

ಮಡಿಕೇರಿ:
ಜಿಲ್ಲಾಸ್ಪತ್ರೆಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಮಡಿಕೇರಿಯ 'ದೊಡ್ಡಾಸ್ಪತ್ರೆ', ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ಮಡಿಕೇರಿಯಲ್ಲಿ ಆರಂಭವಾದ ನಂತರ ಬೋಧಕ ಆಸ್ಪತ್ರೆ ಆಗಿ ಬದಲಾಗಿದೆ. ಈ ಬದಲಾವಣೆಯಿಂದ ಜಿಲ್ಲೆಯ ಜನಸಾಮಾನ್ಯರಿಗೆ ಸ್ಥಳೀಯವಾಗಿ ಉನ್ನತ ಮಟ್ಟದ ವೈದ್ಯಕೀಯ ಸೇವೆ ಸಿಗುವ ನಿರೀಕ್ಷೆ ಇತ್ತು. ಆದರೆ ಕೊಡಗಿನಲ್ಲಿ ಮೆಡಿಕಲ್ ಕಾಲೇಜು ಶುರುವಾಗಿ ದಶಕ ಕಳೆದರೂ ಈ ನಿರೀಕ್ಷೆ ನಿರೀಕ್ಷೆಯಾಗಿಯೇ ಉಳಿದಿದೆ.
ಜಿಲ್ಲೆಗೆ ಮೊದಲಿನಿಂದಲೂ ಕಾಡುತ್ತಿರುವ ತಜ್ಞ ವೈದ್ಯರ ಕೊರತೆ ಈಗಲೂ ಮುಂದುವರಿದಿದೆ.
ಮಡಿಕೇರಿಯ ಜಿಲ್ಲಾಸ್ಪತ್ರೆ ಕೊಡಗು ವೈದ್ಯಕೀಯ ವಿದ್ಯಾಲಯದ ಬೋಧಕ ಆಸ್ಪತ್ರೆ ಆದ ನಂತರ ಇಲ್ಲಿ ಉತ್ತಮ ಗುಣಮಟ್ಟದ ಮೂಲಭೂತ ಸೌಲಭ್ಯಗಳು ಬಂದಿವೆ. ಕಳೆದ ವರ್ಷ ಎಂಆರ್‌ಐ ಸ್ಕಾö್ಯನಿಂಗ್ ಘಟಕವೂ ಇಲ್ಲಿ ಶುರುವಾಗಿದೆ. ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿನ ವ್ಯವಸ್ಥೆ ಬಗ್ಗೆ ಜನಸಾಮಾನ್ಯರಲ್ಲಿ ಒಳ್ಳೆಯ ಅಭಿಪ್ರಾಯ ಇದೆ. ಹಾಗಾಗಿ ಇಲ್ಲಿಗೆ ಕೊಡಗು ಮಾತ್ರವಲ್ಲದೆ ಪಕ್ಕದ ಹಾಸನ, ಮೈಸೂರು ಜಿಲ್ಲೆಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಬರುತ್ತಾರೆ. ಆದರೆ ತಜ್ಞ ವೈದ್ಯರು ಇಲ್ಲದ ಕಾರಣ ಸೂಕ್ತ ವೈದ್ಯಕೀಯ ತಪಾಸಣೆ, ಸಲಹೆ ಹಾಗೂ ಚಿಕಿತ್ಸೆ ಇಲ್ಲಿ ಲಭ್ಯವಾಗುತ್ತಿಲ್ಲ.
ತುರ್ತು ಪರಿಸ್ಥಿತಿ ಸಂದರ್ಭ ಈ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು, ಮೈಸೂರು ಅಥವಾ ಬೆಂಗಳೂರಿಗೆ ಕಳುಹಿಸಲಾಗುತ್ತಿದೆ. ಅಗತ್ಯ ಸೌಲಭ್ಯಗಳು ಇದ್ದರೂ ತಜ್ಞ ವೈದ್ಯರು ಇಲ್ಲದ ಕಾರಣ ಹೆಚ್ಚುವರಿ ಚಿಕಿತ್ಸೆ ನೀಡಲಾಗದ ಅಸಹಾಯಕ ಸ್ಥಿತಿ ಇಲ್ಲಿನ ಸಿಬ್ಬಂದಿಯದ್ದು. ಸ್ಥಳೀಯವಾಗಿಯೇ ತಜ್ಞ ವೈದ್ಯರ ಸೇವೆ ಲಭ್ಯವಾದರೆ ಸಾಕಷ್ಟು ಜನರ ಪ್ರಾಣ ಉಳಿಸುವ ವ್ಯವಸ್ಥೆ ಈ ಆಸ್ಪತ್ರೆಯಲ್ಲಿದ್ದರೂ ಪ್ರಯೋಜನ ಆಗುತ್ತಿಲ್ಲ.
ಇದರ ಜತೆಗೆ ಇಲ್ಲಿ ವೈದ್ಯಕೀಯ ಚೀಟಿ ಮಾಡುವಲ್ಲಿನ ಅವ್ಯವಸ್ಥೆ ಬಗ್ಗೆ ಸಾಕಷ್ಟು ದೂರುಗಳು ಇದೆ. ಒಮ್ಮೆ ಚೀಟಿ ಮಾಡಿಸಿದ ನಂತರ ಚಿಕಿತ್ಸೆಗೆ ಯಾವ ಕೊಠಡಿ, ಯಾರ ಬಳಿ ಹೋಗಬೇಕು ಎಂದು ಮಾರ್ಗದರ್ಶನ ಮಾಡುವವರು ಕೂಡ ಇಲ್ಲಿಲ್ಲ. ವೈದ್ಯರ ಕೊಠಡಿಯಲ್ಲಿ ತುಂಬಿಕೊAಡಿರುವ ವೈದ್ಯಕೀಯ ಕಾಲೇಜಿನ ವೈದ್ಯ ವಿದ್ಯಾರ್ಥಿಗಳ ಎದುರು ಪ್ರಯೋಗಪಶುಗಳಾಗುವ ಅನಿವಾರ್ಯತೆಯೂ ರೋಗಿಗಳದ್ದಾಗಿದೆ. ಈ ಎಲ್ಲಾ ವಿಷಯಗಳ ಬಗ್ಗೆ ವಿಜಯವಾಣಿ ಓದುಗರು ಲೌಡ್‌ಸ್ಪೀಕರ್‌ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊAಡಿದ್ದಾರೆ.
ಮಡಿಕೇರಿ ಜಿಲ್ಲಾಸ್ಪತ್ರೆಗೆ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅವಶ್ಯಕತೆಯಿರುವಷ್ಟು ತಜ್ಞ ವೈದ್ಯರ ಕೊರತೆಯಿದೆ. ಪ್ರತಿಯೊಂದಕ್ಕೂ ಸರದಿ ಸಾಲಿನಲ್ಲಿ ಹೆಚ್ಚಿನ ಸಮಯ ನಿಲ್ಲಬೇಕು. ತಾಲೂಕಿನ ಎಲ್ಲಾ ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರು ಇಲ್ಲದ ಕಾರಣ, ರೋಗಿಗಳು ಮಡಿಕೇರಿ ಆಸ್ಪತ್ರೆಯನ್ನು ಅವಲಂಭಿಸಿದ್ದಾರೆ. ಸರ್ಕಾರ ಕೂಡಲೇ ತಜ್ಞ ವೈದ್ಯರನ್ನು ನೇಮಿಸಬೇಕು.
ಚಂದ್ರಿಕಾ, ಗೃಹಿಣಿ, ಕಿರಗಂದೂರು ಗ್ರಾಮ
ಮಡಿಕೇರಿ ಜಿಲ್ಲಾಸ್ಪತ್ರೆ ಉತ್ತಮ ಕಟ್ಟಡ ಹೊಂದಿದೆ. ಅದರಲ್ಲೂ ಮಹಿಳೆ ಮತ್ತು ಮಕ್ಕಳ ವಾರ್ಡ್ನಲ್ಲಿ ಎಲ್ಲಾ ಸೌಲಭ್ಯಗಳು ಚೆನ್ನಾಗಿದೆ. ಇತರ ವಾರ್ಡ್ಗಳಲ್ಲಿ ಸ್ವಚ್ಚತೆಗೆ ಅದ್ಯತೆ ನೀಡಬೇಕಿದೆ. ಕೆಲವೊಂದು ತಜ್ಞರ ಹುದ್ದೆಗಳು ಖಾಲಿಯಿರುವುದರಿಂದ ರೋಗಿಗಳು ನಗರದ ಪ್ರದೇಶದ ಆಸ್ಪತ್ರೆಗಳಿಗೆ ತೆರಳಬೇಕಿದೆ. ಸೌಲಭ್ಯಕ್ಕೆ ತಕ್ಕಂತೆ ವೈದ್ಯರು ಇರಲೇಬೇಕು.
ಕೆ.ಪಿ. ದಿನೇಶ್, ಮಾಜಿ ಸದಸ್ಯ, ಐಗೂರು ಗ್ರಾಮ ಪಂಚಾಯಿತಿ
ಕೊಡಗು ವೈದ್ಯಕೀಯ ವಿದ್ಯಾಲಯದ ಮಡಿಕೇರಿ ಬೋಧಕ ಆಸ್ಪತ್ರೆಯಲ್ಲಿ ತಜ್ಞ ವೈದ್ಯರ ಕೊರತೆ ಹಿಂದಿನಿAದಲೂ ಇದೆ. ಈ ಸಂಬAಧ ಹಲವು ಸಂಘಟನೆಗಳು ಹೋರಾಟ ಮಾಡಿಕೊಂಡು ಬಂದಿದ್ದರೂ ಪ್ರಯೋಜನ ಆಗಿಲ್ಲ. ತೀವ್ರ ಅನಾರೋಗ್ಯ ಸಮಸ್ಯೆಗಳಿಗೆ ಈಗಲೂ ಮಂಗಳೂರು, ಹಾಸನ ಅಥವಾ ಮೈಸೂರು ಸೇರಿ ದೂರದ ಸ್ಥಳಕ್ಕೆ ಹೋಗುವ ಅನಿವಾರ್ಯತೆ ಇದೆ. ಇದು ತಪ್ಪಬೇಕಾದರೆ ಮಡಿಕೇರಿಯಲ್ಲಿ ತಜ್ಞ ವೈದ್ಯರ ನೇಮಕ ಆಗಬೇಕು.
ಸಿ.ಸಿ. ಲೋಕೇಶ್ ಶನಿವಾರಸಂತೆ, ಕೊಡಗು ಜಿಲ್ಲಾ ಸಂಚಾಲಕ, ಡಿಎಸ್‌ಎಸ್ ಪರಿವರ್ತನಾ ವಾದ
ಕೊಡಗು ಜಿಲ್ಲೆಯ ಕೇಂದ್ರ ಮಡಿಕೇರಿಯಲ್ಲಿ ಜಿಲ್ಲಾಸ್ಪತ್ರೆ ಸುಸಜ್ಜಿತ ಕಟ್ಟಡದೊಂದಿಗೆ ಸಕಲ ಸೌಕರ್ಯಗಳನ್ನು ಹೊಂದಿದ್ದು ಎಲ್ಲಾ ಮೂಲಭೂತ ಸೌಕರ್ಯಗಳು ಇವೆ. ಆದರೆ ಇಲ್ಲಿ ಮುಖ್ಯವಾದ ಕೊರತೆಯೇ ತಜ್ಞ ವೈದ್ಯರು. ಯಾವುದೇ ತುರ್ತು ಸಂದರ್ಭಗಳು ಒದಗಿದಾಗ ಪ್ರಥಮ ಚಿಕಿತ್ಸೆ ಮಾತ್ರ ಇಲ್ಲಿ ದೊರಕುತ್ತದೆ. ಹೆಚ್ಚಿನ ಚಿಕಿತ್ಸೆಗಾಗಿ ದೂರದ ಮಂಗಳೂರು, ಮೈಸೂರಿಗೆ ಶಿಫಾರಸು ಪಡೆಯಬೇಕಾಗುತ್ತದೆ. ಸರ್ಕಾರ ಹಾಗೂ ಜನಪ್ರತಿನಿಧಿಗಳು ಈ ಬಗ್ಗೆ ಒತ್ತು ನೀಡಿ ಸಾರ್ವಜನಿಕರ ಹಿತಾಸಕ್ತಿಯಿಂದ ಎಲ್ಲಾ ವಿಭಾಗದಲ್ಲೂ ತಜ್ಞ ವೈದ್ಯರ ನೇಮಕ ಮಾಡುವುದು ಒಳ್ಳೆಯದು.
ಕೇಕಡ ಪೂಜಾ ನಾಗೇಂದ್ರ, ಕೊಟ್ಟೂರು, ಚೇರಂಬಾಣೆ
ಮಡಿಕೇರಿಯ ಜಿಲ್ಲಾ ಆಸ್ಪತ್ರೆ ಕೊಡಗು ವೈದ್ಯಕೀಯ ವಿದ್ಯಾಲಯದ ಬೋಧಕ ಆಸ್ಪತ್ರೆ ಆಗಿದ್ದರೂ ಇಲ್ಲಿ ಎಲ್ಲಾ ವಿಭಾಗಗಳಲ್ಲಿ ತಜ್ಞ ವೈದ್ಯರು ಇಲ್ಲ. ಹಾಗಾಗಿ ಈ ಆಸ್ಪತ್ರೆಯಿಂದ ಜಿಲ್ಲೆಯ ರೋಗಿಗಳಿಗೆ ಹೆಚ್ಚಿನ ಪ್ರಯೋಜನ ಆಗುತ್ತಿಲ್ಲ. ಜಿಲ್ಲೆಯ ರೋಗಿಗಳು ಅನಿವಾರ್ಯವಾಗಿ ಹೊರ ಜಿಲ್ಲೆಗಳ ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚಿನ ಹಣ ನೀಡಿ ಚಿಕಿತ್ಸೆ ಪಡೆಯುವ ಪರಿಸ್ಥಿತಿ ಇದೆ. ಈ ಸಮಸ್ಯೆಯಿಂದ ತಾಲೂಕು ಆಸ್ಪತ್ರೆಯೇನು ಹೊರತಾಗಿಲ್ಲ.
ಬಿ.ಎನ್. ಅರುಣ್ ಕುಮಾರ್, ವಿದ್ಯಾರ್ಥಿ, ವಿರಾಜಪೇಟೆ
ಇದು ಕೊಡಗು ವೈದ್ಯಕೀಯ ವಿದ್ಯಾಲಯದ ಬೋಧಕ ಆಸ್ಪತ್ರೆ ಆಗಿದ್ದು, ವೈದ್ಯ ವಿದ್ಯಾರ್ಥಿಗಳು ಹೆಚ್ಚಾಗಿ ರೋಗಿಗಳ ಶುಶ್ರೂಷೆ ಮಾಡುತ್ತಾರೆ ಎಂದು ಜನವಲಯದಲ್ಲಿ ಕೇಳಿಬರುವ ಮಾತಾಗಿದೆ. ಮಡಿಕೇರಿಗೆ ಕೆಲವು ವೈದ್ಯರು ಬರಲು ಮತ್ತು ಇಲ್ಲೇ ಇರಲು ಒಪ್ಪದೇ ಇರುವುದು ಕೂಡಾ ತಜ್ಞ ವೈದ್ಯರ ಕೊರತೆಗೆ ಕಾರಣ ಇರಬಹುದು. ಈ ಸಮಸ್ಯೆಗೆ ಪರಿಹಾರ ಕಂಡು ಹುಡುಕಬೇಕಿದೆ.
ಗೀತಾ ಗಿರೀಶ್, ಆರ್ಥಿಕ ಸಲಹೆಗಾರರು, ಮಡಿಕೇರಿ
ಮಡಿಕೇರಿಯ ಜಿಲ್ಲಾ ಆಸ್ಪತ್ರೆ ವೈದ್ಯಕೀಯ ಕಾಲೇಜು ಬೋಧಕ ಆಸ್ಪತ್ರೆಯಲ್ಲಿ ತಜ್ಞ ವೈದ್ಯರ ಕೊರತೆ ಮಾತ್ರವಲ್ಲ ಇನ್ನೂ ಅನೇಕ ಸಮಸ್ಯೆಗಳು ಇವೆ. ಅನುಕೂಲದ ಜತೆ ಅನಾನುಕೂಲವೂ ವೈದ್ಯಕೀಯ ತಪಾಸಣೆಗಾಗಿ ಬರುವ ಜನಸಾಮಾನ್ಯರಿಗೆ ಆಗುತ್ತಿರುವುದು ಸುಳ್ಳಲ್ಲ. ಅಲ್ಲಿನ ಕೆಲವು ಸಿಬ್ಬಂದಿ ಅನುಚಿತ ವರ್ತನೆಯಿಂದ ರೋಗಿಗಳನ್ನು ಕರೆತರುವ ಸಂಬAಧಿಗಳಿಗೆ ಮುಜುಗರ ಉಂಟಾಗುತ್ತಿದೆ ಎಂಬ ಆರೋಪ ಕೂಡ ಕೇಳಿ ಬರುತ್ತಿದೆ. ವೈದ್ಯಕೀಯ ಕಾಲೇಜಿನ ವೈದ್ಯ ವಿದ್ಯಾರ್ಥಿಗಳ ಕಲಿಕೆಗಾಗಿ ರೋಗಿಗಳು ಹೈರಾಣ ಆಗುವುದೂ ಸಾಮಾನ್ಯ.
ಉಮೇಶ್ ಕುಮಾರ್, ಮಡಿಕೇರಿ ನಿವಾಸಿ
ಕೊಡಗು ಜಿಲ್ಲೆಯ ಬೋಧಕ ಆಸ್ಪತ್ರೆಗೆ ಇನ್ನಷ್ಟು ನುರಿತ ವೈದ್ಯರನ್ನು ನೇಮಿಸಬೇಕಿದೆ. ಇದೀಗ ಇಂದಿಗೂ ಸಹ ಅನೇಕ ಅರೋಗ್ಯ ಸಮಸ್ಯೆಗಳಿಗೆ ಜಿಲ್ಲೆಯಲ್ಲಿ ಪರಿಹಾರ ಸಿಗುತ್ತಿಲ್ಲ. ಹೊರ ಜಿಲ್ಲೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆ ಕಟ್ಟಡ ಉನ್ನತೀಕರಿಸಿದ್ದಾರೆ. ಇದು ಒಳ್ಳೆಯ ಬೆಳವಣಿಗೆ. ಆದರೆ ಇನ್ನಷ್ಟು ನುರಿತ ವೈದ್ಯರನ್ನು ನೇಮಿಸಲಿ.
ಗೀತಾ ರಮಾನಂದ್, ವ್ಯವಸ್ಥಾಪಕರು, ಮೈಸ್ ಕಂಪ್ಯೂಟರ್ ಶಿಕ್ಷಣ ಸಂಸ್ಥೆ, ಶನಿವಾರಸಂತೆ
ಮಡಿಕೇರಿ ಜಿಲ್ಲಾಸ್ಪತ್ರೆ ವೈದ್ಯಕೀಯ ವಿದ್ಯಾಲಯದ ಬೋಧಕ ಆಸ್ಪತ್ರೆ ಆದನಂತರ ಮಲ್ಟಿಸ್ಪೆಷಾಲಿಟಿ ಸೌಲಭ್ಯಗಳು ಬಂದಿದೆ ಎಂದು ಹೇಳಲಾಗುತ್ತಿದೆ. ಆದರೆ ಇದ್ಯಾವುದೂ ಜನಸಾಮಾನ್ಯರಿಗೆ ಸಿಗುತ್ತಿರುವಂತೆ ಕಾಣುತ್ತಿಲ್ಲ. ಚೀಟಿ ಮಾಡಿಸುವಲ್ಲಿಂದಲೇ ಸಮಸ್ಯೆಗಳು ಶುರುವಾಗುತ್ತದೆ. ಇಲ್ಲಿ ಯಾವುದಕ್ಕೂ ಯಾರೂ ಸರಿಯಾಗಿ ಮಾರ್ಗದರ್ಶನ ಮಾಡುವವರೇ ಇಲ್ಲ. ತಜ್ಞ ವೈದ್ಯರು ಇಲ್ಲದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ದೂರದ ಊರುಗಳÀ ಆಸ್ಪತ್ರೆಗೆ ಕಳುಹಿಸಲಾಗುತ್ತಿದೆ. ತಜ್ಞ ವೈದ್ಯರನ್ನು ಇಲ್ಲಿಗೇ ಕರೆಯಿಸಿಕೊಳ್ಳುವ ವ್ಯವಸ್ಥೆ ಆಗಬೇಕು.
ರವಿ ಗೌಡ, ಅಧ್ಯಕ್ಷ, ಕರ್ನಾಟಕ ರಕ್ಷಣಾ ವೇದಿಕೆ
ಜಿಲ್ಲಾಸ್ಪತ್ರೆಯಲ್ಲಿ ತಜ್ಞ ವೈದ್ಯರ ಸಮಸ್ಯೆ ಇರುವುದು ನಮ್ಮ ಗಮನಕ್ಕೆ ಬಂದಿದೆ. ತಜ್ಞರ ನೇಮಕಾತಿಗಾಗಿ ಸತತ ಪ್ರಯತ್ನ ನಡೆದಿದೆ. ನೇಮಕವಾದ ತಜ್ಞರು ಜಿಲ್ಲೆಗೆ ಆಗಮಿಸುತ್ತಿಲ್ಲ. ಬಂದರೂ ತುಂಬಾ ದಿನ ಇರುವುದಿಲ್ಲ ಎನ್ನುವ ದೂರುಗಳೂ ಇದೆ. ಈ ಬಗ್ಗೆಯೂ ಗಮನಹರಿಸಲಾಗುತ್ತಿದೆ. ಈಗಾಗಲೇ ಎಂಆರ್‌ಐ ಸ್ಕಾö್ಯನಿಂಗ್ ಘಟಕ ಮಡಿಕೇರಿಯಲ್ಲಿ ಕಾರ್ಯಾಚರಿಸುತ್ತಿದೆ. ಇದೇ ರೀತಿ ಜಿಲ್ಲೆಯ ಜನರಿಗೆ ಸ್ಥಳೀಯವಾಗಿಯೇ ಉನ್ನತ ವೈದ್ಯಕೀಯ ಸೇವೆ ಕೊಡಲು ಎಲ್ಲಾ ರೀತಿಯ ಪ್ರಯತ್ನ ನಡೆಸಲಾಗುತ್ತಿದೆ.
ಡಾ. ಮಂತರ್ ಗೌಡ, ಮಡಿಕೇರಿ ಶಾಸಕ