

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ನೆಲಮಂಗಲ ತಾಲೂಕು ಸೋಂಪುರ ಹೋಬಳಿಯ 3 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕಾಯಂ ವೈದ್ಯರ ಹುದ್ದೆ ಖಾಲಿ ಇದೆ. ಆದರೆ ಇದಕ್ಕೆ ಪರ್ಯಾಯವಾಗಿ ಅನ್ಯಪರ ಸೇವೆಯ ವೈದ್ಯರನ್ನು ನಿಯೋಜಿಸಲಾಗಿದೆ, ಸಾರ್ವಜನಿಕರ ಹಿತದೃಷ್ಟಿಯಿಂದ ವೈದ್ಯರು ಕರ್ತವ್ಯದಲ್ಲಿದ್ದು ಹೊರರೋಗಿಗಳ ಸೇವೆಗೆ ಯಾವುದೇ ತೊಂದರೆಯಾಗಿಲ್ಲ ಎಂದು ಜಿಲ್ಲಾ ಆರೋಗ್ಯ ಇಲಾಖೆ ತಿಳಿಸಿದೆ.
ಹೋಬಳಿಯ 5 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮೂರು ಆರೋಗ್ಯ ಕೇಂದ್ರಗಳಲ್ಲಿ ಕಾಯಂ ವೈದ್ಯರಿಲ್ಲದೆ ಗ್ರಾಮೀಣ ಜನರಿಗೆ ಸಮರ್ಪಕವಾಗಿ ಆರೋಗ್ಯ ಸೇವೆ ಸಿಗುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಗಡಿ ಅಂಚಿನ ಗ್ರಾಮಗಳಿದ್ದು ತುರ್ತು ಪರಿಸ್ಥಿತಿಯಲ್ಲಿ ಸಮರ್ಪಕವಾಗಿ ಆರೋಗ್ಯ ಸೇವೆ ಸಿಗಬೇಕು ಈ ಕಾರಣಕ್ಕೆ ಕಾಯಂ ವೈದ್ಯರಿದ್ದರೆ ಒಳಿತು ಎಂಬುದು ಈ ಭಾಗದ ಜನರ ಒತ್ತಾಯವಾಗಿದೆ. ಆದರೆ ಇವೆಲ್ಲ ಆರೋಗ್ಯ ಕೇಂದ್ರಗಳಲ್ಲಿ ಪರ್ಯಾಯ ವ್ಯವಸ್ಥೆ ಇದ್ದು ವೈದ್ಯಕೀಯ ಸೇವೆಗೆ ಯಾವುದೇ ತೊಂದರೆಯಾಗಿಲ್ಲ. ಸರ್ಕಾರವೇ ನಿಯೋಜಿಸಿದಂತೆ ವೈದ್ಯರು ಸೇವೆ ಸಲ್ಲಿಸುತ್ತಿದ್ದಾರೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಎಲೆಕ್ಯಾತನಹಳ್ಳಿಯಲ್ಲಿ ಸಮಸ್ಯೆ: ದಾಬಸ್‌ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಡಾ.ರಮೇಶ್ ಹಾಗೂ ಅನ್ಯಪರ ಸೇವೆಯಲ್ಲಿ ಡಾ.ಸತೀಶ್ ಅವರು ಹೊರರೋಗಿ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅದೇ ರೀತಿ ನರಸೀಪುರ ಆರೋಗ್ಯ ಕೇಂದ್ರದಲ್ಲಿ ಡಾ.ಲಾವಣ್ಯಾ ಹೊರರೋಗಿ ಸೇವೆಯಲ್ಲಿ ನಿರತರಾಗಿದ್ದಾರೆ. ಎಲೆಕ್ಯಾತನಹಳ್ಳಿಯಲ್ಲಿ ವಾರದಲ್ಲಿ 3 ದಿನದಂತೆ ಮಣ್ಣೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ರವೀಂದ್ರ ಅವರನ್ನು ಸೇವೆಗೆ ನಿಯೋಜಿಸಲಾಗಿದೆ ಶೀಘ್ರದಲ್ಲೇ ಪೂರ್ಣಾವಧಿ ವೈದ್ಯರ ನಿಯೋಜನೆಗೆ ಕ್ರಮಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಕೈಗಾರಿಕಾ ವಲಯಕ್ಕೆ ಆದ್ಯತೆ: ದಾಬಸ್‌ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರವಿರುವ ಸೋಂಪುರ ದೊಡ್ಡಮಟ್ಟದ ಕೈಗಾರಿಕಾ ವಲಯವಾಗಿದ್ದು, ರಾಷ್ಟಿಯ ಹೆದ್ದಾರಿ ಹಾಗೂ ರಾಜ್ಯ ಹೆದ್ದಾರಿ ಈ ಭಾಗದಲ್ಲಿ ಹಾದುಹೋಗುತ್ತದೆ. ಇದು ಪ್ರಮುಖವಾಗಿ ಅಪಘಾತವಲಯವಾಗಿ ಗುರುತಿಸಿಕೊಂಡಿರುವುದರಿಂದ ಈ ಭಾಗದಲ್ಲಿ ವೈದ್ಯಕೀಯ ಸೇವೆಗೆ ಒತ್ತು ನೀಡಲಾಗಿದೆ. ಆಗಾಗ ಅನಿರೀಕ್ಷಿತ ಭೇಟಿ ನೀಡಿ ಈ ಭಾಗದಲ್ಲಿನ ವೈದ್ಯಕೀಯ ಸೇವೆ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿರುತ್ತದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ದಾಬಸ್‌ಪೇಟೆ, ನರಸೀಪುರ ಹಾಗೂ ಎಲೆಕ್ಯಾತನಹಳ್ಳಿ ಆರೋಗ್ಯ ಕೇಂದ್ರಗಳಲ್ಲಿ ಕಾಯಂ ವೈದ್ಯರ ಹುದ್ದೆ ಖಾಲಿ ಇದ್ದರೂ ಪರ್ಯಾಯವಾಗಿ ಅನ್ಯಪರ ಸೇವೆಯಡಿ ವೈದ್ಯರನ್ನು ನಿಯೋಜಿಸಿದ್ದು ಹೊರರೋಗಿಗಳ ಚಿಕಿತ್ಸೆಗೆ ಯಾವುದೇ ತೊಂದರೆ ಇಲ್ಲದಂತೆ ಕ್ರಮಕೈಗೊಳ್ಳಲಾಗಿದೆ. ಈ ಮೂರು ಆರೋಗ್ಯ ಕೇಂದ್ರಗಳಲ್ಲೂ ವೈದ್ಯಕೀಯ ಸೇವೆ ಉತ್ತಮವಾಗಿದೆ. ಆರೋಗ್ಯ ಕೇಂದ್ರಗಳತ್ತ ಹೆಚ್ಚು ಗಮನ ನೀಡಲಾಗಿದೆ.
ಡಾ.ಸುನೀಲ್‌ಕುಮಾರ್, ಜಿಲ್ಲಾ ಅರೋಗ್ಯಾಧಿಕಾರಿ