ಶೀಘ್ರದಲ್ಲಿ ಮಂಕಿಯಲ್ಲಿ ಎಂಡೋಸಲ್ಫಾನ್‌ ಪೀಡಿತರ ಚಿಕಿತ್ಸೆಗೆ ಆಸ್ಪತ್ರೆ

endosalfan camp
Published on

ಭಟ್ಕಳ: ಎಂಡೋಸಲ್ಫಾನ್‌ ಪೀಡಿತರ ಅನುಕೂಲಕ್ಕಾಗಿ ಹೊನ್ನಾವರ ತಾಲೂಕಿನ ಮಂಕಿಯಲ್ಲಿ 100 ಹಾಸಿಗೆಯ ಸುಸಜ್ಜಿತ ಆಸ್ಪತ್ರೆಯ ನಿರ್ಮಾಣಕ್ಕೆ ಎಲ್ಲ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದ್ದು ಸದ್ಯದಲ್ಲೆ ನೂತನ ಆಸ್ಪತ್ರೆ ನಿರ್ಮಾಣಕ್ಕೆ ಚಾಲನೆ ದೊರೆಯಲಿದೆ ಎಂದು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್ ವೈದ್ಯ ಹೇಳಿದರು.
ಅವರು ಮಂಗಳವಾರ ಭಟ್ಕಳದ ಸರ್ಕಾರಿ ಆಸ್ಪತ್ರೆಯಲ್ಲಿ ಎಂಡೋಸಲ್ಫಾನ್‌ ಪೀಡಿತರಿಗೆ ಉಚಿತ ಆರೋಗ್ಯ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಈಗ ಎಂಡೋಸಲ್ಫಾನ್‌ ಪೀಡಿತರನ್ನು ಅವರ ಪಾಲಕರು ಪೋಷಿಸುತ್ತಿದ್ದಾರೆ. ಅವರಿಗೆ ಅನುಕೂಲವಾಗಬೇಕು ಎಂದು ಮಂಕಿಯಲ್ಲಿ ಸುಸಜ್ಜಿತ ಆಸ್ಪತ್ರೆಯ ನಿರ್ಮಾಣದ ನಿರ್ಣಯ ಕೈಗೊಂಡಿದ್ದೇವೆ. ಈಗಲೂ ಕೆಲವು ಎಂಡೋಸಲ್ಫಾನ್‌ ಪೀಡಿತರು ಸರ್ಕಾರದ ಸೌಲಭ್ಯದಿಂದ ವಂಚಿತರಾಗಿದ್ದಾರೆ. ನನ್ನ ರಾಜ್ಯದಲ್ಲಿ ಎಲ್ಲಿಯೂ ಯಾರು ಸರ್ಕಾರದ ಅನುಕೂಲಗಳಿಂದ ವಂಚಿತರಾಗಬಾರದು. ನಿಜವಾದ ಫಲಾನುಭವಿಗಳಿಗೆ ಸೌಲಭ್ಯ ದೊರೆಯಬೇಕು ಎನ್ನುವ ಹಿನ್ನಲೆಯಲ್ಲಿ ಅವರಿಗೆ ಮಾಶಾಸನವನ್ನು ಹೆಚ್ಚಿಸಲಾಗಿದೆ. ಜಿಲ್ಲೆಯ 1870 ಪೀಡಿತರಲ್ಲಿ ಭಟ್ಕಳದಲ್ಲೆ 770 ಪೀಡಿತರಿದ್ದಾರೆ, 1985ರಿಂದ ಬೆಳಕೆಯಲ್ಲಿ ಸತತವಾಗಿ 5 ವರ್ಷ ಎಂಡೋಸಲ್ಫಾನ್‌ ದ್ರಾವಣವನ್ನು ಸಿಂಪಡಿಸಲಾಗಿತ್ತು. ಎಂಡೋಸಲ್ಫಾನ್‌ ಪೀಡಿತರು ನಿಜವಾದ ಬಡವರು. ಅಂದು ನಾನು ಶಾಸಕನಾಗಿದ್ದಾಗಲೂ ಈ ಹಿನ್ನಲೆಯಲ್ಲಿ ಕೆಲವು ಸೌಲಭ್ಯವನ್ನು ಕಲ್ಪಿಸಿದ್ದೆ. ನಮ್ಮ ದುರಾದೃಷ್ಟ 9 ವರ್ಷದಿಂದ ಯಾವುದೆ ಬೆಳವಣಿಗೆ ಆಗಿಲ್ಲ. ಈಗ ಮತ್ತೆ ಜನರು ನನಗೆ ಅವಕಾಶ ನೀಡಿದ್ದು ಅವರ ಸಹಾಯಕ್ಕೆ ನಾನು ಕಟಿಬದ್ದನಾಗಿದ್ದೇನೆ ಎಂದರು. ಫಲಾನುಭವಿಯೊರ್ವರು ಸಭೆಯಲ್ಲಿ ಸಚಿವರ ಬಳಿ ಬಂದು ತಮ್ಮ ಅಳಲು ತೋಡಿಕೊಂಡು ಎಲ್ಲರಿಗೂ ಅನುಕೂಲವಾಗುವ ಹಾಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಸಂಪನ್ಮೂಲ ವ್ಯಕ್ತಿ ಡಾ. ಸತೀಶ ಶೇಟ್ ಮಾತನಾಡಿ ಎಂಡೋಸಲ್ಫಾನ್‌ ಕುರಿತ ಸಮಗ್ರ ಮಾಹಿತಿ ನೀಡಿದರು. ಯಾರು ಪರಿಹಾರಕ್ಕೆ ಅರ್ಹರು ಎನ್ನುವ ಕುರಿತು ತಿಳಿಸಿದರು. ಡಿಎಚ್‌ಒ ಡಾ. ನೀರಜ, ಟಿಎಚ್‌ಒ ಡಾ. ಸವಿತಾ ಕಾಮತ, ಬಿಇಒ ವಿ.ಡಿ. ಮೊಗೇರ, ತಹಸೀಲ್ದಾರ ತೀಪ್ಪೆಸ್ವಾಮಿ ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net