ಥಿನಿ ಪ್ರತಿವರ್ಷಕ್ಕಿಂತ ಈ ಶೈಕ್ಷಣಿಕ ವರ್ಷದಲ್ಲಿ ಹೆಚ್ಚು ಅರ್ಜಿಗಳು ಬಂದಿದ್ದು ಲಭ್ಯವಿರುವ ಸೀಟುಗಳಲ್ಲಿ ಎಲ್ಲ ವಿದ್ಯಾರ್ಥಿಗಳಿಗೂ ಸೌಕರ್ಯ ನೀಡುವುದು ಕಷ್ಟವಾಗಿದೆ, ಇಲಾಖೆ ಮಾರ್ಗಸೂಚಿಯಂತೆ ಮೆರಿಟ್ ಆಧಾರದ ಮೇಲೆ ಈಗಾಗಲೇ ಎರಡು ಆಯ್ಕೆಪಟ್ಟಿ ಪ್ರಕಟಿಸಲಾಗಿದ್ದು ಮೇಲಧಿಕಾರಿಗಳ ಗಮನಕ್ಕೂ ತರಲಾಗಿದೆ. ಅವರ ಸೂಚನೆಯಂತೆ ಕ್ರಮಕೈಗೊಳ್ಳುತ್ತೇವೆ. ತ್ಯಾಗರಾಜು ಜಿಲ್ಲಾ ಅಧಿಕಾರಿ, ಬಿಸಿಎಂ ಇಲಾಖೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net