

ಅಥಣಿ: ಪಟ್ಟಣದ ಎಲ್ಲ ಖಾಸಗಿ ವೈದ್ಯರು ಸೇರಿ ಕೋವಿಡ್-19 ಆಸ್ಪತ್ರೆ ಆರಂಭಿಸಿರುವುದು ಸಂತಸದ ವಿಷಯ. ಅಥಣಿ ತಾಲೂಕಿನ ಜನತೆಗೆ ಆಸ್ಪತ್ರೆ ಸದುಪಯೋಗವಾಗಲಿ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ.
ಪಟ್ಟಣದ ವಿಜಯಪುರ-ಜೇವರ್ಗಿ ರಾಜ್ಯ ಹೆದ್ದಾರಿ ಪಕ್ಕದಲ್ಲಿ ಭಾನುವಾರ ಅಥಣಿ ಖಾಸಗಿ ವೈದ್ಯರು ಆರಂಭಿಸಿರುವ ಕೋವಿಡ್ ಆಸ್ಪತ್ರೆ ಉದ್ಘಾಟಿಸಿ ಮಾತನಾಡಿದ ಅವರು, ಹಲವು ತಿಂಗಳಿನಿಂದ ಕರೊನಾ ವೈರಸ್‌ನಿಂದ ಜನರು ಸಾವು-ನೋವು ಅನುಭವಿಸಿದ್ದಾರೆ. ಪಟ್ಟಣದ ಎಲ್ಲ ತಜ್ಞ ವೈದ್ಯರು ಸೇರಿ ದಿಟ್ಟ ನಿರ್ಧಾರ ಕೈಗೊಂಡು ಸಮಾಜಮುಖಿ ಸೇವೆಗೆ ಮುಂದಾಗಿರುವುದು ಹೆಮ್ಮೆಯ ಸಂಗತಿ. ಕೋವಿಡ್ ಆಸ್ಪತ್ರೆಗೆ ಸರ್ಕಾರದಿಂದ ಅಗತ್ಯ ಸಹಾಯ, ಸಹಕಾರ ನೀಡುವುದಾಗಿ ಅವರು ತಿಳಿಸಿದರು.
ಶಾಸಕ ಮಹೇಶ ಕುಮಠಳ್ಳಿ ಮಾತನಾಡಿ, ಬಾಡಿಗೆ ಕಟ್ಟಡದಲ್ಲಿ ಕೋವಿಡ್ ಆಸ್ಪತ್ರೆ ನಿರ್ಮಿಸಿ ರೋಗಿಗಳ ಸೇವೆಗೆ ಮುಂದಾಗಿರುವುದು ಶ್ಲಾಘನೀಯ ಎಂದರು.
ಡಾ.ಅವಿನಾಶ ನಾಯಿಕ, ಡಾ.ವಿಜಯಕುಮಾರ ಚೈನಿ ಮಾತನಾಡಿ, ಸರ್ಕಾರ ನಿಗದಿಪಡಿಸಿದ ದರದಲ್ಲೇ ಕೋವಿಡ್ ಚಿಕಿತ್ಸೆ ನೀಡಲಾಗುವುದು. ದಿನಕ್ಕೆ 5ಜನ ವೈದ್ಯರು ಸರದಿಯಲ್ಲಿ ಸೇವೆಗೆ ಲಭ್ಯವಿರುವರು. ಬೆಳಗ್ಗೆ, ಮಧ್ಯಾಹ್ನ ಮತ್ತು ರಾತ್ರಿ ವೇಳೆ ಕೂಡ ವೈದ್ಯರು ಇರುತ್ತಾರೆ. ಹೊರಗಿನಿಂದ 4 ವಿಶೇಷ ತಜ್ಞ ವೈದ್ಯರನ್ನು ನೇಮಿಸಿಕೊಳ್ಳಲಾಗಿದೆ. 25 ಆಕ್ಸಿಜನ್ ಬೆಡ್, 15 ಜನರಲ್ ಬೆಡ್ ಇವೆ. ಆಪರೇಷನ್ ಥಿಯೇಟರ್, ಔಷಧ ವ್ಯವಸ್ಥೆ ಕೂಡ ಇದೆ ಎಂದರು. ಡಾ.ರಾಮ ಕುಲಕರ್ಣಿ, ಡಾ.ಪ್ರಕಾಶ ಕುಮಠಳ್ಳಿ ಮಾತನಾಡಿ, ಆಸ್ಪತ್ರೆಯಲ್ಲಿ ಆಂಬುಲೆನ್ಸ್, 70ಕ್ಕೂ ಹೆಚ್ಚು ಸಿಸಿ ಕ್ಯಾಮರಾ ಅಳವಡಿಸಲಾಗಿದೆ ಎಂದು ತಿಳಿಸಿದರು. ಡಾ.ಸಚಿನ ಮಿರಜ, ಡಾ.ರಮೇಶ ಗುಳ್ಳ, ಡಾ.ಮಹೇಶ ಕಾಪಸಿ, ಡಾ.ಆನಂದ ಕುಲಕರ್ಣಿ, ಡಾ.ಶ್ರೀವತ್ಸ ಕುಲಕರ್ಣಿ, ಡಾ.ವಿಶ್ವನಾಥ ಕುಲಕರ್ಣಿ, ಡಾ.ಬಸವರಾಜ ಈರಳಿ, ಡಾ.ಅಮೃತ ಕುಲಕರ್ಣಿ, ಎಸ್.ವಿ.ಗಿರೀಶ, ಶಂಕರಗೌಡ ಬಸನಗೌಡರ ಇದ್ದರು.