

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ದೇವನಹಳ್ಳಿ ತಾಲೂಕು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಸ್ವಾಗತ ಕಮಾನು ಶಿಥಿಲಗೊಂಡಿದ್ದು, ಬೀಳುವ ಸ್ಥಿತಿಗೆ ತಲುಪಿದೆ.
ವಿಜಯಪುರ ಮುಖ್ಯರಸ್ತೆಯಲ್ಲಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಹಾಗೂ ಸರ್ಕಾರಿ ಪದವಿ ಕಾಲೇಜಿನ ತಡೆಗೋಡೆಗೆ ಹೊಂದಿಕೊಂಡಂತೆ ನಿರ್ಮಿಸಲಾಗಿರುವ ಸ್ವಾಗತ ಕಮಾನು ನಿರ್ವಹಣೆ ಇಲ್ಲದೆ ಶಿಥಿಲಗೊಂಡಿದ್ದು, ಆಗಲೋ ಈಗಲೋ ನೆಲಕಚ್ಚುವ ಸ್ಥಿತಿಯಲ್ಲಿದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.
ಪ್ರತಿನಿತ್ಯ ನೂರಾರು ರೋಗಿಗಳು, ಸಾರ್ವಜನಿಕರು ಓಡಾಡುವ ಆಯಕಟ್ಟಿನ ಜಾಗವಾಗಿದ್ದು, ಸ್ವಾಗತ ಕಮಾನು ಏಕಾಏಕಿ ನೆಲಕ್ಕುರಳಿದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂಬುದು ಸ್ಥಳೀಯರ ಆತಂಕವಾಗಿದೆ. ಪಕ್ಕದಲ್ಲೇ ಪದವಿ ಕಾಲೇಜಿದ್ದು, ನೂರಾರು ವಿದ್ಯಾರ್ಥಿಗಳು ಸ್ವಾಗತ ಕಮಾನಿನ ಸಮೀಪದಲ್ಲೇ ಓಡಾಡುತ್ತಾರೆ, ಅಪಾಯ ಸಂಭವಿಸುವ ಮುನ್ನವೇ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.
ತಡೆಗೋಡೆಯೂ ಶಿಥಿಲ: ಇದೇ ಸ್ವಾಗತ ಕಮಾನಿಗೆ ಹೊಂದಿಕೊಂಡಂತಿರುವ ತಡೆಗೋಡೆಯೂ ಶಿಥಿಲಗೊಂಡಿದೆ, ಸಿಮೆಂಟ್ ಕಿತ್ತು ಬಂದು ಹಾನಿಯಾಗಿದೆ. ಗಿಡ-ಗಂಟಿಗಳಿಂದ ಆವೃತವಾಗಿದ್ದು, ಸ್ವಚ್ಛತೆಯೂ ಮರೀಚಿಕೆಯಾಗಿದೆ, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕೂಡಲೇ ಕ್ರಮವಹಿಸಬೇಕು ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.
ಈ ಬಗ್ಗೆ ತಾಲೂಕು ಆರೋಗ್ಯ ಅಧಿಕಾರಿ ಗಮನಕ್ಕೆ ತರಲಾಗುವುದು, ಕೂಡಲೇ ಸ್ಥಳ ಪರಿಶೀಲಿಸಿ ಶಿಥಿಲಗೊಂಡಿದ್ದರೆ ದುರಸ್ತಿಗೊಳಿಸುವ ಅಥವಾ ಪೂರ್ಣವಾಗಿ ತೆರವುಗೊಳಿಸಿ ಹೊಸ ಕಮಾನು ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಕ್ರಮಕೈಗೊಳ್ಳುವಂತೆ ಸೂಚನೆ ನೀಡಲಾಗುವುದು.
ಸಾರ್ವಜನಿಕ ಆಸ್ಪತ್ರೆ, ಸರ್ಕಾರಿ ಕಾಲೇಜಿಗೆ ಹೊಂದಿಕೊಂಡಂತಿರುವ ಸ್ವಾಗತ ಕಮಾನು ಶಿಥಿಲಗೊಂಡಿದ್ದು, ಗಾಳಿಮಳೆಗೆ ನೆಲಕಚ್ಚುವ ಪರಿಸ್ಥಿತಿ ಎದುರಾಗಿದೆ. ಸಂಬಂಧಪಟ್ಟವರು ಕೂಡಲೇ ದುರಸ್ತಿಗೆ ಕ್ರಮ ಕೈಗೊಳ್ಳಬೇಕು, ಅನಾಹುತ ಸಂಭವಿಸುವ ಮೊದಲು ಎಚ್ಚೆತ್ತುಕೊಳ್ಳುವುದು ಅಗತ್ಯವಾಗಿದೆ.