ಆಸ್ಪತ್ರೆಗಳಿಗೆ ಸೀಲ್‌ಡೌನ್ ಆತಂಕ

hospital new
Published on

ವೇಣುವಿನೋದ್ ಕೆ.ಎಸ್. ಮಂಗಳೂರು

ಕರೊನಾ ಲಾಕ್‌ಡೌನ್‌ನಿಂದ ರೋಗಿಗಳಿಲ್ಲದೆ ತತ್ತರಿಸಿರುವ ಖಾಸಗಿ ಆಸ್ಪತ್ರೆಗಳು ಈಗ ಹೊರರೋಗಿಗಳನ್ನು ಹೇಗೆ ಸೇರಿಸಿಕೊಳ್ಳುವುದು ಎಂಬ ಸವಾಲು ಎದುರಿಸುತ್ತಿದ್ದು, ಇನ್ನೂ ಒಂದು ವಾರ ಒಪಿಡಿ ತೆರೆಯದಿರಲು ನಿರ್ಧರಿಸಿವೆ.

ಸರ್ಕಾರ ಹೊರರೋಗಿ ವಿಭಾಗಗಳನ್ನು ತೆರೆಯಲು ಅವಕಾಶ ನೀಡಿದೆ. ಆದರೆ ಕರೊನಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಹೇಗೆ ಎಂಬ ಚಿಂತೆ ಆಸ್ಪತ್ರೆಗಳದ್ದು. ಯಾವುದೇ ರೋಗಿಗಳನ್ನಾದರೂ ತಪಾಸಣೆ ನಡೆಸುವುದು, ದಾಖಲಿಸಿ ಚಿಕಿತ್ಸೆ ನೀಡುವುದು ಹೇಗೆ? ಯಾವ ಧೈರ್ಯದಿಂದ ರೋಗಿ ಹತ್ತಿರ ಹೋಗುವುದು ಎನ್ನುವುದು ವೈದ್ಯರ ಪ್ರಶ್ನೆ. ಒಂದು ವೇಳೆ ಯಾವುದೇ ರೋಗಿಯಲ್ಲಿ ಕೋವಿಡ್ ಖಚಿತಗೊಂಡರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಇತರರಿಗೆ, ಸಿಬ್ಬಂದಿಗೆ ಎಲ್ಲರಿಗೂ ರೋಗ ಸೋಂಕು ತಗಲುವ ಆತಂಕ, ಜತೆಗೆ 28 ದಿನಗಳ ಕಾಲ ಕ್ವಾರಂಟೈನ್‌ಗೆ ಒಳಗಾಗುವುದು ಮತ್ತು ಆಸ್ಪತ್ರೆಯನ್ನೇ ಸೀಲ್‌ಡೌನ್ ಮಾಡುವ ಹೆದರಿಕೆ.

ಬಂಟ್ವಾಳದಲ್ಲಿ ಖಾಸಗಿ ವೈದ್ಯರ ಮೇಲೆ ಕೇಸು ದಾಖಲಾಗಿರುವುದು ಮತ್ತು ಮಂಗಳೂರು ಪಡೀಲಿನ ಫಸ್ಟ್ ನ್ಯೂರೋ ಆಸ್ಪತ್ರೆಗೆ ಬಂದಿರುವ ಸ್ಥಿತಿ ನೋಡಿ ಇತರ ವೈದ್ಯರು, ಆಸ್ಪತ್ರೆ ಆಡಳಿತ ಆತಂಕಕ್ಕೆ ಬಿದ್ದಿವೆ.

ಆಸ್ಪತ್ರೆ ಗೈಡ್‌ಲೈನ್ಸ್: ಪ್ರಸ್ತುತ ಒಪಿಡಿ ತೆರೆಯುವುದಕ್ಕೆ ಸರ್ಕಾರ ಅವಕಾಶ ನೀಡಿದ್ದರೂ ಮಂಗಳೂರಿನ ಹೆಚ್ಚಿನ ಆಸ್ಪತ್ರೆಗಳು ಒಂದು ವಾರ ಕಾಲ ಕಾದು ನೋಡಲು ನಿರ್ಧರಿಸಿವೆ.

ಚಿಕಿತ್ಸೆ ಸಂಬಂಧ ಖಾಸಗಿ ಆಸ್ಪತ್ರೆಗಳ ಅಸೋಸಿಯೇಶನ್ ಮಾರ್ಗದರ್ಶಿ ಸೂತ್ರಗಳನ್ನು ತಮ್ಮ ಸದಸ್ಯ ಆಸ್ಪತ್ರೆಗಳಿಗೆ ನೀಡಿದೆ.

ಅದರಂತೆ ವೈದ್ಯರು ಎನ್-95 ಮಾಸ್ಕ್, ಫೇಸ್ ಶೀಲ್ಡ್, ಗ್ಲವ್ಸ್ ಕಡ್ಡಾಯವಾಗಿ ಹಾಕುವುದು, ಸಾಧ್ಯವಿದ್ದರೆ ಸ್ಕ್ರಬ್ ಸೂಟ್ಸ್, ಸರ್ಜಿಕಲ್ ಗೌನ್, ಪ್ರತಿ ರೋಗಿಯನ್ನು ಪರೀಕ್ಷಿಸಿದ ಬಳಿಕ ಸ್ಟೆರೀಲಿಯಂ ದ್ರಾವಣದಿಂದ ಶುಚಿಗೊಳಿಸುವುದು, ಆದಷ್ಟೂ ರೋಗಿಯನ್ನು ಮುಟ್ಟದೆ ಇರುವುದು ಮತ್ತು ಮುಟ್ಟಿದಲ್ಲಿ ಸೋಪ್‌ನಿಂದ ಶುಚಿಗೊಳಿಸುವುದು, ಸ್ಯಾನಿಟೈಸರ್ ಬಳಕೆ ಮಾಡುವುದು, ಮೊಬೈಲ್, ಟೆಲಿಫೋನ್ ಇತರ ವಸ್ತುಗಳನ್ನು ಆದಷ್ಟೂ ಕಡಿಮೆ ಮುಟ್ಟುವುದು, ಕನ್ಸಲ್ಟೆಂಟ್ ವೈದ್ಯರೂ ಗರಿಷ್ಠ 2 ಆಸ್ಪತ್ರೆಗೆ ಮಾತ್ರ ಭೇಟಿ ಪ್ರಮುಖವಾದುವು.

ಆಸ್ಪತ್ರೆಗಳಿಗೆ ಒಂದೇ ಪ್ರವೇಶದ್ವಾರ, ಎಲ್ಲ ರೋಗಿಗಳನ್ನು, ಜತೆಗಾರರನ್ನೂ ಥರ್ಮಲ್ ಸ್ಕಾೃನಿಂಗ್ ಮಾಡುವುದು, ಪ್ರವೇಶ ದ್ವಾರದ ಹೊರಗೆಯೇ ಫೀವರ್ ಕ್ಲಿನಿಕ್, ಬಂದ ರೋಗಿಗೆ ಕೋವಿಡ್ ಲಕ್ಷಣಗಳ ಚೆಕ್‌ಲಿಸ್ಟ್ ನೋಡಿ ತಪಾಸಣೆ ಮಾಡಿ ಅದರಲ್ಲಿ 4ಕ್ಕಿಂತ ಕಡಿಮೆ ಸ್ಕೋರ್ ಇದ್ದವರಿಗೆ ಮಾತ್ರ ಚಿಕಿತ್ಸೆಗೆ ಕಳುಹಿಸಲಾಗುತ್ತದೆ. ಅದಕ್ಕಿಂತ ಮೇಲಿನ ಸ್ಕೋರ್ ಹೊಂದಿದವರನ್ನು ಹಾಗೂ ಐಎಲ್‌ಐ(ಇನ್‌ಫ್ಲುಯೆಂಜಾ ಮಾದರಿ ಕಾಯಿಲೆ) ಹಾಗೂ ಎಸ್‌ಎಆರ್‌ಐ(ತೀವ್ರ ಉಸಿರಾಟದ ತೊಂದರೆ) ಇರುವವರನ್ನು ಒಪಿಡಿಯ ಒಂದು ಕಡೆಯಲ್ಲಿ ಕ್ವಾರಂಟೈನ್ ಮಾಡಬೇಕು ಎಂದು ಸೂಚಿಸಲಾಗಿದೆ.

ಕ್ಲಿನಿಕ್‌ಗಳಲ್ಲೂ ಚಿಕಿತ್ಸೆ ಡೌಟ್: ಸಾಮಾನ್ಯ ಚಿಕಿತ್ಸೆಗಳಿಗೆ ಸಾರ್ವಜನಿಕರು ನೆಚ್ಚಿಕೊಂಡಿರುವುದು ಕ್ಲಿನಿಕ್‌ಗಳನ್ನು. ಆ ವೈದ್ಯರೂ ರೋಗಿಗಳನ್ನು ಹತ್ತಿರ ಬಿಟ್ಟುಕೊಳ್ಳಲು ಮುಂದಾಗುತ್ತಿಲ್ಲ. ಬಂಟ್ವಾಳದಲ್ಲಿ ಖಾಸಗಿ ವೈದ್ಯರ ಮೇಲೆ ಕೇಸ್ ಹಾಕಿರುವುದು ಮತ್ತು ಸ್ವಯಂ ಸುರಕ್ಷತೆ ನಿಟ್ಟಿನಲ್ಲಿ ಹಲವು ಕ್ಲಿನಿಕ್‌ಗಳು ತೆರೆಯದೆ ತಿಂಗಳು ಕಳೆದಿದೆ. ಕೆಲವು ವೈದ್ಯರು ಕ್ಲಿನಿಕ್‌ನ ಬಾಗಿಲು ಹಾಕಿದ್ದು, ರೋಗ ಲಕ್ಷಣ ಕೇಳಿ ತಿಳಿದುಕೊಂಡು ಕಿಟಕಿಯಿಂದಲೇ ರೋಗಿಗಳಿಗೆ ಔಷಧ ಚೀಟಿ ಬರೆದುಕೊಡುತ್ತಿದ್ದಾರೆ.

ಆಸ್ಪತ್ರೆಗಿದೆ ರಕ್ಷಣೆ, ಹೆದರಿಕೆ ಬೇಡ

ಪ್ರಸ್ತುತ ಸರ್ಕಾರದ ಮಾರ್ಗದರ್ಶಿ ಸೂತ್ರಗಳನ್ನು ಸರಿಯಾಗಿ ಪಾಲಿಸಿದರೆ ಒಂದು ವೇಳೆ ಆಸ್ಪತ್ರೆಯಲ್ಲಿ ಕರೊನಾ ಪಾಸಿಟಿವ್ ಸಿಕ್ಕಿದರೂ 2 ದಿನ ಮಾತ್ರ ಆಸ್ಪತ್ರೆ ಮುಚ್ಚುತ್ತಾರೆ. ಆ ರೋಗಿಯ ಎಲ್ಲ ಪ್ರಥಮ, ದ್ವಿತೀಯ ಸಂಪರ್ಕ ಪತ್ತೆ ಬಳಿಕ ಆಸ್ಪತ್ರೆ ಕಾರ್ಯಾರಂಭಿಸಬಹುದು. ಆಸ್ಪತ್ರೆಗಳಿಗೆ ಸರ್ಕಾರದ ರಕ್ಷಣೆ ಇದೆ ಎಂದು ಅಸೋಸಿಯೇಶನ್ ಆಫ್ ಮೆಡಿಕಲ್ ಕನ್ಸಲ್ಟಂಟ್ಸ್ ಮಂಗಳೂರು ಚಾಪ್ಟರ್ ಅಧ್ಯಕ್ಷ ಡಾ.ಸಂದೀಪ್ ರೈ ಹೇಳುತ್ತಾರೆ. ನಾವು ಹೊಸ ಸವಾಲಿಗೆ ತೆರೆದುಕೊಳ್ಳಲೇಬೇಕು. ಆದಷ್ಟೂ ಆಸ್ಪತ್ರೆಗಳು ತಮ್ಮ ಒಟ್ಟು ಸಿಬ್ಬಂದಿಯ 3ನೇ 1 ಭಾಗವನ್ನಷ್ಟೇ ಒಮ್ಮೆ ಬಳಕೆ ಮಾಡಿಕೊಳ್ಳಬೇಕು. ಇನ್ನು ಒಂದು ತಿಂಗಳಲ್ಲಿ ಸರ್ಕಾರ ಟೆಸ್ಟ್ ಸೆಂಟರ್ ಸಂಖ್ಯೆ ಹೆಚ್ಚಿಸಲಿದೆ. ಕೆಲವು ತಿಂಗಳು ಕಳೆದರೆ ಎಲ್ಲ ಆಸ್ಪತ್ರೆಗಳಲ್ಲೂ ಎಚ್‌ಐವಿ ಟೆಸ್ಟ್‌ನಂತೆ ಕೋವಿಡ್ ಟೆಸ್ಟ್ ಸಾಮಾನ್ಯ ಪರಿಪಾಠವಾಗಲಿದೆ. ಫೀವರ್ ಕ್ಲಿನಿಕ್ ಎಲ್ಲ ಆಸ್ಪತ್ರೆಗಳಲ್ಲಿದೆ, ಅದನ್ನು ಸರಿಯಾಗಿ ಬಳಕೆ ಮಾಡಿಕೊಂಡು ಎಸ್‌ಎಆರ್‌ಐ/ಐಎಲ್‌ಐ ರೋಗಿಗಳನ್ನು ಪ್ರತ್ಯೇಕಿಸುವ ಕೆಲಸ ಆದರೆ ಆಸ್ಪತ್ರೆಗಳು ಕೋವಿಡ್‌ಗೆ ಹೆದರುವ ಅವಶ್ಯಕತೆಯೇ ಇಲ್ಲ ಎನ್ನುತ್ತಾರವರು.

ಟೆಸ್ಟಿಂಗ್ ಪ್ರಮಾಣ ಹೆಚ್ಚಿಸಿ ಈಗ ಆಗುತ್ತಿರುವ ಟೆಸ್ಟ್‌ನ ಪ್ರಮಾಣ ಕಡಿಮೆ ಇರುವುದರಿಂದ ನಮಗೆ ಕೋವಿಡ್ ಇರುವವರನ್ನು ಪತ್ತೆ ಮಾಡುವುದು ಕಷ್ಟ. ತ್ವರಿತವಾಗಿ ಟೆಸ್ಟಿಂಗ್ ಪ್ರಮಾಣ ಹೆಚ್ಚಾದರೆ ಆಸ್ಪತ್ರೆಗೆ ಬರುವವರ ಸ್ಯಾಂಪಲ್ ತೆಗೆದು ಕ್ವಾರಂಟೈನ್ ಮಾಡಿ, ವರದಿ ಬಂದ ಕೂಡಲೇ ಅವರ ಚಿಕಿತ್ಸೆ ಮುಂದುವರಿಸಬಹುದು ಎನ್ನುವುದು ಖಾಸಗಿ ಆಸ್ಪತ್ರೆಗಳ ಒತ್ತಾಯ. ಸದ್ಯದ ಮಟ್ಟಿಗೆ ಆಸ್ಪತ್ರೆಗಳು ತುರ್ತು ಸನ್ನಿವೇಶಗಳಲ್ಲಿ ರೋಗಿಗಳನ್ನು ಸೇರಿಸಿಕೊಳ್ಳುತ್ತಿವೆ. ಫೋನ್ ಮೂಲಕ ವೇಳೆ ಗೊತ್ತುಪಡಿಸಿಕೊಂಡು ಬರುವ ರೋಗಿಗಳನ್ನು ಮಾತ್ರವೇ ನೋಡುತ್ತಿವೆ. ಅದಕ್ಕೂ ಹಲವು ಮಾರ್ಗದರ್ಶಿ ಸೂತ್ರಗಳನ್ನು ಸಿದ್ಧಪಡಿಸಲಾಗಿದೆ.

ಸದ್ಯ ಹೊರರೋಗಿಗಳನ್ನು ತಪಾಸಣೆ ಮಾಡುವುದು, ಚಿಕಿತ್ಸೆ ನೀಡುವುದು ನಮಗೆ ಸವಾಲು. ಹಾಗಾಗಿ ಹೊರರೋಗಿ ವಿಭಾಗವನ್ನು ತೆರೆಯುವ ಬಗ್ಗೆ ಒಂದು ವಾರದಲ್ಲಿ ನಿರ್ಧರಿಸುತ್ತೇವೆ. ಸರ್ಕಾರ ಕೋವಿಡ್ ಟೆಸ್ಟ್ ಪ್ರಮಾಣ ಹೆಚ್ಚಿಸಬೇಕು. - ಡಾ.ಪ್ರಶಾಂತ್ ಮಾರ್ಲ, ಖಾಸಗಿ ಆಸ್ಪತ್ರೆಗಳ ಅಸೋಸಿಯೇಶನ್ ಸಮಿತಿ ಸದಸ್ಯ, ಮಂಗಳೂರು ನಮ್ಮಲ್ಲಿ ಪ್ರತಿ ದಿನ ನಾಲ್ಕು ವಿಭಾಗಗಳಿಗೆ ತಲಾ 20 ಹೊರರೋಗಿಗಳನ್ನಷ್ಟೇ ಅಪಾಯಿಂಟ್‌ಮೆಂಟ್ ಮೇಲೆ ಸಂದರ್ಶನಕ್ಕೆ ಅವಕಾಶವಿದೆ. ಮಾಸ್ಕ್ ಧರಿಸುವುದು ಕಡ್ಡಾಯ. ಪ್ರತಿಯೊಬ್ಬರನ್ನೂ ಫೀವರ್ ಕ್ಲಿನಿಕ್, ಫ್ಲೂ ಕ್ಲಿನಿಕ್ ಮೂಲಕ ತಪಾಸಣೆಗೊಳಪಡಿಸಿಯೇ ಮುಂದಿನ ಚಿಕಿತ್ಸೆ ನೀಡಲಾಗುತ್ತದೆ. ಸ್ವಲ್ಪ ಜ್ವರ ಲಕ್ಷಣ, ಸಂಶಯ ಇದ್ದರೂ ಫ್ಲೂ ಕ್ಲಿನಿಕ್‌ನಲ್ಲಿ ಅವರ ಸ್ಯಾಂಪಲ್ ತೆಗೆದು ಕಳುಹಿಸುತ್ತೇವೆ. - ರಾಕೇಶ್, ಸಾರ್ವಜನಿಕ ಸಂಪರ್ಕಾಧಿಕಾರಿ, ಕೆಎಂಸಿ ಅತ್ತಾವರ

ಉಡುಪಿಯಲ್ಲಿ ಒಪಿಡಿ ಸೇವೆ ಲಭ್ಯ

ಉಡುಪಿ: ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಹೊರ ಜಿಲ್ಲೆ ಮತ್ತು ರಾಜ್ಯದವರು ಹೆಚ್ಚಾಗಿ ಭೇಟಿ ನೀಡುತ್ತಿದ್ದ ಕಾರಣ 15 ದಿನ ಒಪಿಡಿ ಸೇವೆ ಸ್ಥಗಿತಗೊಂಡಿತ್ತು. ಪ್ರಸಕ್ತ ಉಡುಪಿ ಜಿಲ್ಲೆಯ ಎಲ್ಲ ಆಸ್ಪತ್ರೆಗಳಲ್ಲಿ ಒಪಿಡಿ ಸೇವೆ ಲಭ್ಯವಿದೆ.

ಎಲ್ಲ ಆಸ್ಪತ್ರೆಗಳಲ್ಲಿ ಫೀವರ್ ಕ್ಲಿನಿಕ್ ತೆರೆಯಲಾಗಿದೆ. ಜ್ವರಪೀಡಿತ ರೋಗಿಗಳಿಗೆ ಪ್ರತ್ಯೇಕ ತಪಾಸಣೆ ನಡೆಸಲಾಗುತ್ತಿದೆ. ಉಳಿದ ರೋಗಿಗಳನ್ನು ಮುಂಜಾಗ್ರತಾ ಕ್ರಮಗಳೊಂದಿಗೆ ತಪಾಸಣೆ ನಡೆಸಿ ಔಷಧ ನೀಡಲಾಗುತ್ತಿದೆ. ರೋಗಿಗಳ ಹೊರತು ಇತರರಿಗೆ ಆಸ್ಪತ್ರೆ ಪ್ರವೇಶ ಅವಕಾಶವಿಲ್ಲ. ಒಪಿಡಿ ವಿಭಾಗದಲ್ಲಿ ವೈದ್ಯರು ಅಗತ್ಯವಿದ್ದರೆ ಮಾತ್ರ ರೋಗಿ ಸನಿಹಕ್ಕೆ ಹೋಗುತ್ತಾರೆ. ವೈದ್ಯರು ಮಾಸ್ಕ್ , ಗ್ಲೌಸ್ ಸಹಿತ ಎಲ್ಲ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಂಡಿದ್ದಾರೆ ಎಂದು ಖಾಸಗಿ ಆಸ್ಪತ್ರೆ ಆಸೋಸಿಯೇಶನ್ ಸದಸ್ಯ ಜಿ. ಚಂದ್ರಶೇಖರ್ ಮಾಹಿತಿ ನೀಡಿದ್ದಾರೆ.

ಮಧ್ಯಾಹ್ನದವರೆಗೆ ಕ್ಲಿನಿಕ್: ಲಾಕ್‌ಡೌನ್ ಹಿನ್ನೆಲೆಯಲ್ಲಿ ಮಾರ್ಚ್ ಕೊನೆಯ ವಾರದಲ್ಲಿ ಕ್ಲಿನಿಕ್‌ಗಳು ಬಂದ್ ಆಗಿದ್ದವು. ನಂತರ ಸುರಕ್ಷತಾ ಕ್ರಮಗಳೊಂದಿಗೆ ವೈದ್ಯಕೀಯ ಸೇವೆ ನಡೆಯುತ್ತಿದೆ. ಜನಸಂಚಾರ ವಿರಳವಾಗಿರುವ ಕಾರಣ ಜಿಲ್ಲೆಯ ಹೆಚ್ಚಿನ ಕ್ಲಿನಿಕ್‌ಗಳು ಬೆಳಗ್ಗೆ 11 ಗಂಟೆ ನಂತರ ಮಧ್ಯಾಹ್ನವರೆಗೆ ಕಾರ್ಯನಿರ್ವಹಿಸುತ್ತಿವೆ. ಕ್ಲಿನಿಕ್‌ಗಳಿಗೆ ಬರುವ ಜ್ವರ ಮತ್ತು ತೀವ್ರ ಉಸಿರಾಟ ಸಮಸ್ಯೆ ರೋಗಿಗಳನ್ನು ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗುತ್ತಿದೆ ಎಂದು ಐಎಂಎ ಉಡುಪಿ-ಕರಾವಳಿ ಅಧ್ಯಕ್ಷ ಡಾ. ಉಮೇಶ್ ಪ್ರಭು ತಿಳಿಸಿದ್ದಾರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net