

ಗಂಗೊಳ್ಳಿ: ಹೊಸಾಡು ಗ್ರಾಪಂ ಮುಳ್ಳಿಕಟ್ಟೆಯಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ-66ರ ಅಗಲೀಕರಣ ಹಾಗೂ ಅವೈಜ್ಞಾನಿಕ ಕಾಮಗಾರಿಗಳಿಂದ ಜನ ಹೈರಾಣಾಗಿದ್ದು, ರೈತರು ಅಪಾರ ನಷ್ಟ ಅನುಭವಿಸುತ್ತಿದ್ದಾರೆ ಸಮಸ್ಯೆ ಬಗೆಹರಿಸಲು ಕ್ರಮಕೈಗೊಳ್ಳಬೇಕು ಎಂದು ಮುಳ್ಳಿಕಟ್ಟೆ-ಅರಾಟೆ ಗ್ರಾಮದ ಮುಖಂಡ ಪ್ರದೀಪ ಶೆಟ್ಟಿ ಆಗ್ರಹಿಸಿದ್ದಾರೆ.
ಹೆದ್ದಾರಿ ಅಗಲೀಕರಣದಿಂದಾಗಿ ಇಲ್ಲಿ ಮಳೆ ನೀರು ಹರಿದು ಹೋಗಲು ಜಾಗವಿಲ್ಲ. ಹೆದ್ದಾರಿ, ಗೇರು ನಿಗಮ ಜಾಗದ ನೀರು, ಖಾಸಗಿ ವ್ಯಕ್ತಿಯೊಬ್ಬರ ಜಾಗದ ನೀರು ಹಾಗೂ ಮೊವಾಡಿ ಕಡೆಯಿಂದ ಬರುವ ಮಳೆ ನೀರನ್ನೆಲ್ಲ ಹೊಸಾಡು ಕಡೆಗೆ ಬಿಡುತ್ತಿದ್ದು, ಕೆಲ ದಿನ ಹಿಂದೆ 7-8 ಮನೆಗಳಿಗೆ ಕಾಂಪೌಂಡ್ಗೆ ಹಾನಿಯಾಗಿದೆ. ಬಾವಿ ನೀರು ಕಲುಷಿತಗೊಂಡಿದೆ. 250 ಎಕರೆ ಕೃಷಿ ಭೂಮಿಗೂ ತೊಂದರೆಯಾಗುತ್ತಿದೆ. ಕೆಲವರು ಈ ಸಮಸ್ಯೆಯಿಂದ ಕೃಷಿಯಿಂದಲೇ ವಿಮುಖರಾಗುತ್ತಿದ್ದಾರೆ. ಮುಳ್ಳಿಕಟ್ಟೆ, ಅರಾಟೆ ಭಾಗದಲ್ಲಿ ಮಳೆ ನೀರು ಹರಿದು ಹೋಗಲು ಸಮರ್ಪಕ ವ್ಯವಸ್ಥೆಯಿಲ್ಲದೆ ಪ್ರತಿ ಮಳೆಗೂ ಅವಾಂತರ ಸೃಷ್ಟಿಯಾಗುತ್ತಿದೆ. ಹೆದ್ದಾರಿ ಕಾಮಗಾರಿ ನಿರ್ವಹಿಸುವವರು ಮೊವಾಡಿಯಿಂದ ಅರಾಟೆಯ ಸೌಪರ್ಣಿಕ ನದಿಯವರೆಗೆ ಸಮರ್ಪಕ ಕಾಂಕ್ರೀಟ್ ಚರಂಡಿ ನಿರ್ಮಿಸಿಕೊಡಬೇಕು. ಇಲ್ಲದಿದ್ದರೆ ರಸ್ತೆಗಿಳಿದು ಹೋರಾಟ ನಡೆಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು. ಹೊಸಾಡು ಗ್ರಾಪಂ ಮಾಜಿ ಅಧ್ಯಕ್ಷ ಎಚ್.ಕೆ.ಚಂದ್ರಶೇಖರ ಪೂಜಾರಿ, ಗ್ರಾಮದ ಪ್ರಮುಖರಾದ ಎಂ.ಎಂ.ಸುವರ್ಣ, ವಿಶ್ವನಾಥ ಶೆಟ್ಟಿ ಸುದ್ದಿಗೋಷ್ಠಿಯಲ್ಲಿದ್ದರು.