

ಮೈಸೂರು: ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಹೋಲ್ಡ್ಸ್‌ವರ್ತ್ ಸ್ಮಾರಕ (ಮಿಷನ್) ಆಸ್ಪತ್ರೆ ಸಿಬ್ಬಂದಿ ಶುಕ್ರವಾರ ಧರಣಿ ನಡೆಸಿದರು.
ಎಐಟಿಯುಸಿ ನೇತೃತ್ವದಲ್ಲಿ ಆಸ್ಪತ್ರೆ ಮುಂಭಾಗ ಧರಣಿ ನಡೆಸಿದ ಕಾರ್ಮಿಕರು, ಬೇಡಿಕೆ ಈಡೇರಿಸುವಂತೆ ಆಸ್ಪತ್ರೆ ಆಡಳಿತ ಮಂಡಳಿಯನ್ನು ಒತ್ತಾಯಿಸಿದರು.
ಆಸ್ಪತ್ರೆಯ ಕಾರ್ಮಿಕರಿಗೆ ಕಳೆದ ಮೂರು ತಿಂಗಳಿನಿಂದ ವೇತನ ನೀಡಿಲ್ಲ. ಏಳು ವರ್ಷಗಳಿಂದ ವೇತನ ಪರಿಷ್ಕರಣೆ ಯಾಗುವುದಿಲ್ಲ. ಈ ಬಗ್ಗೆ ಮನವಿ ಮಾಡಿದರೆ ಆಡಳಿತ ಮಂಡಳಿ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ದೂರಿದರು.
ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದಾಗ ವೇತನ ನೀಡುವ ಜತೆಗೆ ಪರಿಷ್ಕರಣೆ ಮಾಡುವುದಾಗಿ ಆಡಳಿತ ಮಂಡಳಿ ನೀಡಿದ್ದ ಭರವಸೆ ಹುಸಿಯಾಗಿದೆ. ಆದ್ದರಿಂದ ತಕ್ಷಣ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದರು.
ಎಐಟಿಯುಸಿ ರಾಷ್ಟ್ರೀಯ ಉಪಾಧ್ಯಕ್ಷ ಎಚ್.ಆರ್.ಶೇಷಾದ್ರಿ, ರಾಜ್ಯ ಕಾರ್ಯದರ್ಶಿ ಎಚ್.ವಿ.ರಾಮಕೃಷ್ಣ, ಜಿಲ್ಲಾಧ್ಯಕ್ಷ ಎನ್.ಕೆ.ದೇವದಾಸ್, ಕಾರ್ಯದರ್ಶಿ ಕೆ.ಜಿ.ಸೋಮರಾಜೇ ಅರಸ್, ಉಪಾಧ್ಯಕ್ಷರಾದ ಜಗನ್ನಾಥ್, ಬಸವರಾಜು, ಮುಖಂಡರಾದ ಶಿವಣ್ಣ, ಸೂರ್ಯ ಇತರರು ಇದ್ದರು.