ಆಸ್ಪತ್ರೆ ಕಟ್ಟಡ ತೆರವಿಗೆ ಸೋಲಿಗರಿಂದ ಆಕ್ಷೇಪ

Oplus_0
Oplus_0
Published on

ಅರಣ್ಯ ಇಲಾಖೆ ಅಧಿಕಾರಿಗಳ ಕ್ರಮಕ್ಕೆ ಖಂಡನೆ

ವಿಜಯವಾಣಿ ಸುದ್ದಿಜಾಲ ಯಳಂದೂರು

ಯಳಂದೂರು ಬಿಳಿಗಿರಿರಂಗನಬೆಟ್ಟದಲ್ಲಿ ನೀಲಗಿರಿ ವೆಲ್‌ಫೇರ್ ಅಸೋಸಿಯೆಷನ್ ಮೂಲಕ ಸೋಲಿಗರ

ಸೇವೆಗಾಗಿ ಇದ್ದ ಆಸ್ಪತ್ರೆಯನ್ನು ಜೆಸಿಬಿ ಯಂತ್ರದ ಮೂಲಕ ಅರಣ್ಯ ಇಲಾಖೆ ಅಧಿಕಾರಿಗಳು ಧ್ವಂಸಗೊಳಿಸಿರುವ ಘಟನೆಯನ್ನು ಈ ಭಾಗದ ಗಿರಿಜನರು ಖಂಡಿಸಿದ್ದಾರೆ.

ಅರಣ್ಯ ಭೂಮಿ ಒತ್ತುವರಿಯಾಗಿದೆಂದು ಶನಿವಾರ ಅರಣ್ಯ ಇಲಾಖೆಯ ಸಿಬ್ಬಂದಿ ಧಾವಿಸಿ ಶನಿವಾರ ಮತ್ತು ಭಾನುವಾರ ಜೆಸಿಬಿ ಮೂಲಕ ಈ ಆಸ್ಪತ್ರೆ ಕಟ್ಟಡವನ್ನು ಒಡೆದು ಹಾಕಿದ್ದಾರೆ. 1975ರಲ್ಲಿ ಅಮೆರಿಕದ ನೀಲ್ ಆರ್ಮ್‌ಸ್ಟ್ರಾಂಗ್ ಎಂಬವರ ಪ್ರೇರಣೆಯಿಂದ ಆಸ್ಪತ್ರೆ ಸ್ಥಾಪಿಸಿ ಅದರ ನಿರ್ವಹಣೆಯನ್ನು

ತಮಿಳುನಾಡಿನ ಕೊತ್ತಗಿರಿ ಮೂಲದ ಆದಿವಾಸಿ ವೆಲ್‌ಫೇರ್ ಅಸೋಸಿಯೇಷನ್‌ಗೆ ವಹಿಸಿಕೊಡಲಾಗಿತ್ತು. ನೀಲ ಗಿರಿಯ ಆದಿವಾಸಿಗಳಾದ ತೋಡ, ಕುರುಬ, ಕಟುನಾಯಕ ಮುಂತಾದ ಸಮುದಾಯಗಳ ಆದಿವಾಸಿಗಳೇ ಸಂಸ್ಥೆ ನಡೆಸುತ್ತಿದ್ದರು. ಅರಣ್ಯ ಪ್ರದೇಶದಲ್ಲಿ ವಾಸವಾಗಿರುವ ಆದಿವಾಸಿ ಸೋಲಿಗರಿಗೆ ಈ ಆಸ್ಪತ್ರೆ ಕ್ಷೇಮ ಪಾಲನಾ ಕೇಂದ್ರವಾಗಿತ್ತು. 10 ಹಾಸಿಗೆ ಇರುವ ಈ ಆಸ್ಪತ್ರೆಯಲ್ಲಿ ಸಾಮಾನ್ಯ ಕಾಯಿಲೆಗಳಿಗೂ ತ್ವರಿತ ಚಿಕಿತ್ಸೆ ಲಭಿಸುತ್ತಿತ್ತು. ಆಸ್ಪತ್ರೆ ಸೇವೆಯನ್ನು ಪಡೆದು ಆನೇಕರು ಕಾಯಿಲೆಗಳಿಂದ ಗುಣವಾಗುತ್ತಿದ್ದರು.

*

ಜಂಟಿ ಸರ್ವೆ ಮಾಡಲಿಲ್ಲ:

ಅರಣ್ಯ ಇಲಾಖೆ ಜಂಟಿ ಸರ್ವೆ ಮಾಡದೆ (ಪಕ್ಕಾ ಪೋಡಿ ನಡೆಸದೇ) ಜಮೀನು ಒತ್ತುವರಿಯಾಗಿದೆ ಎಂದು ನೋಟಿಸ್ ನೀಡಿತ್ತು. ಸೋಲಿಗರಿಗಾಗಿ ಸೇವೆ ನೀಡುತ್ತಿದ್ದ ಆಸ್ಪತ್ರೆಯನ್ನು ಏಕಾಏಕಿ ಜೆಸಿಬಿ ಯಂತ್ರದ ಮೂಲಕ ದ್ವಂಸ ಮಾಡಿತು. ಎರಡು ಗುಂಟೆ ಜಮೀನಿನಲ್ಲಿ ನಿರ್ಮಾಣವಾಗಿದ್ದ ಆಸ್ಪತ್ರೆ ಕಟ್ಟಡ ಬಿಟ್ಟು ಉಳಿದ ಜಮೀನನ್ನು ಇಲಾಖೆ ವಶಕ್ಕೆ ಪಡೆದುಕೊಳ್ಳಬಹುದಾಗಿತ್ತು, ಆದರೆ ಹಾಗೆ ಮಾಡದೇ ಧ್ವಂಸ ಮಾಡಿದೆ ಎಂದು ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ಧಿ ಸಂಘದ ಕಾರ್ಯದರ್ಶಿ ಸಿ.ಮಾದೇಗೌಡ ದೂರಿದ್ದಾರೆ.

ಅರಣ್ಯ ಇಲಾಖೆ ಕ್ರಮವನ್ನು ವಿರೋಧಿಸುತ್ತೇವೆ. ಇಲಾಖೆ ಅಧಿಕಾರಿಗಳು ಬೇಡಗುಳಿಯಲ್ಲಿ 2000 ಎಕರೆ ಅರಣ್ಯ ಭೂಮಿ ಲೀಸ್ ನೀಡಿದ್ದು, ಅದನ್ನು ಏಕೆ ಬಿಡಿಸಿಕೊಳ್ಳುತ್ತಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ. ಸೋಲಿಗರ ಕುಟುಂಬಕ್ಕೆ ಸ್ವಾಸ್ಥೃ ಸೇವೆ ನೀಡುತ್ತಿದ್ದ ಆಸ್ಪತ್ರೆ ಧ್ವಂಸ ಮಾಡಿ ಸೋಲಿಗರ ಮೇಲೆ ದೌರ್ಜನ್ಯ ಮಾಡಲಾಗಿದೆ. ಆಸ್ಪತ್ರೆ ಮರು ನಿರ್ಮಾಣ ಮಾಡಿಕೊಡಬೇಕು. ಇಲ್ಲದಿದ್ದರೆ ಅರಣ್ಯ ಇಲಾಖೆ ಎದುರು ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳುತ್ತೇವೆ ಎಂದು ಮಾದೇಗೌಡ ಎಚ್ಚರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net